ತೇಜಸ್ವಿ ಸೂರ್ಯ ಸಹಿತ ನಾಲ್ವರ ವಿರುದ್ಧ ದೂರು ನೀಡಿದ ಕಾಂಗ್ರೆಸ್
ಬೆಂಗಳೂರು: ಕೋಮು ಸೌಹಾರ್ದ ಕದಡುವ ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ರವಿ ಸುಬ್ರಹ್ಮಣ್ಯ, ಗರುಡಾಚಾರ್ ಹಾಗೂ ಸತೀಶ್ ರೆಡ್ಡಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದ ಒತ್ತಾಯಿಸಿ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕಂದ್ ರಾಜ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಕ್ಷಿಣ ವಿಭಾಗದ ಕೊವಿಡ್ ವಾರ್ ರೂಮ್ ನಲ್ಲಿ ಬೆಡ್ ಬ್ಲಾಕಿಂಗ್ ಹಗರಣವಾಗುತ್ತಿದೆ ಎಂದು ಆರೋಪಿಸಿ ಈ ನಾಲ್ವರು ದೈಹಿಕ ಅಂತರ ಕಾಯ್ದುಕೊಳ್ಳದೇ ಗದ್ದಲ ಮಾಡಿದ್ದಾರೆ. ಇದಲ್ಲದೇ ಕೊವಿಡ್ ವಾರ್ ರೂಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 205 ಜನರ ಪೈಕಿ 17 ಮಂದಿಯನ್ನು ಒಂದು ಕೋಮಿಗೆ ಸೇರಿದವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ರವಿಸುಬ್ರಹ್ಮಣ್ಯ ಗದ್ದಲ ನಡೆಸಿ, ಇದೇನು ಮದ್ರಸಾ ನಡೆಸುತ್ತಿದ್ದೀರಾ? ಹಜ್ ಯಾತ್ರೆಗೆ ಕಳುಹಿಸುವ ಯೋಜನೆ ಹಾಕಿಕೊಂಡಿದ್ದೀರಾ? ಎಂದು ಒಂದು ಕೋಮಿನ ವಿರುದ್ಧ ದ್ವೇಷಕಾರಿದ್ದಾರೆ. 17 ಜನರ ಹೆಸರಿನ ಪಟ್ಟಿಯನ್ನು ಮಾಧ್ಯಮ ಗೋಷ್ಠಿಯಲ್ಲಿ ತೋರಿಸಿ ಸಾಮರಸ್ಯ ಕದಡಲಾಗಿದೆ. ಇವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.