ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಪಶುವೈದ್ಯರ ತಂಡ: ಪಶುವೈದ್ಯರ ಕಾರ್ಯಕ್ಕೆ ಮೆಚ್ಚುಗೆ - Mahanayaka
6:12 AM Thursday 6 - February 2025

ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಪಶುವೈದ್ಯರ ತಂಡ: ಪಶುವೈದ್ಯರ ಕಾರ್ಯಕ್ಕೆ ಮೆಚ್ಚುಗೆ

leopard
14/02/2023

ಬಾವಿಗೆ ಬಿದ್ದ ಚಿರತೆಯನ್ನು ಪಶುವೈದ್ಯರ ತಂಡವು ರಕ್ಷಣೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಗ್ರಾಮದಲ್ಲಿ ನಡೆದಿದೆ. ಚಿರತೆಯೊಂದು ಬಾವಿಗೆ ಬಿದ್ದಿತ್ತು. ಬಾವಿಗೆ ಬೋನನ್ನು ಇಳಿಸಿ, ಅದರೊಳಗೆ ಚಿರತೆ ಹೋಗುವಂತೆ ಮಾಡಿ ಅದನ್ನು ಹಿಡಿದು ರಕ್ಷಣೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ದಿನವಿಡೀ ಪ್ರಯತ್ನಿಸಿದ್ದರು. ಆದರೆ, ಈ ಪ್ರಯತ್ನ ಫಲಪ್ರದ ಆಗಿರಲಿಲ್ಲ. ಬಳಿಕ ಚಿರತೆ ರಕ್ಷಣಾ ಕಾರ್ಯಕ್ಕೆ ವನ್ಯಜೀವಿ ರಕ್ಷಣಾ ಕಾರ್ಯದಲ್ಲಿ ಪಳಗಿರುವ ಪಶುವೈದ್ಯರ ಮೊರೆ ಹೋಗಲಾಗಿತ್ತು.

ಪಶುವೈದ್ಯರ ತಂಡವು ಬಾವಿಯಲ್ಲೆ ಚಿರತೆಯ ಸ್ಮೃತಿ ತಪ್ಪಿಸಿ, ಬಳಿಕ ಬೋನಿನ ಮೂಲಕ ಅದನ್ನು ಮೇಲಕ್ಕೆತ್ತುವ ಕಾರ್ಯತಂತ್ರ ರೂಪಿಸಿತು. ಆದರೆ, ಬಾವಿಯು ಸಾಕಷ್ಟು ಆಳ ಇದ್ದುದರಿಂದ ಹಾಗೂ ಬಾವಿಯ ತಳ ಭಾಗದಲ್ಲಿ ಚಿರತೆ ಅಡಗಿ ಕುಳಿತಿದ್ದುದರಿಂದ‌ ಅದಕ್ಕೆ‌ ಅರಿವಳಿಕೆ ಚುಚ್ಚುಮದ್ದು ನೀಡುವುದು ಸುಲಭವಾಗಿರಲಿಲ್ಲ.

ಸಾಕಷ್ಟು ಸಮಾಲೋಚನೆ ಬಳಿಕ , ಪಶುವೈದ್ಯರಾದ ಮೇಘನಾ ಅವರನ್ನು ಬೋನಿನಲ್ಲಿ ಬಾವಿಯೊಳಗೆ ಇಳಿಸಿ, ಅಲ್ಲೇ ಅವರು ಚಿರತೆಗೆ ಅರಿವಳಿಕೆ ಮದ್ದು ನೀಡಲು ನಿರ್ಧರಿಸಲಾಯಿತು. ಅರಿವಳಿಕೆ ಮದ್ದು ಹಾರಿಸುವ ಕೋವಿಯೊಂದಿಗೆ ಬೋನು ಸೇರಿದ ಮೇಘನಾ ಅವರನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗಗಳ‌ ನೆರವಿನಿಂದ ಬಾವಿಯೊಳಕ್ಕೆ ನಿಧಾನವಾಗಿ ಇಳಿಸಿದರು. ಮೇಘನಾ ಅವರು ಚಿರತೆಯ ಸಮೀಪಕ್ಕೆ ಸಾಗಿ  ಅದರತ್ತ ಅರಿವಳಿಕೆ ಚುಚ್ಚುಮದ್ದು ಹಾರಿಸಿದರು. ಚಿರತೆ ಸಂಪೂರ್ಣ ಸ್ಮೃತಿ ತಪ್ಪಿರುವುದನ್ನು ಖಾತರಿಪಡಿಸಿಕೊಂಡ ಬಳಿಕ ಅದನ್ನು ಬೋನಿನೊಳಕ್ಕೆ ಹಾಕಿದರು. ಚಿರತೆ ಹಾಗೂ ಮೇಘನಾ ಅವರಿದ್ದ ಬೋನನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲಕ್ಕೆತ್ತಿದರು.

ರಕ್ಷಣೆ ಮಾಡಿದ ಚಿರತೆಯು ಸುಮಾರು ಒಂದು ವರ್ಷ ಪ್ರಾಯದ್ದು. ಅದನ್ನು  ಸುರಕ್ಷಿತವಾಗಿ ಮತ್ತೆ ಕಾಡಿಗೆ ಬಿಡಲಾಯಿತು. ಪಶುವೈದ್ಯರಾದ ಪೃಥ್ವಿ ಹಾಗೂ ನಫೀಸಾ ಅವರು ಈ ಕಾರ್ಯಾಚರಣೆಗೆ ನೆರವು ನೀಡಿದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ