ಕಾಲ ಮಿತಿಯೊಳಗೆ ಮಾಹಿತಿ ನೀಡದ ತಹಸೀಲ್ದಾರ್ ಗೆ 25 ಸಾವಿರ ರೂ. ದಂಡ: ಚಕ್ಕರ್ ಹೊಡೆದ ಪಿಡಿಒ ಅಮಾನತು
ಚಾಮರಾಜನಗರ: ಕಾಲ ಮಿತಿಯೊಳಗೆ ಮಾಹಿತಿ ನೀಡದ ಕೊಳ್ಳೇಗಾಲ ತಹಸೀಲ್ದಾರ್ ಎಂ.ಮಂಜುಳಾ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 25 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಕೆ.ಎಲ್. ಲಿಂಗರಾಜು ಅವರ ದೂರಿನ ಹಿನ್ನಲೆ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್ ತೆರೆದ ನ್ಯಾಯಾಲಯದಲ್ಲಿ ದಂಡ ವಿಧಿಸಿದ್ದಾರೆ.
ಏನಿದು ಪ್ರಕರಣ?
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಿವಾಸಿ ಕೆ.ಎಲ್. ಲಿಂಗರಾಜು ಎಂಬುವರು 2022ರ ಜ.1 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸಿ, ಕುಣಗಳ್ಳಿ ಗ್ರಾಮದ ಸರ್ವೇ ನಂ.785ರಲ್ಲಿ ವಿಸ್ತೀರ್ಣ 4 ಎಕರೆ 76 ಸೆಂಟು ಇದರ ಖಾತೆ ಆದೇಶ ಸಂಖ್ಯೆ ಕ.ಅ.16/16-17 ಕೋರ್ಟು ಆದೇಶ ದಿ.27.06.2016 ನೇ ಸಾಲು ವಹಿವಾಟು ಸಂಖ್ಯೆ 194ಎಂ.ಆರ್. ನಂಬರ್ ಎಚ್.90 ಇದರ ತಹಸೀಲ್ದಾರ್ ಆದೇಶ ಜೆರಾಕ್ಸ್ ಪ್ರತಿಗಳು ಮತ್ತು ಕಮಲಮ್ಮ, ಚೆನ್ನಶೆಟ್ಟಿ, ಫ್ರಂಕು ಲೂಯಿಸ್, ಇವರುಗಳು ತಹಸೀಲ್ದಾರ್ ಕೋರ್ಟಿಗೆ ಸಲ್ಲಿಸಿದ್ದ ಪ್ರತಿ ಒಂದು ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ದೃಡಿಕರಿಸಿಕೊಡಲು ಕೋರಿದ್ದರು.
ಆದರೆ, ಇದಕ್ಕೆ ತಹಸೀಲ್ದಾರ್ ಸಕಾಲಕ್ಕೆ ಮಾಹಿತಿ ನೀಡದ ಹಿನ್ನಲೆ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪರಿಣಾಮ ರಾಜ್ಯ ಮಾಹಿತಿ ಹಕ್ಕಿನ ಆಯೋಗವು ತಹಸೀಲ್ದಾರ್ ಮಂಜುಳಾ ಅವರಿಗೆ ದಂಡವಿಧಿಸಿದ್ದು. ದಂಡದ ಮೊತ್ತವನ್ನು ಸರ್ಕಾರದ ಲೆಕ್ಕಶೀರ್ಷಿಕೆ ಖಾತೆಗೆ ಜಮಾ ಮಾಡಿಸುವಲ್ಲಿ ಸೂಕ್ತ ಕ್ರಮವಹಿಸುವಂತೆ ಉಪವಿಭಾಗಧಿಕಾರಿ ಗೀತಾ ಹುಡೇದ ಅವರಿಗೆ ಸೂಚಿಸಿದೆ.
ಪಿಡಿಒ ಅಮಾನತು:
ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎನ್. ವಿಶ್ವನಾಥ ಎಂಬುವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಆದೇಶ ಹೊರಡಿಸಿದ್ದಾರೆ.
ಕಳೆದ 22ರಂದು ಬೆಳಗ್ಗೆ 10.40ಕ್ಕೆ ಗ್ರಾಮ ಪಂಚಾಯಿತಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ವೇಳೆ ವಿಶ್ವನಾಥ ಅವರು ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಅಲ್ಲದೇ ಇ-ಸ್ವತ್ತು ಅರ್ಜಿ ವಿಲೇವಾರಿ ಮಾಡದಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ದಾಖಲೆ ಕಡತಗಳ ಸಮರ್ಪಕ ನಿರ್ವಹಣೆ ಮಾಡದೆ ಇರುವುದು ಇತರೆ ಕರ್ತವ್ಯ ಲೋಪಗಳುಕಂಡು ಬಂದ ಹಿನ್ನೆಲೆಯಲ್ಲಿ ಎನ್. ವಿಶ್ವನಾಥ ಅವರನ್ನು ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka