ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್: ನಳಿನ್‍ಕುಮಾರ್ ಕಟೀಲ್ ಅಭಿನಂದನೆ
ಬೆಂಗಳೂರು: ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ 2023-24ನೇ ಸಾಲಿನ ರಾಜ್ಯ ಆಯವ್ಯಯ ಪತ್ರವನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಚೇತರಿಕೆಗಿಂತ ತೀವ್ರಗತಿಯಲ್ಲಿ ಭಾರತ ಪುಟಿದೆದ್ದಿದೆ. ಇದೇ ಹಾದಿಯಲ್ಲಿ ಕರ್ನಾಟಕವೂ ದೃಢವಾಗಿ ಮುನ್ನಡೆಯುತ್ತಿದೆ. ಈ ಆಯವ್ಯಯವು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಉಜ್ವಲ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸಾರ್ಥಕ ಭಾವದೊಂದಿಗೆ, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯಗಳು, ಗುರಿಗಳು ಹಾಗೂ ಫಲಿತಾಂಶಗಳ ದೂರದೃಷ್ಟಿಯೊಂದಿಗೆ ಈ ಆಯವ್ಯಯವನ್ನು ಮುಖ್ಯಮಂತ್ರಿಯವರು ಮಂಡಿಸಿದ್ದಾರೆ. ಅಲ್ಲದೆ, ಅದರ ಅನುಷ್ಠಾನದ ಕುರಿತು ಸ್ಪಷ್ಟತೆಯನ್ನೂ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರ್ಕಾರವು, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಸತತವಾಗಿ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. ಈ ವರ್ಷದ ಕೇಂದ್ರ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಆಯವ್ಯಯದಲ್ಲಿ 5,300 ಕೋಟಿ ರೂ. ಒದಗಿಸಿರುವುದು, ರೈಲ್ವೆ ಯೋಜನೆಗಳಿಗೆ ಅತಿ ಹೆಚ್ಚು ಅಂದರೆ, 7,561 ಕೋಟಿ ರೂ. ಒದಗಿಸಿರುವುದು, ಕರಾವಳಿ ನಿಯಂತ್ರಣ ವಲಯದ ನಿಬರ್ಂಧಗಳನ್ನು ಸಡಿಲಿಸಿ, ಕರಾವಳಿಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿರುವುದು, ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಬೆಂಬಲ ಡಬಲ್ ಇಂಜಿನ್ ಸರ್ಕಾರದ ಕ್ರಿಯಾಶೀಲತೆಗೆ ನಿದರ್ಶನ ಎಂಬುದನ್ನು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಮುಂದಿನ 25 ವರ್ಷಗಳು ಅಮೃತ ಕಾಲ, ಕರ್ತವ್ಯದ ಕಾಲ ಎಂದು ಕರೆ ನೀಡಿದ್ದಾರೆ. ಭವ್ಯ ಕರ್ನಾಟಕ ನಿರ್ಮಾಣ ಮಾಡುವ ಆಶಯ ಈ ಆಯವ್ಯಯದ್ದಾಗಿದೆ. ಸ್ವಸ್ಥ, ಸುಶಿಕ್ಷಿತ, ಸ್ವಾವಲಂಬಿ, ಸ್ವಾಭಿಮಾನಿ ಸಮಾಜ ನಿರ್ಮಾಣದ ಮೂಲಕ ಅಭಿವೃದ್ಧಿಯ ಅಮೃತ ಎಲ್ಲರೂ ಸವಿಯುವಂತಾಗಬೇಕು. ಇಂತಹ ಭವಿಷ್ಯದ ಮುನ್ನೋಟವಿರುವ, ವಾಸ್ತವದ ಸವಾಲುಗಳನ್ನು ಮೆಟ್ಟಿ, ಸಮೃದ್ಧ ಕರ್ನಾಟಕದ ಗುರಿಯನ್ನು ಸಾಧಿಸುವ ಹಂಬಲದೊಂದಿಗೆ ಈ ಆಯವ್ಯಯವನ್ನು ಮಂಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ವಿವರಿಸಿದ್ದು ಅರ್ಥಪೂರ್ಣ ಎಂದು ಅವರು ವಿಶ್ಲೇಷಿಸಿದ್ದಾರೆ.
2022-23ರಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿಯು ಸದೃಢವಾಗಿದ್ದು, ಉತ್ತಮ ಬೆಳವಣಿಗೆ ಕಂಡಿದೆ. ಆರ್ಥಿಕ ಚಟುವಟಿಕೆಗಳ ವೃದ್ಧಿಯಿಂದ ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ. ಮೋಟಾರು ವಾಹನಗಳ ತೆರಿಗೆ ಮತ್ತು ಮುದ್ರಾಂಕ ಮತ್ತು ನೋಂದಣಿ ಶುಲ್ಕವು ಸಹ ಹೆಚ್ಚಳವಾಗಿರುತ್ತದೆ. ಒಟ್ಟಾರೆಯಾಗಿ, ಆರ್ಥಿಕ ವರ್ಷ 2021-22ಕ್ಕೆ ಹೋಲಿಸಿದರೆ ಜನವರಿ ಅಂತ್ಯದವರೆಗೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹವು ಶೇ. 21 ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ನೇರ ಮತ್ತು ಪರೋಕ್ಷ ತೆರಿಗೆಯ ಹೆಚ್ಚಳದಿಂದ ರಾಜ್ಯದ ತೆರಿಗೆ ಪಾಲು 4,813 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಮುಂದುವರೆದು ಕೇಂದ್ರ ಸರ್ಕಾರವು 2023-24 ನೇ ಸಾಲಿಗೆ ರಾಜ್ಯಕ್ಕೆ 37,252 ಕೋಟಿ ರೂ.ಗಳ ತೆರಿಗೆ ಪಾಲನ್ನು ಅಂದಾಜಿಸಿದೆ. ಇದು 2022-23ರ ಆಯವ್ಯಯ ಅಂದಾಜಿಗೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರವು ರಾಜ್ಯದ ತೆರಿಗೆ ಪಾಲನ್ನು ಹೆಚ್ಚಿಸಿರುವುದರಿಂದ ರಾಜ್ಯ ಸರ್ಕಾರವು ವಿತ್ತೀಯ ಸುಸ್ಥಿರತೆಯನ್ನು ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಅತ್ಯಂತ ಆಶಾದಾಯಕ ಅಂಶ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಸ್ವಂತ ರಾಜಸ್ವ ಸಂಗ್ರಹಣೆ ಮತ್ತು ಕೇಂದ್ರ ಸರ್ಕಾರದ ತೆರಿಗೆ ಪಾಲಿನ ಹೆಚ್ಚಳವು 2022-23ರ ಪರಿಷ್ಕೃತ ಅಂದಾಜಿನಲ್ಲಿ ರಾಜ್ಯದ ರಾಜಸ್ವ ಕೊರತೆಯನ್ನು 8,703 ಕೋಟಿ ರೂ.ಗಳಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರೊಂದಿಗೆ ವಿತ್ತೀಯ ಸುಸ್ಥಿರತೆಯ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಂದಾಜಿಸಿದ ಸಾಲವನ್ನು ಪೂರ್ಣಪ್ರಮಾಣದಲ್ಲಿ ಪಡೆಯದೆ ನಿಯಂತ್ರಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವು ಅನುಷ್ಠಾನಗೊಳಿಸಿದ ಹಲವಾರು ಪ್ರಗತಿಪರ ನೀತಿಗಳ ಪರಿಣಾಮವಾಗಿ ಹಾಗೂ ವಿತ್ತೀಯ ಕ್ರೋಡೀಕರಣ ಮತ್ತು ವಿತ್ತೀಯ ಶಿಸ್ತಿಗೆ ತೋರಿದ ಅಚಲ ಬದ್ಧತೆಯಿಂದಾಗಿ ರಾಜ್ಯದ ಆರ್ಥಿಕತೆಯನ್ನು ಪುನಃ ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗಿದೆ. ರಾಜಸ್ವ ಸಂಗ್ರಹಣೆ ಇಲಾಖೆಗಳಿಗೆ ತೆರಿಗೆ ಸಂಗ್ರಹಣೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿ ಹಾಗೂ ತೆರಿಗೆ ಸಿಬ್ಬಂದಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿ, ರಾಜ್ಯದ ರಾಜಸ್ವಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ನಮ್ಮ ಸರ್ಕಾರದ ಸಂಘಟಿತ ಪ್ರಯತ್ನಗಳ ಫಲವಾಗಿ ಇಂದು, ನಾನು ಈ ಘನ ಸದನದಲ್ಲಿ 2023-24ನೇ ಸಾಲಿನ ಆಯವ್ಯಯವನ್ನು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002ರ ಎಲ್ಲಾ ಮಾನದಂಡಗಳನ್ನು ಪೂರೈಸುವ ಮೂಲಕ ರಾಜಸ್ವ ಹೆಚ್ಚಳದ ಆಯವ್ಯಯವನ್ನು ಮಂಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮಂತ್ರದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಇತರ ದುರ್ಬಲ ವರ್ಗದವರ ಸ್ವಾಭಿಮಾನದ, ಸ್ವಾವಲಂಬನೆಯ ಬದುಕಿಗೆ ಬೆಂಬಲ ನೀಡುವ ಬಜೆಟ್ ಇದಾಗಿದೆ. ಎಲ್ಲ ವರ್ಗದ, ಎಲ್ಲ ಸಮುದಾಯಗಳ ಜನರಿಗೆ ಒಳಿತುಂಟು ಮಾಡಿ ರಾಜ್ಯದ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಬೊಮ್ಮಾಯಿಯವರು ಮುಂದಡಿ ಇಟ್ಟಿದ್ದಾರೆ. ವಿರೋಧ ಪಕ್ಷದವರು ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು’ ಎಂಬಂತೆ ಟೀಕಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw