ಕೊರೊನಾದಿಂದ ಮೃತಪಟ್ಟ ಮುಸ್ಲಿಮರ ದೇಹವನ್ನು ದಹನ ವಿಚಾರ: ಕ್ಷಮೆಯಾಚಿಸಿದ ಶ್ರೀಲಂಕಾ
ಕೊರೋನಾ ಕಾಲದಲ್ಲಿ ಮೃತಪಟ್ಟ ಮುಸ್ಲಿಮರ ಶರೀರವನ್ನು ದಫನ ಮಾಡುವ ಬದಲು ಶ್ರೀಲಂಕಾದಲ್ಲಿ ದಹನ ಮಾಡಲಾಗಿತ್ತು. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಜಾಗತಿಕವಾಗಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಶ್ರೀಲಂಕಾದ ಸರ್ಕಾರ ಅದಕ್ಕಾಗಿ ಮುಸ್ಲಿಮರಿಂದ ಕ್ಷಮೆ ಯಾಚಿಸಿದೆ.
ಕೊರೋನಾ ಕಾಲದಲ್ಲಿ ಶ್ರೀಲಂಕಾ ಸರಕಾರ ಅತ್ಯಂತ ಕಠಿಣವಾಗಿ ವರ್ತಿಸಿತ್ತು ಮತ್ತು ಎಲ್ಲಾ ಸಮುದಾಯದವರ ಮೃತ ದೇಹವನ್ನು ದಹನ ಮಾಡುವುದಕ್ಕೆ ಕಡ್ಡಾಯ ಆದೇಶ ಮಾಡಿತ್ತು. ಇದರಿಂದಾಗಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ತೀವ್ರ ನೋವಾಗಿತ್ತು. ಇದೀಗ ಶ್ರೀಲಂಕಾದ ಹೊಸ ಸರಕಾರದ ಈ ಕ್ಷಮೆಯಾಚನೆಗೆ ಮುಸ್ಲಿಂ ಸಮುದಾಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ ಬಲವಂತವಾಗಿ ಮೃತ ದೇಹವನ್ನು ದಹನ ಮಾಡುವ ಪ್ರಕ್ರಿಯೆಗೆ ಕಾರಣರಾಗಿದ್ದ ಅಂದಿನ ಸರಕಾರದ ಮುಖ್ಯಸ್ಥರಾದ ಮೆತಿಕಾ ವಿತರಣೆ ಮತ್ತು ಚೆನ್ನ ಜಯಸೂರ್ಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ನ ವಕ್ತಾರ ಹಿಲ್ ಮಿ ಅಹಮದ್ ಹೇಳಿದ್ದಾರೆ.
ಮುಸ್ಲಿಂ ದಂಪತಿಯ 40 ದಿನದ ಮಗುವನ್ನು ದಹನ ಮಾಡಿರುವ ಕುರಿತಂತೆ ಆ ಕುಟುಂಬಕ್ಕಾದ ನೋವಿನ ಹಿನ್ನೆಲೆಯಲ್ಲಿ ಪರಿಹಾರಕ್ಕೂ ನ್ಯಾಯಾಲಯದಲ್ಲಿ ಆಗ್ರಹಿಸುವುದಾಗಿ ಅವರು ಹೇಳಿದ್ದಾರೆ. ಆಗಿನ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರು ಈ ಕುಖ್ಯಾತ ಆದೇಶವನ್ನು ಹೊರಡಿಸಿದ್ದರು. 2021ರಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮನವಿಯಂತೆ ಆ ಬಳಿಕ ಬಲವಂತದ ದಹನ ಕ್ರಿಯೆಯನ್ನು ನಿಲ್ಲಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth