ತಳ್ಳುಗಾಡಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ಕುಟುಂಬಸ್ಥರು | ಕಾರಣ ಏನು ಗೊತ್ತಾ?
ಗದಗ: ಲಾಕ್ ಡೌನ್ ನಡುವೆ ಬಹಳಷ್ಟು ಸಂಕಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ. ಆದರೆ ಅನಿವಾರ್ಯವಾಗಿ ಅವರು ಸಹಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಲಾಕ್ ಡೌನ್ ನಿಂದಾಗಿ ಯಾವುದೇ ವಾಹನಗಳು ಸಿಗದ ಕಾರಣ ರೋಗಿಯೊಬ್ಬರನ್ನು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿರುವ ಅಮಾನವೀಯ ಘಟನೆ ನಡೆದಿದ್ದು, ಗದಗದ ಸಿದ್ದರಾಮೇಶ್ವರ ನಿವಾಸಿ ಗೋವಿಂದಪ್ಪ ಅವರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯಾಗಿದ್ದಾರೆ.
ಗೋವಿಂದಪ್ಪನವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಆಪರೇಷನ್ ಮಾಡಿರುವ ವೈದ್ಯರು ಒಂದು ಕಾಲನ್ನು ತೆಗೆದಿದ್ದರು. ಹೀಗಾಗಿ ಇದೀಗ ವೈದ್ಯರ ಅಗತ್ಯ ಚಿಕಿತ್ಸೆ ಬೇಕಾಗಿರುವುದರಿಂದಾಗಿ ಅವರು ಆಸ್ಪತ್ರೆಗೆ ತೆರಳಬೇಕಿತ್ತು. ಆದರೆ ವಾಹನಗಳೇ ಇಲ್ಲದಿದ್ದುದರಿಂದ ತಳ್ಳುಗಾಡಿಯ ಮೂಲಕ ನಗರದ ಜಿಮ್ಸ್ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿದೆ.
ಬಡ ಜನರ ಬಳಿಯಲ್ಲಿ ಸ್ವಂತ ವಾಹನ ಇರುವುದಿಲ್ಲ. ಆಟೋ ಚಾಲಕರು ಲಾಕ್ ಡೌನ್ ವೇಳೆ ರಸ್ತೆಗಿಳಿದರೆ, ಅವರ ವಾಹನ ಸೀಜ್ ಮಾಡಲಾಗುತ್ತಿದೆ. ಸ್ವಂತ ವಾಹನ ಇಲ್ಲದವರು ಏನು ಮಾಡುವುದು? ಅವರಿಗೆ ತಳ್ಳುಗಾಡಿಯೇ ಕೊನೆಯ ಅಸ್ತ್ರ ಎಂಬಂತಾಗಿದೆ.