ಜ್ಞಾನದ ಅನಾವರಣಕ್ಕೆ ಸಜ್ಜಾದ ತೇಜಸ್ವಿ ಪ್ರತಿಷ್ಠಾನ: ಇಲ್ಲಿದೆ ಹಲವು ಕುತೂಹಲಕಾರಿ ಸಂಗತಿ - Mahanayaka
8:24 PM Thursday 19 - September 2024

ಜ್ಞಾನದ ಅನಾವರಣಕ್ಕೆ ಸಜ್ಜಾದ ತೇಜಸ್ವಿ ಪ್ರತಿಷ್ಠಾನ: ಇಲ್ಲಿದೆ ಹಲವು ಕುತೂಹಲಕಾರಿ ಸಂಗತಿ

tejaswi pratishthana
26/05/2024

ಕೊಟ್ಟಿಗೆಹಾರ: ಕನ್ನಡದ ಶ್ರೇಷ್ಠ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳ ಸಾಕಾರಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕೀಟ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಸಜ್ಜಾಗಿದ್ದು ಜ್ಞಾನಾಸಕ್ತರನ್ನು ಕೈ ಬೀಸಿ ಕರೆಯುತ್ತಿದೆ.

ಕೀಟಗಳ ಮಹತ್ವ ಸಾರುವ ಕೀಟ ಸಂಗ್ರಹಾಲಯ:

ಮಲೆನಾಡು ಭಾಗದಲ್ಲಿ ಕಂಡು ಬರುವ ನೂರಾರು ಅಪೂರ್ವ ಕೀಟಗಳ ಸಂಗ್ರಹಾಲಯವೂ ಕೀಟ ಲೋಕದ ದರ್ಶನಕ್ಕೆ ಸಜ್ಜಾಗಿದ್ದು ನೈಜ್ಯ ಕೀಟಗಳ ಜೊತೆಗೆ ಕೀಟಗಳಿಗೆ ಸಂಬಂಧಿಸಿದ ಮಾಹಿತಿಗಳು ಇಲ್ಲಿ ಸಿಗಲಿದೆ. ತೇಜಸ್ವಿ ಅವರು ಬರೆದ ಕೀಟಗಳ ಕುರಿತ ಸಾಲುಗಳನ್ನು ಕೀಟ ಸಂಗ್ರಹಾಲಯದಲ್ಲಿ ಹಾಕಲಾಗಿದ್ದು ಕೀಟಗಳ ಬಗ್ಗೆ ಕುತೂಹಲ ಮೂಡಿಸಿ ಕೀಟಗಳ ಮಹತ್ವವನ್ನು ಸಾರಿ ಹೇಳಲು ಕೀಟ ಸಂಗ್ರಹಾಲಯ ಸಜ್ಜಾಗಿದೆ.  ನುರಿತ ಕೀಟ ಶಾಸ್ತ್ರಜ್ಞರ ತಂಡದ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಕೀಟ ಸಂಗ್ರಹಾಲಯವನ್ನು ಮಾಡಲಾಗಿದ್ದು ಕೀಟ ಸಂಗ್ರಹಾಲಯ ಕೀಟ ಜಗತ್ತಿನ ವಿಸ್ಮಯವನ್ನು ತೆರೆದಿಡಲಿದೆ.


Provided by

ಸಾಮಾನ್ಯವಾಗಿ ಕಾಣಸಿಗುವ ಏರೋಪ್ಲೇನ್ ಚಿಟ್ಟೆ, ಹೆಲಿಕ್ಯಾಪ್ಟರ್ ಚಿಟ್ಟೆ, ಜಿರಳೆಗಳು, ಕಣಜಗಳು, ಜೇನುಹುಳು, ವಿವಿಧ ಪತಂಗಗಳು, ಚಿಟ್ಟೆಗಳು, ಜೀರುಂಡೆಗಳ ಜೊತೆಗೆ ಅಪರೂಪವಾಗಿ ಕಾಣ ಸಿಗುವ ಎಲೆ ಹುಳು, ಕಡ್ಡಿ ಹುಳು, ಬಿಸಿಲು ಕುದುರೆ, ವಿವಿಧ ಮಿಡತೆಗಳು ಕೂಡ ಕೀಟ ಸಂಗ್ರಹಾಲಯದ ಪ್ರಮುಖ ಆಕರ್ಷಣೆಯಾಗಿದೆ.

ಇದಿಷ್ಟೆ ಅಲ್ಲದೇ ಕರ್ನಾಟಕದ ರಾಜ್ಯಚಿಟ್ಟೆಯಾದ ಸದರ್ನ್ ಬರ್ಡ್ ವಿಂಗ್ ಚಿಟ್ಟೆ, ಮಹಾರಾಷ್ಟ್ರ ರಾಜ್ಯ ಚಿಟ್ಟೆಯಾದ ಬ್ಲೂ ಮಾರ್ಮನ್ ಚಿಟ್ಟೆ, ಪ್ರಪಂಚದ ಅತ್ಯಂತ ದೊಡ್ಡ ಪತಂಗಗಳಲ್ಲಿ ಒಂದಾದ ಅಟ್ಲಾಸ್ ಪತಂಗ, ಬೆಳದಿಂಗಳ ಪತಂಗಗಳನ್ನು ಕೂಡ ಕೀಟ ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ.

ಜ್ಞಾನಾಸಕ್ತರ ಮನ ತಣಿಸುವ ಅಪೂರ್ವ ವಸ್ತು ಸಂಗ್ರಹಾಲಯ:

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಸಕ್ತಿ, ಹವ್ಯಾಸಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದ್ದು, ಕ್ಯಾಮರಾ ಬೆಳೆದು ಬಂದ ಹಾದಿಯನ್ನು ಪರಿಚಯಿಸುವ ವಿವಿಧ ಬಗೆಯ ಕ್ಯಾಮರಾಗಳು, 19ನೇ ಶತಮಾನದಿಂದ 21 ನೇ ಶತಮಾನದವರೆಗಿನ ವಿವಿಧ ಟೈಪ್ ರೈಟರ್‌ ಗಳು ವಸ್ತು ಸಂಗ್ರಹಾಲಯದಲ್ಲಿವೆ.

ಇದರ ಜೊತೆಗೆ ತೇಜಸ್ವಿ ಅವರು ಬಳಸುತ್ತಿದ್ದ ಸ್ಕೂಟರ್‌ ನ ಮಾದರಿಯೂ ಕೂಡ ವಸ್ತು ಸಂಗ್ರಹಾಲಯದಲ್ಲಿದ್ದು, ಪ್ರಮುಖ ಆಕರ್ಷಣೆಯಾಗಿದೆ. ಇದಿಷ್ಟೆ ಅಲ್ಲದೇ ಮಲೆನಾಡಿನ ಕಲೆ, ಸಂಸ್ಕೃತಿ, ಜನಜೀವನವನ್ನು ಬಿಂಬಿಸುವ ವಿವಿಧ ವಸ್ತುಗಳು, ಲೇಖನಿ ಪರಿಕರಗಳು, ಕಾರುಗಳ ಚಿಕ್ಕ ಮಾದರಿಗಳು, ತಾಳೆಗರಿ, ವಿವಿಧ ಕಲಾವಿದರ ಕಲಾಕೃತಿಗಳು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಅವರ ನೇತೃತ್ವದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದ್ದು ಗತಕಾಲದ ಜನಜೀವನ, ಸಂಸ್ಕೃತಿ, ಕಲೆ, ತಂತ್ರಜ್ಞಾನ ಮುಂತಾದವುಗಳ ಅನಾವರಣಕ್ಕೆ ವಸ್ತು ಸಂಗ್ರಹಾಲಯ ಸಜ್ಜಾಗಿದೆ.

ತೇಜಸ್ವಿ ಕೃತಿಗಳ ಓದಿಗೆ ಗಾಜಿನ ಓದಿನ ಮನೆ:

ಸುತ್ತ ಕಣ್ಣು ಹಾಯಿಸಿದಲ್ಲೆಲ್ಲಾ ಗಾಜಿನ ಗೋಡೆಯಿಂದ ಕಾಣುವ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ತೇಜಸ್ವಿ ಅವರ ಕೃತಿಗಳನ್ನು ಓದುವ ಅಪೂರ್ವ ಅನುಭವವನ್ನು ನೀಡಲು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಓದಿನ ಗಾಜಿನ ಓದಿನ ಮನೆಯನ್ನು ನಿರ್ಮಿಸಲಾಗಿದ್ದು ಪ್ರಶಾಂತವಾದ ಪರಿಸರದಲ್ಲಿ ತೇಜಸ್ವಿ ಅವರ ಕೃತಿಗಳನ್ನು ಓದಬಹುದಾಗಿದೆ. ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ಓದಿನ ಮನೆ ಪ್ರಮುಖ ಆಕರ್ಷಣೆಯಾಗಿದೆ.

ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಚಿಟ್ಟೆ ಉದ್ಯಾನವನ:

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಚಿಟ್ಟೆಗಳನ್ನು ಆಕರ್ಷಿಸಲು ಚಿಟ್ಟೆ ಉದ್ಯಾನವನವನ್ನು ಮಾಡಲಾಗುತ್ತಿದ್ದು ಉತ್ತರಾಣಿ, ನಾಗಲಿಂಗ ಪುಷ್ಪ, ನೇರಳೆ, ಅತ್ತಿ, ಕಣಗಿಲೆ, ಆರ್ಕಿಡ್ ಸೇರಿದಂತೆ ನೂರಾರು ಚಿಟ್ಟೆಗಳನ್ನು ಆಕರ್ಷಿಸುವ ಸಸ್ಯಗಳನ್ನು ನೆಡಲಾಗುತ್ತಿದೆ. ಇದರಿಂದಾಗಿ ಕೀಟ ಸಂಗ್ರಹಾಲಯಕ್ಕೆ ಆಗಮಿಸುವ ವೀಕ್ಷಕರು ತೇಜಸ್ವಿ ಪ್ರತಿಷ್ಠಾನದ ಆವರಣದ ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳನ್ನು ವೀಕ್ಷಿಸಬಹುದಾಗಿದೆ.

ಇದಿಷ್ಟೇ ಅಲ್ಲದೇ ತೇಜಸ್ವಿ ಪ್ರತಿಷ್ಠಾನದ ಮುಂಭಾಗದಲ್ಲಿ ನಿರ್ಮಾಣವಾಗಿರುವ ಉದ್ಯಾನವನದ ಕಾಲುದಾರಿಯಲ್ಲಿ ಸಾಗಿ ರಾಣಿಝರಿ,  ಜಲಪಾತ ಮುಂತಾದ ಕಲಾಕೃತಿಗಳನ್ನು ವೀಕ್ಷಿಸುತ್ತಾ ಹುಲ್ಲುಹಾಸು, ನೀರಿನ ಕಾರಂಜಿ,  ಸಸ್ಯ ವೈವಿಧ್ಯದ ನಡುವೆ ಕೆಲಹೊತ್ತು ಕಾಲ ಕಳೆಯಬಹುದಾಗಿದೆ.

ಆರ್ಕಿಡೇರಿಯಂ ನಿರ್ಮಾಣಕ್ಕೆ ಚಿಂತನೆ:

ಪಶ್ಚಿಮ ಘಟ್ಟಗಳಲ್ಲಿ ಕಾಣ ಗುವ ಆರ್ಕಿಡ್ ಸಸ್ಯಗಳ ಆರ್ಕಿಡೇರಿಯಂ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅಪರೂಪದ ವಿನಾಶದ ಅಂಚಿನಲ್ಲಿರುವ ನಿಸರ್ಗದ ಜೀವಜಾಲದ ಅಮೂಲ್ಯ ಕೊಂಡಿಗಳೆನಿಸಿರುವ ಆರ್ಕಿಡ್ ಪ್ರಭೇದಗಳನ್ನು ಸಂರಕ್ಷಿಸುವ ಆರ್ಕಿಡ್ ಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಆರ್ಕಿಡೇರಿಯಂ  ನಿರ್ಮಾಣ ಮಹತ್ವದ ಚಿಂತನೆಯಾಗಿದೆ.

‘ಕೀಟ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯ ಸಾರ್ವಜನಿಕರ ವೀಕ್ಷಣೆಗೆ ಸಜ್ಜಾಗಿದ್ದು ಕೊನೆಯ ಹಂತದ ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಚಿಟ್ಟೆ ಉದ್ಯಾನವನ ಮತ್ತು ಆರ್ಕಿಡೇರಿಯಂ ನಿರ್ಮಾಣವಾಗಲಿದೆ. ಮಾನ್ಯ ಜಿಲ್ಲಾಧಿಕಾರಿಗಳನ್ನು ಸರ್ಕಾರವೂ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನೇಮಿಸಿದ್ದು  ಚುನಾವಣೆ ನೀತಿಸಂಹಿತೆ ಮುಗಿದ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’

 –ಡಾ.ಸಿ.ರಮೇಶ್, ಸದಸ್ಯ ಕಾರ್ಯದರ್ಶಿಗಳು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಕೊಟ್ಟಿಗೆಹಾರ ಮತ್ತು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ