ಶಾಸಕ ಹರೀಶ್ ಪೂಂಜ ಮೇಲೆ ದಾಳಿಗೆ ಯತ್ನ: ತಕ್ಕ ಉತ್ತರ ನೀಡುತ್ತೇವೆ: ಬಿಜೆಪಿ
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರ ಮೇಲೆ ದಾಳಿಗೆ ಯತ್ನಿಸಿದ ದುಷ್ಕರ್ಮಿಗಳು ಸಂಚನ್ನು ರೂಪಿಸಿ ಈ ಕಾರ್ಯನಡೆಸಿದ್ದಾರೆ. ಈ ಪೈಶಾಚಿಕ ನಡೆಯನ್ನು ನಡೆಸಿದವರಿಗೆ ಬೆಳ್ತಂಗಡಿ ತಾಲೂಕಿನ 241 ಬೂತ್ ಗಳಿಂದ ಸಾವಿರಾರು ಕಾರ್ಯಕರ್ತರ ಮೂಲಕ ಖಂಡಿಸಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಹೇಳಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ರಾತ್ರಿ ಮಂಗಳೂರಿಂದ ಬೆಳ್ತಂಗಡಿಗೆ ಬರುವ ಮಾರ್ಗಮಧ್ಯೆ ಫರಂಗಿಪೇಟೆಯಲ್ಲಿ ದುಷ್ಕರ್ಮಿಗಳು ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಭಾಜಪಾ ಬೆಳ್ತಂಗಡಿ ಮಂಡಲ ಹಾಗೂ ಎಲ್ಲ ಘಟಕಗಳ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಮ್ಮ ಶಾಸಕರಿಗೆ ಯಾವುದೇ ರೀತಿಯಲ್ಲಿ ಸಂಚುರೂಪಿಸುವ ಹುನ್ನಾರವಿದ್ದರೆ ಬೆಳ್ತಂಗಡಿ ತಾಲೂಕಿನ ಜನತೆ, ಬಿಜೆಪಿ ಕಾರ್ಯಕರ್ತರು ಸಹಿಸುವುದಿಲ್ಲ. ದುಷ್ಕರ್ಮಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಬೇಕು. ಈ ನೆಲೆಯಲ್ಲಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಮಾತನಾಡಿ, ಅಭಿವೃದ್ಧಿಯ ಹರಿಕಾರರಾಗಿ ಹಿಂದು ಪರ ಚಿಂತನೆಯಮೂಲಕ, ಸಮನ್ವಯಿ ಶಾಸಕನ ಬೆಳವಣಿಗೆ ಸಹಿಸಿಕೊಳ್ಳದ ದುಷ್ಕರ್ಮಿಗಳು ಈ ಸಂಚು ರೂಪಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ ರಾಷ್ಟ್ರೀಯ ತನಿಖಾದಳದ ತನಿಖೆಯಿಂದ ದುಷ್ಕರ್ಮಿಗಳ ಅಡಿತಪ್ಪಿದಂತಾಗಿದೆ. ಇದರಿಂದಾಗಿ ಇಂತಹ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕರಿಗೆ ಸರಕಾರ ಕೂಡಲೇ ಸೂಕ್ತ ರಕ್ಷಣೆ ನೀಡಬೇಕು, ಆರೋಪಿಗಳಿಗೆ ಕಠಿಣ ನೀಡಬೇಕು ಎಂದು ಆಗ್ರಹಿಸಿದರು.
ಬಳಿಕ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.
ಪ.ಪಂ. ಅಧದ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಪ್ರಸನ್ನಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಚೆನ್ನಕೇಶ್ ಅರಸಮಜಲು, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ನಾವೂರು, ಸೀತಾರಾಮ್ ಬೆಳಾಲು, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ವಿಹಿಂಪ ಪುತ್ತೂರು ಜಿಲ್ಲಾ ಉಪಾಧ್ಯಾಕ್ಷ ಭಾಸ್ಕರ್ ಧರ್ಮಸ್ಥಳ, ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಯಶವಂತ್ ಬೆಳಾಲು, ಒಬಿಸಿ ಮೋರ್ಚಾ ಅಧ್ಯಕ್ಷ ಪ್ರಭಾಕರ್ ಸವಣಾಲು, ಮಂಡಲ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು, ವಿವಿಧಮೋರ್ಚಾ ಪದಾಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka