‘ಒಂದು ದೇಶ, ಒಂದು ಚುನಾವಣೆ’ ನೀತಿಗೆ ತಮಿಳುನಾಡು ಸರ್ಕಾರ ವಿರೋಧ - Mahanayaka
5:19 AM Friday 20 - September 2024

‘ಒಂದು ದೇಶ, ಒಂದು ಚುನಾವಣೆ’ ನೀತಿಗೆ ತಮಿಳುನಾಡು ಸರ್ಕಾರ ವಿರೋಧ

14/02/2024

ಕೇಂದ್ರ ಸರ್ಕಾರದ ಪ್ರಸ್ತಾವಿತ ‘ಒಂದು ದೇಶ, ಒಂದು ಚುನಾವಣೆ’ ನೀತಿಗೆ ವಿರೋಧ ವ್ಯಕ್ತಪಡಿಸಿರುವ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ, ಇಂದು ವಿಧಾನಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ’ ನೀತಿ ವಿರೋಧಿಸುವ ನಿರ್ಣಯ ಅಂಗೀಕರಿಸಿಕೊಂಡಿದೆ.

‘ಒಂದು ದೇಶ, ಒಂದು ಚುನಾವಣೆ’ ನೀತಿ ಮಾತ್ರವಲ್ಲದೇ, ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಬಾರದು ಎಂಬ ಎರಡು ಪ್ರತ್ಯೇಕ ನಿರ್ಣಯಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

‘ಒಂದು ದೇಶ ಒಂದು ಚುನಾವಣೆ ಯೋಜನೆ ಸಂಪೂರ್ಣವಾಗಿ ಅಪ್ರಾಯೋಗಿಕವಾಗಿದ್ದು, ಸಂವಿಧಾನಕ್ಕೆ ವಿರುದ್ಧವಾಗಿದೆ. ಒಂದೇ ಚುನಾವಣೆಯು ಜನಪ್ರಿಯವಾಗಿ ಚುನಾಯಿತವಾದ ಶಾಸಕಾಂಗಗಳನ್ನು ಬೇಗನೆ ವಿಸರ್ಜಿಸಲು ಕಾರಣವಾಗಬಹುದು. ಯಾವುದೋ ರಾಜ್ಯದಲ್ಲಿ ಸರ್ಕಾರ ಪತನವಾದಾಗ ಏನು ಮಾಡುವುದು?” ಎಂದು ಕೇಳಿದ ಸ್ಟಾಲಿನ್, “ಇದೊಂದು ತಮಾಷೆಯ ವಿಷಯವಾಗಿದೆ.


Provided by

ಸಂಸದೀಯ ಚುನಾವಣೆಗಳನ್ನು ಕೂಡ ಸಹ ಒಂದೇ ಹಂತದಲ್ಲಿ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಸ್ಥಳೀಯ ಸಂಸ್ಥೆಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವಾಗ, ಅವುಗಳಿಗೂ ಚುನಾವಣೆ ನಡೆಸಲಾಗುವುದು ಎಂದು ಹೇಳುವುದು ರಾಜ್ಯದ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ” ಎಂದು ತಿಳಿಸಿದರು.
“ಕ್ಷೇತ್ರ ಪುನರ್ ವಿಂಗಡಣೆ ಮೂಲಕ ತಮಿಳುನಾಡಿನ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವ ತಂತ್ರಗಾರಿಕೆ ನಡೆಯುತ್ತಿದೆ. ಜನಸಂಖ್ಯೆ ಅಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆಯು ಜನಸಂಖ್ಯೆಯನ್ನು ನಿಯಂತ್ರಿಸದ ರಾಜ್ಯಗಳಿಗೆ ಲಾಭದಾಯಕವಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಜನಗಣತಿಯ ಪ್ರಕಾರ ಕ್ಷೇತ್ರಗಳನ್ನು ಪುನರ್ ರಚಿಸಿದರೆ ತಮಿಳುನಾಡಿನ ಪ್ರಾತಿನಿಧ್ಯ ಕಡಿಮೆಯಾಗುತ್ತದೆ.

ಎಲ್ಲ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಗಂಭೀರ ಕ್ರಮಗಳನ್ನು ಕೈಗೊಳ್ಳುವವರೆಗೆ ಕ್ಷೇತ್ರಗಳ ಸಂಖ್ಯೆ ಇದೇ ರೀತಿ ಮುಂದುವರಿಯಬೇಕು.” ಎಂದು ಸಿಎಂ ಸ್ಟಾಲಿನ್ ಒತ್ತಾಯಿಸಿದರು.

ಇತ್ತೀಚಿನ ಸುದ್ದಿ