ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ಗೆ  ಮುತ್ತಿಗೆ - Mahanayaka
6:05 AM Thursday 12 - December 2024

ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ಗೆ  ಮುತ್ತಿಗೆ

protest
13/03/2023

ಕಳಸ: ಇಡಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೈಲು ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಮಂಜೂರಾದ ಆನೆಕಾಡು ನೀರಿನ ಯೋಜನೆಯ ಕಾಮಗಾರಿ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಹಿರೇಬೈಲು ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮರಸಣಿಗೆ ಗ್ರಾಮ ವ್ಯಾಪ್ತಿಯ ಆನೆಕಾಡು ಪ್ರದೇಶದಿಂದ ಹಿರೇಬೈಲು ಗ್ರಾಮಕ್ಕೆ ನೀರು ಪೂರೈಸಲು 48 ಲಕ್ಷ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು ಈ ವೇಳೆಗೆ ಪೂರ್ಣಗೊಳ್ಳಬೇಕಿತ್ತು.ಆದರೆ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು ಹಿರೇಬೈಲಿಗೆ ನೀರು ತಲುಪುವ ಆಶಾಭಾವನೆ ಇಲ್ಲ.ನಾವು ಬೇಸಿಗೆಯಲ್ಲಿ ಕುಡಿಯುವ ನೀರು ಇಲ್ಲದೆ ಬಳಲುತ್ತಿದ್ದೇವೆ.ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಜಗದೀಶ್ ಭಂಡಾರಿ ಹಿರೇಬೈಲಿಗೆ ನೀರು ಕೊಡಲು ಆನೆಕಾಡು ಯೋಜನೆ ಕಾಮಗಾರಿ ಆರಂಭ ಮಾಡಲಾಗಿತ್ತು.ಆದರೆ ಗುತ್ತಿಗೆದಾರ ಕಾಮಗಾರಿ ಮುಗಿಸಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್ಗಳಿಗೆ ಕರೆ ಮಾಡಿದರೂ ಅವರು ಸಮರ್ಪಕ ಉತ್ತರ ಕೊಡುತ್ತಿಲ್ಲ ಎಂದು ಗ್ರಾಮಸ್ಥರಿಗೆ ಸ್ಪಷ್ಟನೆ ನೀಡಿದರು.

ಇದಕ್ಕೆ ತೃಪ್ತರಾಗದ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು.ಕೆಲ ಕಾಲದ ನಂತರ ಸ್ಥಳಕ್ಕೆ ಬಂದ ಕಿರಿಯ ಎಂಜಿನಿಯರ್ ನಟರಾಜ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ಸರ್ಕಾರ ಹಣ ಕೊಟ್ಟರೂ ಕೆಲಸ ಮಾಡಿಸಲು ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಜನರು ಗದರಿದರು.

2 ವಾರದಲ್ಲಿ ಆನೆಕಾಡು ಯೋಜನೆಯ ಪೈಪ್ಲೈನ್ ಕೆಲಸ ಮುಗಿಸಿ ಹಿರೇಬೈಲಿಗೆ ನೀರು ಹರಿಸುವ ಬಗ್ಗೆ ಎಂಜಿನಿಯರ್ ಭರವಸೆ ನೀಡಿದರು.ನಿಮ್ಮ ನ್ನು ನಂಬುವುದಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ, ಪಂಚಾಯಿತಿ ಅಧ್ಯಕ್ಷ ಜಗದೀಶ್ ಮಧ್ಯಪ್ರವೇಶ ಮಾಡಿ 15 ದಿನದಲ್ಲಿ ನೀರು ಪೂರೈಸುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರು, ಲೂಯಿಸ್, ಅಜಿತ್, ರುಕ್ಮಿಣಿ, ಸುಶೀಲ ರಾಜೇಶ್, ಸುರೇಶ್ ಮುಂತಾದವರು ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ