ಜೈಪುರ ಏರ್ ಪೋರ್ಟಲ್ಲಿ ಸಿಐಎಸ್ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಸ್ಪೈಸ್ ಜೆಟ್ ಮಹಿಳಾ ಉದ್ಯೋಗಿ
ಭದ್ರತಾ ತಪಾಸಣಾ ಕೇಂದ್ರದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಸ್ಪೈಸ್ ಜೆಟ್ ಏರ್ ಲೈನ್ಸ್ ನ ಮಹಿಳಾ ಸಿಬ್ಬಂದಿಯನ್ನು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬೆಳಿಗ್ಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಹಿಳಾ ಸಿಬ್ಬಂದಿಯನ್ನು ಭದ್ರತಾ ತಪಾಸಣೆ ಇಲ್ಲದೇ ಪ್ರವೇಶಿಸದಂತೆ ತಡೆದಾಗ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ ಕವೇಂದ್ರ ಸಿಂಗ್ ಸಾಗರ್ ಹೇಳಿದ್ದಾರೆ.
ಭದ್ರತಾ ತಪಾಸಣೆಗಾಗಿ ಮಹಿಳೆಯನ್ನು ನಿಲ್ಲಿಸಿದಾಗ ಮಹಿಳೆ ಮತ್ತು ಸಿಐಎಸ್ಎಫ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.
ಈ ಸಮಯದಲ್ಲಿ ಮಹಿಳೆಯು ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಬೆಳಿಗ್ಗೆ ಭದ್ರತಾ ತಪಾಸಣೆಗೆ ಯಾವುದೇ ಮಹಿಳಾ ಸಿಬ್ಬಂದಿ ಲಭ್ಯವಿಲ್ಲ.
ಆದ್ದರಿಂದ ಪುರುಷ ಅಧಿಕಾರಿಯನ್ನು ಈ ಕೆಲಸಕ್ಕೆ ನಿಯೋಜಿಸಲಾಗಿತ್ತು ಎಂದು ಅಧಿಕಾರಿ ವಿವರಿಸಿದ್ದಾರೆ.
ಸಿಐಎಸ್ಎಫ್ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮಹಿಳೆ ಅನುರಾಧಾ ರಾಣಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ಅನುರಾಧಾ ಸ್ಪೈಸ್ ಜೆಟ್ ಸಿಬ್ಬಂದಿಯ ಸದಸ್ಯೆಯಾಗಿದ್ದು, ಭದ್ರತಾ ತಪಾಸಣೆಗೆ ಒಳಗಾಗದೆ ವಾಹನ ಗೇಟ್ ಮೂಲಕ ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.