ಮಾಂಸಾಹಾರಿ ಎಂದು ಪದೇ ಪದೇ ಅವಮಾನಿಸಿದ ಪ್ರಿಯಕರ: ಅವಮಾನ ಸಹಿಸಲಾರದೇ ಏರ್ ಇಂಡಿಯಾ ಪೈಲಟ್ ಸಾವಿಗೆ ಶರಣು
ಮುಂಬೈ: ಆಹಾರ ಪದ್ಧತಿಯನ್ನು ಬದಲಿಸಿ, ಮಾಂಸಾಹಾರ ತ್ಯಜಿಸುವಂತೆ ಪ್ರಿಯಕರನ ಒತ್ತಡ ಅವಮಾನ ಸಹಿಸಲಾರದೇ ಏರ್ ಇಂಡಿಯಾ ಪೈಲಟ್ ಸಾವಿಗೆ ಶರಣಾಗಿರುವ ಘಟನೆ ಮುಂಬೈನ ಅಂಧೇರಿಯ ಮರೋಲ್ ಪ್ರದೇಶದಲ್ಲಿ ನಡೆದಿದೆ.
ಸೃಷ್ಟಿ ತುಲಿ(25) ಸಾವಿಗೆ ಶರಣಾದ ಪೈಲಟ್ ಆಗಿದ್ದು, ಪ್ರಿಯಕರ ಆದಿತ್ಯ ಪಂಡಿತ್(27) ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಯಾಗಿದ್ದಾನೆ.
ಉತ್ತರ ಪ್ರದೇಶ ಮೂಲದ ಸೃಷ್ಟಿ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದ ವೇಳೆ ಆದಿತ್ಯನನ್ನು ಭೇಟಿಯಾಗಿದ್ದು, ಇವರ ಸ್ನೇಹ ಪ್ರೀತಿಗೆ ಬದಲಾಗಿತ್ತು. ಆದರೆ ಆದಿತ್ಯ ಪಂಡಿತ್ ತನ್ನ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಸೃಷ್ಟಿಯ ಮೇಲೆ ಹೇರಲು ಆರಂಭಿಸಿದ್ದು, ಆಕೆಯನ್ನು ಮಾಂಸಾಹಾರಿ ಎಂದು ಪದೇ ಪದೇ ನಿಂದಿಸುತ್ತಿದ್ದ ಎನ್ನಲಾಗಿದೆ.
ಅತ್ತ ಪ್ರೀತಿಯನ್ನು ತ್ಯಜಿಸಲಾಗದೇ ಇತ್ತ ಮಾಂಸಾಹಾರವನ್ನು ತ್ಯಜಿಸಲಾಗದ ಸೃಷ್ಟಿ ಕೊನೆಗೆ ತನ್ನ ಪ್ರಾಣವನ್ನೇ ತ್ಯಜಿಸಿದ್ದಾಳೆ. ಮುಂಜಾನೆ ದೆಹಲಿಗೆ ತೆರಳುತ್ತಿದ್ದ ಪ್ರಿಯಕರ ಆದಿತ್ಯನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಹೀಗಾಗಿ ಆದಿತ್ಯ ಫ್ಲ್ಯಾಟ್ ಗೆ ಬಂದಿದ್ದು, ಈ ವೇಳೆ ಡೇಟಾ ಕೇಬಲ್ ನಿಂದ ಸೃಷ್ಟಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಆದಿತ್ಯನು ಸೃಷ್ಟಿಗೆ ಪದೇ ಪದೇ ಮಾಂಸಾಹಾರ ಸೇವನೆ ಬಿಡುವಂತೆ ಒತ್ತಡ ಹಾಕುತ್ತಿದ್ದ, ಆಕೆಯನ್ನು ಪದೇ ಪದೇ ಇದೇ ವಿಚಾರ ಎತ್ತು ನಿಂದಿಸುತ್ತಿದ್ದ. ಈ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳ ನಡೆದಿತ್ತು ಎಂದು ಸೃಷ್ಟಿಯ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಮಾಂಸಾಹಾರ ವಿರೋಧಿ ಆದಿತ್ಯ ಪಂಡಿತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 108(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: