ಕೊರೊನಾದಿಂದ ಮೃತಪಟ್ಟ ಅಜ್ಜಿ, ಮನೆಯ ಮುಂಭಾಗದಲ್ಲಿ ಪ್ರತ್ಯಕ್ಷ!
ಸ್ಪೇನ್: ಕೊರೊನಾ ವೈರಸ್ ನಿಂದ ಮೃತಪಟ್ಟ ಅಜ್ಜಿಯನ್ನು ಆಸ್ಪತ್ರೆ ಸಿಬ್ಬಂದಿಯೇ ಸುಟ್ಟು ಹಾಕಿದ್ದರು. ಆದರೆ, ಈ ಘಟನೆ ನಡೆದು 10 ದಿನಗಳ ನಂತರ ಸುಟ್ಟು ಹಾಕಲ್ಪಟ್ಟಿದೆ ಎನ್ನಲಾಗಿದ್ದ ಅಜ್ಜಿ ತನ್ನ ಮನೆಗೆ ಬಂದಿದ್ದಾರೆ.
85 ವರ್ಷ ವಯಸ್ಸಿನ ರೊಗೆಲಿಯಾ ಬ್ಲಾಂಕೊ ಹೆಸರಿನ ಅಜ್ಜಿಯನ್ನು ಜನವರಿ 13ರಂದು ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಸೇರಿದ ಕೆಲವೇ ದಿನಗಳಲ್ಲಿ ಅಜ್ಜಿಯ ಸಾವಿನ ಸುದ್ದ ಮನೆಯವರಿಗೆ ತಲುಪಿದೆ. ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸದೇ ಅಜ್ಞಾತ ಸ್ಥಳದಲ್ಲಿ ಇಲ್ಲಿನ ಆಡಳಿತ ಸುಟ್ಟು ಹಾಕಿತ್ತು.
ಅಜ್ಜಿಯನ್ನು ಕಳೆದುಕೊಂಡ ಶೋಕದಲ್ಲಿ ಇಡೀ ಮನೆಯವರು ಇದ್ದರು. ಕೊನೆಯ ಕ್ಷಣದಲ್ಲಿ ಮುಖ ಕೂಡ ನೋಡಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವಿನಿಂದ ಮಕ್ಕಳು ಇದ್ದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ವೊಂದು ಬಂದಿದ್ದು, ಅದರಿಂದ ಅಜ್ಜಿ ಜೀವಂತವಾಗಿ ಕೆಳಗಿಳಿಯುತ್ತಿರುವ ದೃಶ್ಯ ಕಂಡು ಇದು ಸತ್ಯವೋ, ಸುಳ್ಳೋ ಎನ್ನುವುದು ತಿಳಿಯದೇ ಮನೆಯವರು ದಂಗಾಗಿದ್ದಾರೆ.
ರೊಗೆಲಿಯಾ ಬ್ಲಾಂಕೊ ಎಂಬ ಹೆಸರಿನ ಇಬ್ಬರು ವೃದ್ಧೆಯರು ಒಂದೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರಿಂದಾಗಿ ಈ ಗೊಂದಲ ಏರ್ಪಟ್ಟಿದೆ. ಕೊರೊನಾ ಸಂದರ್ಭದಲ್ಲಿ ಇಂತಹ ಘಟನೆ ವಿಶ್ವದಾದ್ಯಂತ ನಡೆದಿದೆ. ಆದರೆ ಇದೀಗ ರೊಗೆಲಿಯಾ ಬ್ಲಾಂಕೊ ಎಂಬ ಅಜ್ಜಿ ಇಂತಹದ್ದೇ ಸುದ್ದಿಯಲ್ಲಿದ್ದಾರೆ.