ಮುಗಿಲೆತ್ತರದ ಮಾದಪ್ಪ: 108 ಮಲೆಮಹದೇಶ್ವರನ ಪ್ರತಿಮೆ 18ಕ್ಕೆ ಸಿಎಂ ಲೋಕಾರ್ಪಣೆ!!
ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ 108 ಅಡಿ ಮಲೆಮಹದೇಶ್ವರನ ಪ್ರತಿಮೆ ಇದೇ 18 ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಅಸಂಖ್ಯಾತ ಭಕ್ತರ ಪಾಲಿನ ದೈವ ‘ಮಾಯ್ಕರ ಮಾದಪ್ಪ’ನ ನೆಲದಲ್ಲಿ ಮುಗಿಲೆತ್ತರದಲ್ಲಿರುವ 108 ಅಡಿ ಪ್ರತಿಮೆ ಮೊದಲನೇ ಹಂತದ ಕಾಮಗಾರಿ ಮುಗಿದಿದ್ದು ಮುಖ್ಯಮಂತ್ರಿ, ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಬಸವರಾಜ ಬೊಮ್ಮಾಯಿ ಮಾ.18ರಂದು ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆ ಆಗಲಿದೆ.
₹20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ.
ತರಾತುರಿ ಕಾರ್ಯಕ್ರಮ ಆರೋಪ:
ಚುನಾವಣಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತರಾತುರಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಒಂದು ಹಂತದ ಕಾಮಗಾರಿಯಷ್ಟೇ ಮುಗಿದಿದೆ. ಅಷ್ಟರಲ್ಲೇ, ಉದ್ಘಾಟನಾ ಭಾಗ್ಯ ಕಾಣುತ್ತಿದೆ. ಪ್ರಸ್ತುತ ಹುಲಿಯ ಮೇಲೆ ಕುಳಿತ 108 ಅಡಿ ಎತ್ತರದ ಸ್ವಾಮಿಯ ಮೂರ್ತಿ ಮಾತ್ರ ಪೂರ್ಣಗೊಂಡಿದೆ. ಪ್ರತಿಮೆ ಕೆಳಗೆ ಪೀಠ ನಿರ್ಮಾಣ ಮಾಡಲಾಗಿದ್ದು, ಗುಹೆಯಂತಿರುವ ಈ ಸ್ಥಳದಲ್ಲಿ ನಿರ್ಮಿತಗೊಳ್ಳುತ್ತಿರುವ ಮಹದೇಶ್ವರರ ಜೀವನ ಚರಿತ್ರೆ ಸಾರುವ ಮ್ಯೂಸಿಯಂ ಕಾಮಗಾರಿ ಮುಗಿದಿಲ್ಲ, ಇಲ್ಲಿಗೆ ಭಕ್ತರು ಬರಲು ಸಮರ್ಪಕವಾದ ರಸ್ತೆ ನಿರ್ಮಾಣವಾಗಿಲ್ಲ, ಕುಡಿಯುವ ನೀರು, ಶೌಚಗೃಹ, ವಾಹನ ಪಾರ್ಕಿಂಗ್ ಮತ್ತು ಮೂಲಸೌಕರ್ಯಗಳಿಲ್ಲ ಈ ರೀತಿ ಇಲ್ಲಗಳ ನಡುವೆ ಕಣ್ಣಿಗೆ ದೊಡ್ಡದಾಗಿ ಕಾಣುವಂತೆ ಸಿದ್ಧಗೊಂಡಿರುವ 108 ಅಡಿ ಪ್ರತಿಮೆಯನ್ನು ಮಾತ್ರ ಉದ್ಘಾಟಿಸುತ್ತಿರುವುದು ಏತಕ್ಕೆ..? ಎಂದು ಭಕ್ತರು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಕಾಲದಲ್ಲಿ ಧಾರ್ಮಿಕ ಕ್ಷೇತ್ರವೂ ಬಳಕೆಯಾಗುತ್ತಿರುವುದು ವಿಪರ್ಯಾಸವಾಗಿದೆ.