ತಾಳಿ ತೆಗೆದಿಡುವುದು ಕ್ರೂರತೆಯ ಪರಮಾವಧಿ: ಮದ್ರಾಸ್ ಹೈಕೋರ್ಟ್ - Mahanayaka
1:16 AM Wednesday 11 - December 2024

ತಾಳಿ ತೆಗೆದಿಡುವುದು ಕ್ರೂರತೆಯ ಪರಮಾವಧಿ: ಮದ್ರಾಸ್ ಹೈಕೋರ್ಟ್

madras high court
16/07/2022

ಚೆನ್ನೈ : ಗಂಡನಿಂದ ದೂರವಾದ ಪತ್ನಿಯು ಮಾಂಗಲ್ಯವನ್ನು ತೆಗೆದಿಡುವುದು ಕ್ರೂರತೆಯ ಪರಮಾವಧಿ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಪತಿಗಳ ವಿಚ್ಛೇದನಕ್ಕೆ ಅನುಮತಿ ಕೂಡ ನೀಡಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ವಿಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯಪಟ್ಟಿದೆ, ತಾಳಿ ತೆಗೆದಿಟ್ಟರೆ ಅದರಿಂದ ಗಂಡನಿಗೆ ಮಾನಸಿಕ ಹಿಂಸೆಯಾಗುತ್ತದೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನಿಗೆ ಡೈವೋರ್ಸ್ ಪಡೆಯಲು ಅನುಮತಿ ನೀಡಿದೆ. ಪತ್ನಿ ಮಾಂಗಲ್ಯ ಧರಿಸುತ್ತಿಲ್ಲ ಎಂಬುದನ್ನೂ ಒಂದು ಆಧಾರವಾಗಿಟ್ಟುಕೊಂಡು ನೊಂದ ವ್ಯಕ್ತಿಗೆ ಕೋರ್ಟ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದೆ.

ಏನಿದು ಘಟನೆ?

ಈರೋಡ್‌ ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಶಿವಕುಮಾರ್ ಅವರ ಅರ್ಜಿ  ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ತನಗೆ ವಿಚ್ಛೇದನ ನೀಡಲು ನಿರಾಕರಿಸಿದ ಸ್ಥಳೀಯ ಕೌಟುಂಬಿಕ ನ್ಯಾಯಾಲಯದ 2016 ಜೂನ್ 15ರ ಆದೇಶಗಳನ್ನು ರದ್ದುಗೊಳಿಸುವಂತೆ ಶಿವಕುಮಾರ್ ಅವರು ಕೋರಿದ್ದರು.

ಈ ಬಗ್ಗೆ ಮಹಿಳೆಯ ವಿಚಾರಣೆ ನಡೆಸಿದಾಗ ಆಕೆ ಗಂಡನಿಂದ ದೂರವಿದ್ದ ಸಮಯದಲ್ಲಿ ಮಾಂಗಲ್ಯವನ್ನು ತೆಗೆದಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾಳೆ. ತಾನು ತಾಳಿಯನ್ನು ಇನ್ನೂ ಇಟ್ಟುಕೊಂಡಿದ್ದೇನೆ. ಆದರೆ, ಅದರ ಜೊತೆಗಿದ್ದ ಕರಿಮಣಿ ಸರವನ್ನು ಮಾತ್ರ ತೆಗೆದಿದ್ದೇನೆ ಎಂದು ಆಕೆ ವಿವರಿಸಲು ಮುಂದಾದಳು, ಆಗ, ಮಾಂಗಲ್ಯವನ್ನು ತೆಗೆದುಹಾಕುವ ಕ್ರಿಯೆಗೆ ತನ್ನದೇ ಆದ ಮಹತ್ವವಿದೆ ಎಂದು ಕೋರ್ಟ್ ಹೇಳಿದೆ.

ತಾಳಿ ತೆಗೆದಿಡುವುದೂ ಕೂಡ ಕ್ರೂರತೆಯ ಪರಮಾವಧಿ ಎಂದು ನ್ಯಾಯಲಯ ಹೇಳಿದೆ. ಆಕೆಯ ವಕೀಲರು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಅನ್ನು ಉಲ್ಲೇಖಿಸಿ ಮಾತನಾಡಿದ್ದು, ವಿವಾಹಿತ ಮಹಿಳೆ ತಾಳಿ ಹಾಕಿಕೊಳ್ಳಲೇಬೇಕೆಂಬ ನಿಯಮವಿಲ್ಲ ಎಂದು ಹೇಳಿದ್ದಾರೆ.

ಮಾಂಗಲ್ಯ ಹಾಕಿಕೊಳ್ಳುವುದು ಅಥವಾ ತೆಗೆದಿಡುವುದು ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದ್ದಾರೆ. ಆದರೆ, ಈ ಭಾಗದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ತಾಳಿ ಕಟ್ಟುವುದು ಅತ್ಯಗತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಯಾವುದೇ ವಿವಾಹಿತ ಮಹಿಳೆ ತಾಳಿಯನ್ನು ತೆಗೆದು ಬ್ಯಾಂಕ್ ಲಾಕರ್‌ ನಲ್ಲಿ ಇಡುವುದಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ