ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಸಾವಿಗೆ ಶರಣು

05/12/2023
ಶಿವಮೊಗ್ಗ: ಕಾಲೇಜು ಕಟ್ಟಡದ ಮೇಲಿನಿಂದ ವಿದ್ಯಾರ್ಥಿನಿಯೋರ್ವಳು ಹಾರಿ ಸಾವಿಗೆ ಶರಣಾಗಿರುವ ಘಟನೆ ಆದಿ ಚುಂಚನಗಿರಿ ಕಾಲೇಜಿನಲ್ಲಿ ನಡೆದಿದೆ.
ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿ ಚುಂಚನಗಿರಿ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ದಾವಣಗೆರೆ ಚೆನ್ನಗಿರಿ ತಾಲೂಕಿನ ಚೆನ್ನಾಪುರ ನಿವಾಸಿ ಮೇಘಾ ಶ್ರೀ(17) ಸಾವಿಗೆ ಶರಣಾದ ಬಾಲಕಿಯಾಗಿದ್ದಾಳೆ.
ಬಯಾಲಜಿ ಪರೀಕ್ಷೆಗೆಂದು ಪರೀಕ್ಷಾ ಕೊಠಡಿಗೆ ತೆರಳಿದ್ದ ಮೇಘಾ ಶ್ರೀ, ವಾಶ್ ರೂಮ್ ಗೆ ಹೋಗುವುದಾಗಿ ಹೇಳಿ ಕಟ್ಟಡ ಮೇಲೆ ಬಂದಿದ್ದು, ಬಳಿಕ ಕಟ್ಟಡದಿಂದ ಹಾರಿರುವುದಾಗಿ ಹೇಳಲಾಗಿದೆ.
ಕಟ್ಟಡದಿಂದ ಬಿದ್ದಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿದ್ದಳು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಪೋಷಕರು ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.