ಗೋಮೂತ್ರದಿಂದ ಕ್ಯಾನ್ಸರ್ ಗೆದ್ದೆ” | ಆಸ್ಕರ್ ಫೆರ್ನಾಂಡಿಸ್ ಬಗ್ಗೆ “ಸುವರ್ಣ ನ್ಯೂಸ್” ಸುಳ್ಳು ಸುದ್ದಿ!

ನವದೆಹಲಿ: ರಾಜ್ಯ ಸಭಾ ಸದಸ್ಯ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರ ಭಾಷಣದ ತುಣುಕನ್ನು ಸುಳ್ಳು ಶೀರ್ಷಿಕೆಗಳನ್ನು ಬಳಸಿಕೊಂಡು ‘ಸುವರ್ಣ ನ್ಯೂಸ್” ಪ್ರಸಾರ ಮಾಡಿರುವುದು ಬೆಳಕಿಗೆ ಬಂದಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಪರ ಸುದ್ದಿ ಸಂಸ್ಥೆ ಎಂದೇ ಕರೆಯಲ್ಪಡುತ್ತಿರುವ ಸುವರ್ಣ ನ್ಯೂಸ್ ನ ಫೇಸ್ ಬುಕ್ ಪುಟದಲ್ಲಿ ವಿಡಿಯೋವೊಂದನ್ನು ಹಾಕಲಾಗಿದ್ದು, ಈ ವಿಡಿಯೋದಲ್ಲಿ , ತಾನು ಗೋಮೂತ್ರದಿಂದ ಕ್ಯಾನ್ಸರ್ ಗೆದ್ದೆ, ಯೋಗದಿಂದ ನನ್ನ ಮಂಡಿ ನೋವು ಹೋಗಿದೆ ಎಂಬ ಶೀರ್ಷಿಕೆಗಳನ್ನು ನೀಡಲಾಗಿತ್ತು. ಜೊತೆಗೆ ರಾಜ್ಯಸಭೆಯಲ್ಲಿ ಗೋಮೂತ್ರದ ಮಹತ್ವ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಸಂಸದ ಆಸ್ಕರ್ ಫೆರ್ನಾಂಡಿಸ್ ಎಂದು ಶೀರ್ಷಿಕೆ ನೀಡಲಾಗಿತ್ತು.
ವಾಸ್ತವವಾಗಿ ಸದನದಲ್ಲಿ ಮಾತನಾಡಿದ್ದ ಆಸ್ಕರ್ ಫೆರ್ನಾಂಡಿಸ್, ತಾವು ಮೀರತ್ ನ ಆಶ್ರಮಕ್ಕೆ ತೆರಳಿದ್ದ ವೇಳೆ ಅಲ್ಲಿ ಕಾರ್ ಡ್ರೈವರ್ ವೊಬ್ಬರು ಗೋಮೂತ್ರದ ಬಗ್ಗೆ ಹೀಗೆ ಹೇಳಿದ್ದರು ಎಂದು ಸದನದಲ್ಲಿ ಹೇಳಿದ್ದಾರೆ. ಆದರೆ ಕಾರ್ ಡ್ರೈವರ್ ನ ಬಗ್ಗೆ ಹೇಳುತ್ತಿದ್ದ ವಿಡಿಯೋವನ್ನು ಕಟ್ ಮಾಡಿ, ಆಸ್ಕರ್ ಅವರೇ ಹೀಗೆ ಹೇಳಿದ್ದಾರೆ. ಅವರು ಗೋಮೂತ್ರದಿಂದಾಗಿ ಕ್ಯಾನ್ಸರ್ ನಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ಬಿಂಬಿಸಿ ವರದಿ ಮಾಡಲಾಗಿದೆ. ಇದರಲ್ಲೂ ಇನ್ನೊಂದು ಮುಖ್ಯ ವಿಚಾರ ಏನೆಂದರೆ, ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕ್ಯಾನ್ಸರ್ ಬಂದೇ ಇಲ್ಲ. ಹೀಗಾಗಿ ಸುವರ್ಣ ನ್ಯೂಸ್ ಶುದ್ಧ ಸುಳ್ಊ ವರದಿ ಮಾಡಿದೆ ಎಂದು ತಿಳಿದು ಬಂದಿದೆ.