ಕೊರೊನಾದಿಂದ ಮೃತಪಟ್ಟ ತಂದೆಯ ಹೆಣ ಬೇಡ, ಹಣ ತಂದುಕೊಡಿ ಎಂದ ಪುತ್ರ!
ಮೈಸೂರು: ತಂದೆಯ 6 ಲಕ್ಷ ಹಣ, ಮೊಬೈಲ್ ಇತರ ವಸ್ತುಗಳನ್ನು ಕೊಡಿ, ಮೃತದೇಹ ನನಗೆ ಬೇಡ ಎಂದು ಪಾಪಿ ಮಗನೋರ್ವ ಹೇಳಿದ ಘಟನೆ ಇಲ್ಲಿನ ಹೆಬ್ಬಾಳ ಸಮೀಪದ ಸೂರ್ಯ ಬೇಕರಿ ಬಳಿಯಲ್ಲಿ ನಡೆದಿದೆ.
ಸೂರ್ಯ ಬೇಕರಿ ಸಮೀಪದ ಮನೆಯ ವ್ಯಕ್ತಿಯೊಬ್ಬರು ಕೊವಿಡ್ ಗೆ ಬಲಿಯಾಗಿದ್ದರು. ಹೀಗಾಗಿ ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ಮೃತರ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಈ ವೇಳೆ ಪುತ್ರ, ಮೃತದೇಹವನ್ನು ಪಡೆಯಲು ನಿರಾಕರಿಸಿದ್ದು, ನೀವೇ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದ್ದಾನೆ. ಇನ್ನೂ ಮನೆಯಲ್ಲಿ ಹಣ, ಎಟಿಎಂ ಕಾರ್ಡ್, 3 ಮೊಬೈಲ್ ಇದೆ ಎನ್ನುವ ವಿಚಾರವನ್ನು ತಿಳಿಸಲಾಗಿದ್ದು, ಈ ವೇಳೆ ಹಣ ತಂದುಕೊಡಿ ಹೆಣ ಬೇಡ ಎಂದು ಪುತ್ರ ಹೇಳಿದ್ದಾನೆ.
ಮೃತ ವ್ಯಕ್ತಿಗೆ ಸ್ವಂತ ಪುತ್ರ ಇದ್ದಾನೆ. ಬಂಧು ಬಳಗ ಕೂಡ ಇದೆ. ಆದರೆ ಸತ್ತ ಬಳಿಕ ಅಂತ್ಯಕ್ರಿಯೆ ನಡೆಸಲು ಯಾರು ಕೂಡ ಮುಂದೆ ಬರಲಿಲ್ಲ. ಸ್ವಂತ ಪುತ್ರ, ತಂದೆಯ ಹಣ ಕೊಡಿ ಹೆಣ ಬೇಡ ಎಂದು ಹೇಳಿದ್ದಾನೆ. ಜಗತ್ತಿನ ಸತ್ಯವನ್ನು ತಿಳಿಸಲು ಕೊರೊನಾದಂತಹ ಸಣ್ಣ ಅಣು ಬರಬೇಕಾಯಿತು ನೋಡಿ ಎನ್ನುವ ಮಾತುಗಳು ಕೇಳಿ ಬಂದಿವೆ.