ರಸ್ತೆಯೋ, ಈಜುಕೊಳವೋ?: ಸುರತ್ಕಲ್-ಕಾನ-ಬಾಳ-ಎಂಆರ್ ಪಿಎಲ್ ರಸ್ತೆ ಅವ್ಯವಸ್ಥೆ ವಿರುದ್ಧ ಆಕ್ರೋಶ
ಸುರತ್ಕಲ್: ಸುರತ್ಕಲ್ ಕಾನ ಎಂಆರ್ ಪಿಎಲ್ ನ 4.5ಕಿ.ಮೀ. ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದೆ. ತಕ್ಷಣ ರಸ್ತೆಯನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಬೇಕೆಂದು ಡಿವೈಎಫ್ ಐ ನಿಯೋಗವು ಇಂದು ಮಹಾನಗರಪಾಲಿಕೆಯ ಸುರತ್ಕಲ್ ವಲಯ ಆಯುಕ್ತೆಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ರಸ್ತೆಯನ್ನು ಎಂಆರ್ ಪಿಎಲ್,ಬಿಎಎಸ್ ಎಫ್, ಎಚ್ ಪಿಸಿಎಲ್, ಸೆಝ್ ಮುಂತಾದ ಬೃಹತ್ ಕೈಗಾರಿಕಾ ಸ್ಥಾವರಗಳಿಗೆ ಬರುವ ಬೃಹತ್ ಘನ ವಾಹನಗಳು ಈ ರಸ್ತೆಯನ್ನು ಯಥೇಚ್ಚವಾಗಿ ಬಳಕೆ ಮಾಡಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಹೊಂಡ ಗುಂಡಿಗಳು ಸೃಷ್ಟಿಯಾಗಿ ದ್ವಿಚಕ್ರ ವಾಹನ ಸವಾರರು ನಿತ್ಯ ಅಪಘಾತಾಕ್ಕೆ ಈಡಾಗುತ್ತಿದ್ದಾರೆ. ಕಾರು ಸಹಿತ ಲಘು ವಾಹನಗಳು ಜಖಂ ಗೊಂಡು ಹಾನಿಗೊಳಗಾಗುತ್ತಿದೆ. ಕೆಸರು ಧೂಳಿನಿಂದಾಗಿ ಪಾದಚಾರಿಗಳಿಗೂ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಿದೆ.
ಈ ಹಿಂದೆ 2016ರಲ್ಲಿ ಡಿವೈಎಫ್ ಐ ನೇತೃತ್ವದ ನಾಗರಿಕಹೋರಾಟ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ಹೋರಾಟ ಮಾಡಿದ ಪ್ರತಿಫಲವಾಗಿ 2018ರಲ್ಲಿ ಸುರತ್ಕಲ್ ನಿಂದ ಎಂಆರ್ ಪಿಎಲ್ ವರೆಗೆ 4.5 ಕಿಮೀ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 60ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಆದರೆ ಬದಲಾದ ರಾಜಕೀಯ ಕಾರಣಕ್ಕಾಗಿ ಟೆಂಡರ್ ರದ್ದುಗೊಳಿಸಿದ ಮಹಾ ನಗರಪಾಲಿಕೆ ಇದುವರೆಗೂ ಈ ರಸ್ತೆಯ ಅಭಿವೃದ್ಧಿ ಮಾಡದೆ ಕೇವಲ ತೇಪೆ ಕೆಲಸಕ್ಕೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡಿದೆ. ಈ ಹಿನ್ನೆಲೆಯಲ್ಲಿ ಮಹಾ ನಗರಪಾಲಿಕೆ ಕೂಡಲೇ ಸುರತ್ಕಲ್ ಕಾನ-ಬಾಳ-ಎಂಆರ್ ಪಿಎಲ್ ರಸ್ತೆಯನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು DYFI ಒತ್ತಾಯಿಸಿದೆ.
ಮ.ನ.ಪಾ ನಮ್ಮ ಮನವಿಯನ್ನು ನಿರ್ಲಕ್ಷ್ಯಿಸಿ ಜನರ ಬೇಡಿಕೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಸಾರ್ವಜನಿಕರನ್ನು ಸಂಘಟಿಸಿ ತೀವ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿವೈ ಎಫ್ ಐ ಮನವಿಯಲ್ಲಿ ಎಚ್ಚರಿಕೆಯನ್ನೂ ನೀಡಿದೆ.
ನಿಯೋಗದಲ್ಲಿ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ನಗರ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಸುರತ್ಕಲ್ ಘಟಕ ಅಧ್ಯಕ್ಷ ಬಿ.ಕೆ . ಮಕ್ಸೂದ್, ಮಾಜಿ ಅಧ್ಯಕ್ಷ ಸಲೀಮ್ ಶಾಡೋ ಕಾಟಿಪಳ್ಳ, ಸೈಫರ್ ಆಲಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka