ಅವನು ರಕ್ತಕಾರಿ ಸಾಯಲಿ, ಲಾಟರಿ ಬಹುಮಾನ ಬರಲಿ ಸೇರಿದಂತೆ ನಾರಾಯಣನಿಗೆ ವಿಚಿತ್ರ ಬೇಡಿಕೆಗಳು!!!
ಚಾಮರಾಜನಗರ: ದೇವರಿಗೆ ನಾನಾ ಬಗೆಯ ಕೋರಿಕೆಗಳು, ಪ್ರಾರ್ಥನೆಗಳು ಸಲ್ಲಿಸಿರುವುದು, ಬೇಡಿಕೆ ಪತ್ರಗಳನ್ನು ನೀವು ನೋಡಿರುತ್ತೀರಿ. ಆದರೆ, ಇಲ್ಲೋರ್ವ ಒಂದು ಕುಟುಂಬ ಸರ್ವನಾಶ ಆಗಲೆಂಬ ವಿಚಿತ್ರ, ಆಘಾತಕಾರಿ ಬೇಡಿಕೆಯನ್ನು ದೇವರಿಗೆ ಸಲ್ಲಿಸಿದ್ದಾನೆ.
ಹೌದು…, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದ ಹುಂಡಿ ಎಣಿಕೆಯು ಇಂದು ನಡೆದಿದ್ದು ಈ ವೇಳೆ ಭಕ್ತರ ಕೋರಿಕೆ ಪತ್ರಗಳು ಸಿಕ್ಕಿದೆ. ಅದರಲ್ಲಿ, ಬಳ್ಳಾರಿ ಜಿಲ್ಲೆ ನಮೂದಿಸಿರುವ ಭಕ್ತನೋರ್ವ “ಹನುಮಾರ್ ರಾಮ ನಾಯಕ ಎಂಬಾತ ಬಾಯಲ್ಲಿ ರಕ್ತ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಬೇಕು, ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು, ಅವರುಗಳು ನಮ್ಮ ಮನೆಯ ಹತ್ತಿರವೇ ಬಾರದ ಹಾಗೆ ಮಾಡಬೇಕು, ಇವರೆಲ್ಲರೂ ಒಂದು ವರ್ಷದ ಒಳಗೆ ಸಾಯಬೇಕು ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ.
ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಈ ರೀತಿ ಎಲ್ಲಾ ಬೇಡಿಕೆ ಇರುತ್ತವೆಯೇ..? ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ..? ಎಂದು ಹೌಹಾರಿದ್ದಾರೆ.
ಅಂತರ ಧರ್ಮ ಪ್ರೀತಿ: ದೇವರಿಗೆ ಒಂದು ಅಂತರ ಧರ್ಮೀಯ ಪ್ರೀತಿ ಪತ್ರವೂ ಸಿಕ್ಕಿದೆ. ಅದರಲ್ಲಿ, ಯುವತಿಯೊಬ್ಬಳು ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು, ನಾನು ಹಿಂದೂ ಅವನು ಮುಸ್ಲಿಮ್ ಆದರೆ ನಾನು ತಪ್ಪು ಮಾಡುತ್ತಿಲ್ಲ ನನಗೆ ಅವನಿಷ್ಟ ಅವನಿಗೆ ನಾನ್ ಇಷ್ಟ ನನ್ನ ಜೀವನವೇ ಅವನು, ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳೊಮ್ಮೆ ನಿನ್ನ ಸನ್ನಿಧಿಗೆ ಬರುವೆ ಎಂದು ಯುವತಿ ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದಾರೆ.
ಮತ್ತೊಂದು ಕಾಗದದಲ್ಲಿ’ ನರಸಿಂಹ ಸ್ವಾಮಿ ಈ ನಂಬರುಗಳಿಗೆ ಮೊದಲನೇ ಬಹುಮಾನ ಬರುವಂತೆ ಮಾಡು ನಿನ್ನ ಹುಂಡಿಗೆ 101 ರೂ. ಹಾಕುವುದಾಗಿ ಲಾಟರಿ ಟಿಕೆಟ್ ನಂಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾನೆ.
ಇನ್ನು, ದೇಗುಲದ ಹುಂಡಿಯಲ್ಲಿ 1,87,565 ಹಣ ಸಂಗ್ರಹವಾಗಿದೆ ಎಂದು ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw