ಗಂಡು ಮಕ್ಕಳು ಇರಲಿಲ್ಲ, ತಂದೆಯ ಅಂತ್ಯ ಸಂಸ್ಕಾರವನ್ನು ತಾನೇ ನಡೆಸಿದ ಪುತ್ರಿ   - Mahanayaka

ಗಂಡು ಮಕ್ಕಳು ಇರಲಿಲ್ಲ, ತಂದೆಯ ಅಂತ್ಯ ಸಂಸ್ಕಾರವನ್ನು ತಾನೇ ನಡೆಸಿದ ಪುತ್ರಿ  

24/01/2021

ಕಾರವಾರ: ಗಂಡು ಮಕ್ಕಳಿದ್ದರೆ ಮಾತ್ರವೇ ತಂದೆ ತಾಯಿಯ ಸಕಲ ಕಾರ್ಯಗಳನ್ನು ನಡೆಸಲು ಸಾಧ್ಯ ಎಂಬ ಕೆಟ್ಟ ನಂಬಿಕೆ ಜನರಿಂದ ದೂರವಾಗುತ್ತಿದೆ. ಹೆಣ್ಣು ಕೂಡ ತನ್ನ ತಂದೆ-ತಾಯಿಯ ಅಂತ್ಯ ಸಂಸ್ಕಾರ ನಡೆಸಲು ಹೆಣ್ಣು ಕೂಡ ಶಕ್ತಳು ಎನ್ನುವ  ಸತ್ಯ ಇದೀಗ ಜನರಿಗೆ ಅರಿವಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ  ಇಂತಹದ್ದೊಂದು ಬದಲಾವಣೆಯ ಗಾಳಿ ಬೀಸಿದೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಾಗಿರುವ ‘ಸಮಾನತೆ’ ಸಾಕಾರಗೊಂಡಂತಹ ಘಟನೆ ಕೂಡ ಇದಾಗಿದೆ ಎಂದು ಹೇಳಬಹುದು.ಮಹಿಳೆಯರು ಅದೆಷ್ಟೋ ನೀಚ ಸಂಸ್ಕೃತಿಯಿಂದ ಬಿಡುಗಡೆ ಹೊಂದಲು ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ. ಹಾಗಾಗಿ ಈ ಬದಲಾವಣೆ ಗಾಳಿ ಬೀಸಲು ಅವಕಾಶವಾಗಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾನೂನಿನಿಂದಾಗಿದೆ. ಇಲ್ಲವಾದರೆ, ಇಂತಹ ಕಾರ್ಯಗಳನ್ನು ಮಹಿಳೆಯರು ಮಾಡುವುದು ಬಿಡಿ, ಯೋಚಿಸಲೂ, ಮನುಸಂಸ್ಕೃತಿ ಅವಕಾಶ ನೀಡುತ್ತಿರಲಿಲ್ಲ.

ಅಷ್ಟಕ್ಕೂ ಈ ಘಟನೆ ಏನು?

ಕಾರವಾರ ತಾಲೂಕಿನ ಮಲ್ಲಾಪುರ ಗ್ರಾ.ಪಂ. ವ್ಯಾಪ್ತಿ ಕುರ್ನಿಪೇಟೆ ಊರಿನ ಚಂದ್ರಕಾಂತ್ ಬುದೊ ಎಂಬವರಿಗೆ  9 ಹೆಣ್ಣು ಮಕ್ಕಳು. ತಮ್ಮ ಕೊನೆ ದಿನದಲ್ಲಿ ತನ್ನ ಚಿತೆಗೆ ಬೆಂಕಿ ಇಡಲು ಒಂದು ಗಂಡು ಸಂತಾನವಾದರೂ ಬೇಕು ಎಂದು ಚಂದ್ರಕಾಂತ್ ಅವರು ಬೇಡದ ದೇವರಿಲ್ಲ, ಮಾಡದ ಪೂಜೆ ಇಲ್ಲ. ಇಷ್ಟಾದರೂ ಅವರಿಗೆ 9 ಹೆಣ್ಣು ಮಕ್ಕಳೇ ಜನಿಸಿದ್ದರು.

ಹೆಣ್ಣು ಮಕ್ಕಳು ಜನಿಸಿದರು ಎಂದು ಬೇಸರ ಮಾಡಿಕೊಳ್ಳದ ಚಂದ್ರಶೇಖರ್, ಮಕ್ಕಳನ್ನು ಚೆನ್ನಾಗಿ ಸಾಕಿ ಸಲಹಿ, ತಮ್ಮ ಪ್ರೀತಿಯನ್ನು ಧಾರೆಯೆರೆದಿದ್ದಾರೆ. ಹೀಗಿರುವಾಗ ಶುಕ್ರವಾರ ಚಂದ್ರಕಾಂತ್ ಅವರಿಗೆ ಹೃದಯಾಘಾತವಾಗಿದೆ. ಅವರು, ದುರಾದೃಷ್ಟವಶಾತ್ ನಿಧನರಾಗಿದ್ದಾರೆ.

ಚಂದ್ರಕಾಂತ್ ಅವರಿಗೆ 9 ಹೆಣ್ಣು ಮಕ್ಕಳು. ಹೆಣ್ಣು ಮಕ್ಕಳು ತಂದೆಯ ಚಿತೆಗೆ ಬೆಂಕಿ ಇಡುವುದು ಬಿಡಿ, ಅಂತಿಮ ಕಾರ್ಯದಲ್ಲಿ ಭಾಗವಹಿಸಲೂ ಅವಕಾಶವಿಲ್ಲ. ಸಂಬಂಧಿಕರು ಯಾರು ಕೂಡ ಮುಂದೆ ನಿಂತು ಅಂತಿಮ ಸಂಸ್ಕಾರ ಮಾಡಲು ಮುಂದಾಗಲಿಲ್ಲ. ಈ ವೇಳೆ ಚಂದ್ರಕಾಂತ್ ಅವರ ನಾಲ್ಕನೇ ಪುತ್ರಿ ಕುಮಾರಿ ಸರೋಜಾ ಅವರು ಮುಂದೆ ಬಂದು ತಾನೇ ತನ್ನ ತಂದೆಯ ಅಂತಿಮ ಕಾರ್ಯಗಳನ್ನು ನಡೆಸಿದ್ದಾರೆ.

ಗಂಡು ಮಕ್ಕಳಿಲ್ಲದಿದ್ದರೇನಂತೆ? ಚಂದ್ರಕಾಂತ್ ಅವರ ಅಂತಿಮ ಸಂಸ್ಕಾರ ಅಂತೂ ಬಾಕಿಯಾಗಲಿಲ್ಲ.ಗಂಡು ಮಗು ಬೇಕು ಎಂದು ಪತ್ನಿಯನ್ನು ಹಿಂಸಿಸುವ ದುಷ್ಟ ಗಂಡಸರು ಇಂತಹ ಘಟನೆಗಳನ್ನು ನೋಡಿಯಾದರೂ ಬದಲಾದರೆ, ಸಮಾಜ ಉದ್ದಾರ ಆಗುತ್ತಿತ್ತು. ದುಷ್ಟ ಸಂಸ್ಕೃತಿಗಳಿಂದ ಜನರು ಹೊರ ಬರಬೇಕಿದೆ. ಜನರು ಸಮಾಜಮುಖಿಯಾಗಿ ಯೋಚನೆ ಮಾಡುವ ಕಾಲ ಬಂದಿದೆ ಎಂದೇ ಹೇಳಬಹುದು. ಜನರು ಪ್ರಬುದ್ಧರಾದರೆ, ನಾಡು, ದೇಶ ಎರಡು ಕೂಡ ಬೆಳವಣಿಗೆಯಾಗುತ್ತದೆ.

ಇತ್ತೀಚಿನ ಸುದ್ದಿ