21 ವರ್ಷಗಳ ಹಿಂದೆ ಕಾರು ಕದ್ದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
21 ವರ್ಷಗಳ ಹಿಂದೆ ನಡೆದ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಧೀರ್ ಪ್ರಭು, ಬಂಧಿತ ವ್ಯಕ್ತಿ. ಇವರು ತನ್ನ ಸ್ನೇಹಿತ ಹನೀಫ್ ಎಂಬಾತನ ಜೊತೆಗೂಡಿ 2001 ಮಾರ್ಚ್ 8ರಂದು ಮಂಗಳೂರಿನ ಹಂಪನಕಟ್ಟೆಯಿಂದ ಜಯಂತ ಎಂಬುವವರ ಬಾಡಿಗೆಗೆ ಟಾಟಾ ಸುಮೋ ಕಾರನ್ನು ಪಡೆದುಕೊಂಡು ಸಕಲೇಶಪುರ, ಹಾಸನ ಇತ್ಯಾದಿ ಕಡೆಗಳಲ್ಲಿ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿದ್ದು, 2001 ಮಾರ್ಚ್ 13ರಂದು ಪುತ್ತೂರಿಗೆ ಆಗಮಿಸಿ ಇಲ್ಲಿನ ಆರಾಧನಾ ಟೂರಿಸ್ಟ್ ಹೋಂನಲ್ಲಿ ತಂಗಿದ್ದರು. ಬಾಡಿಗೆ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿಸಿಕೊಂಡಿದ್ದರು. ಬಳಿಕ ಚಾಲಕನಿಗೆ ಬಾಡಿಗೆ ನೀಡದೇ ಆತನನ್ನು ಅಲ್ಲಿಯೇ ತಂಗಲು ಹೇಳಿ ಅದೇ ದಿನ ಸಂಜೆ ಚಾಲಕ ಇಲ್ಲದ ಸಮಯದಲ್ಲಿ ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಕಾರು ಚಾಲಕ ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಾದ ಸುಧೀರ್ ಪ್ರಭು ಮತ್ತು ಹನೀಫ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯದಲ್ಲಿ ಜಾಮೀನು ಪಡೆದ ಆರೋಪಿಗಳು ಬಳಿಕ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ನ್ಯಾಯಾಲಯ ಅವರಿಗೆ ವಾರಂಟ್ ಜಾರಿಗೊಳಿಸಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಹನೀಫ್‍ನನ್ನು 2018ರಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಇನ್ನೋರ್ವ ಆರೋಪಿ ಸುಧೀರ್ ಪ್ರಭುವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ನಗರ ಠಾಣೆ ಎಎಸ್ ಐ ಚಂದ್ರ ಮತ್ತು ಎಚ್.ಸಿ.ಪರಮೇಶ್ವರ ಅವರು ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka