'ಹಾಡು' ನಿಲ್ಲಿಸಿದ 'ಗದ್ದರ್': ಗಾಯನ ಲೋಕದಲ್ಲಿ ನೀರವ ಮೌನ - Mahanayaka
12:02 PM Saturday 21 - September 2024

‘ಹಾಡು’ ನಿಲ್ಲಿಸಿದ ‘ಗದ್ದರ್’: ಗಾಯನ ಲೋಕದಲ್ಲಿ ನೀರವ ಮೌನ

06/08/2023

‘ಗದ್ದರ್’ ಎಂದೇ ಖ್ಯಾತರಾಗಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಹಾಗೂ ಜಾನಪದ ಗಾಯಕ ಗುಮ್ಮಡಿ ವಿಠ್ಠಲ್ ರಾವ್ (77) ಅವರು ಇಹಲೋಕ ತ್ಯಜಿಸಿದ್ದಾರೆ.
ತೆಲಂಗಾಣದ ಗುಮ್ಮಡಿ ವಿಠ್ಠಲ್ ರಾವ್ ಅವರು ‘ಗದ್ದರ್’ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. ಅವರು ತೀವ್ರ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆಂದು ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಆರೋಗ್ಯದಲ್ಲಿ ಸುಧಾರಣೆ ಕಾಣದೇ ಗದ್ದರ್ ಅವರು ಹೈದರಾಬಾದ್‌ನ ಅಮೀರ್ ಪೇಟ್‌ನಲ್ಲಿರುವ ಅಪೋಲೋ ಸ್ಪೆಕ್ಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗದ್ದರ್ ಅವರ ಹಾಡುಗಳು ತೆಲಂಗಾಣ ಚಳವಳಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದವು. 2010ರವರೆಗೂ ನಕ್ಸಲ್ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಬಳಿಕ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗಾಗಿ ನಡೆದ ಹೋರಾಟಗಳಲ್ಲಿ ಭಾಗಿಯಾಗಿದ್ದರು.
1949ರಲ್ಲಿ ಆಗಿನ ಅವಿಭಜಿತ ಆಂಧ್ರಪ್ರದೇಶದ, ಈಗಿನ ತೆಲಂಗಾಣದ ತುಪ್ರಾನ್‌ನಲ್ಲಿ ಜನಿಸಿದ ಗದ್ದರ್, ಕ್ರಾಂತಿಕಾರಿ ಕವಿತೆಗಳಿಂದ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಹೆಸರು ಮಾಡಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಚಳವಳಿಯಲ್ಲಿ ಅವರ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನವು ಸಂಚಲನ ಉಂಟುಮಾಡಿತ್ತು.
ಇನ್ನು ಗದ್ದರ್ ಅವರ ನಿಜವಾದ ಹೆಸರು ಗುಮ್ಮಡಿ ವಿಠ್ಠಲ್ ರಾವ್. ಅವರು ನಿಜಾಮಾಬಾದ್ ಮತ್ತು ಹೈದರಾಬಾದ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. 1975ರಲ್ಲಿ ಕೆನರಾ ಬ್ಯಾಂಕ್‌ಗೆ ಸೇರಿದ ಗದ್ದರ್‌ಗೆ ಪತ್ನಿ ವಿಮಲಾ ಮತ್ತು ಮೂವರು ಮಕ್ಕಳಿದ್ದಾರೆ. ಜನ ನಾಟ್ಯಮಂಡಳಿಯ ಸಂಸ್ಥಾಪಕರಲ್ಲಿ ಒಬ್ಬರಾದ ಗದ್ದರ್ ಅವರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಮ್ಮ ಧ್ವನಿಯೊಂದಿಗೆ ಹೋರಾಡಿದರು. ಅವರು ತಮ್ಮ ಹಾಡುಗಳಿಂದ ಜನರನ್ನು ಹುರಿದುಂಬಿಸುತ್ತಿದ್ದರು. ಗದ್ದರ್ ಹಾಡುಗಳು ತೆಲಂಗಾಣ ಚಳವಳಿಗೆ ಜೀವ ತುಂಬಿದ್ದವು.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…


Provided by

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ