ದೇವಸ್ಥಾನಗಳಿಗೆ ಮೊದಲೇ ದೈವರಾಧನೆ ಇತ್ತು: ಉಡುಪಿ ಜಿಲ್ಲಾ ಪಾಣರ ಸಮಾವೇಶದಲ್ಲಿ ನಟ ರಿಷಬ್ ಶೆಟ್ಟಿ
ಉಡುಪಿ: ಉಡುಪಿ ಜಿಲ್ಲಾ ಪಾಣ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲಾ ಪಾಣರ ವಾರ್ಷಿಕೋತ್ಸವ ಸಮಾರಂಭ ಮತ್ತು ಸಮಾವೇಶವನ್ನು ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಮುದಾಯದ ಹಿರಿಯರನ್ನು ಗೌರವಿಸಿ ಮಾತನಾಡಿದ ಚಲನಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ದೈವಾರಾಧನೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಲ್ಲಿ ದೇವಸ್ಥಾನಗಳು ಇರುವ ಮೊದಲೇ ದೈವರಾಧನೆ ಇತ್ತು. ಪ್ರಕೃತಿಯ ಆರಾಧನೆಯನ್ನು ಇಲ್ಲಿನ ಜನ ಮಾಡುತ್ತಿದ್ದರು ಎಂದು ತಿಳಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಂಘದ ಲೋಗೋ ಅನಾವರಣ ಗೊಳಿಸಿದರು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಯಮಿ ಸದಾಶಿವ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಂಡುರಂಗ ಎಸ್.ಪಡ್ಡಂ ವಹಿಸಿದ್ದರು.
2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕೋವಿಡ್ ಸಮಯದಲ್ಲಿ ಕಿಟ್ ವಿತರಿಸಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಗುಡ್ಡ ಪಾಣರ ಮೂಳೂರು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್, ದೈವ ನರ್ತಕರಾದ ಡಾ.ರವೀಶ್ ಪರವ ಪಡು ಮಲೆ, ನಾಗರಾಜ್ ಪಾಣ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಲಾವಿದ ಬೊಗ್ರ ಶೇರಿಗಾರ್, ಉದ್ಯಮಿ ರತ್ನಾಕರ ಶೆಟ್ಟಿ, ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಜಿಲ್ಲಾ ದೈವಾರಾಧನೆ ಸಮಿತಿಯ ಅಧ್ಯಕ್ಷ ಮುನ್ನ ಎರ್ಮಾಳು, ಗೌರವಾಧ್ಯಕ್ಷ ಸಾಧು ಪಾಣ ಮಂಚಿ, ಗೌರವ ಸಲಹೆಗಾರ ಸುಬ್ಬು ಪಾಣ ಕುಕ್ಕೆಹಳ್ಳಿ, ದ.ಕ. ಜಿಲ್ಲಾಧ್ಯಕ್ಷ ಜನಾರ್ದನ ಬುಡೋಳಿ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಸಖಾರಾಮ್, ಸಂಘದ ಮೂಡಬಿದಿರೆ ಅಧ್ಯಕ್ಷ ಪದ್ಮನಾಭ ಮೂಡಬಿದಿರೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎನ್.ಪ್ರಭಾಕರ್ ಉಪಸ್ಥಿತರಿದ್ದರು. ಸಂಘದ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಎಚ್.ಸಖಾರಾಮ್ ಮಾಸ್ತರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು