11:58 AM Wednesday 12 - March 2025

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ

12/12/2020

ಲಕ್ನೋ: ಸಮಾಜದಲ್ಲಿ ಜಾತಿಯ ಕಾರಣಕ್ಕಾಗಿ ನಡೆದ ಮಾರಣಹೋಮಕ್ಕೆ ಲೆಕ್ಕವೇ ಇಲ್ಲ. ಅಂತಹ ಮಾರಣಹೋಮಗಳಲ್ಲಿ ಮತ್ತೊಂದು ಮಾರಣಹೋಮ ನಡೆದಿದ್ದು, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿ ಖುಷಿಯಿಂದ ಆತನ ಜೊತೆಗೆ ಸಂಸಾರ ಮಾಡುತ್ತಿದ್ದ ಯುವತಿಯೋರ್ವಳನ್ನು ಆಕೆಯ ಮನೆಯವರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಉತ್ತರಪ್ರದೇಶದ ಮೈನ್ ಪುರಿ ಜಿಲ್ಲೆಯ ಚಾಂದಿನಿ ಕಶ್ಯಪ್(23) ಅರ್ಜುನ್ ಕುಮಾರ್ ಎಂಬ ದಲಿತ ಯುವಕನನ್ನು  ಮನಸಾರೆ ಮೆಚ್ಚಿ ಪ್ರೀತಿಸುತ್ತಿದ್ದಳು. ಸುಮಾರು 8 ವರ್ಷಗಳಿಂದಲೂ ಪ್ರೀತಿಸುತ್ತಿದ್ದ ಇವರಿಗೆ ಮದುವೆಯಾಗಲು ಜಾತಿ ಎಂಬ ಅನಿಷ್ಠ ಎದುರಾಯಿತು. ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಅರ್ಜುನ್ ಹಾಗೂ  ಚಾಂದಿನಿ ಕುಟುಂಬವನ್ನು ತ್ಯಜಿಸಿ ಜೂನ್ 12ರಂದು  ಉತ್ತರಪ್ರದೇಶದಿಂದ ದೆಹಲಿಗೆ ಬಂದು ಮದುವೆಯಾಗಿ ಅಲ್ಲೇ ಸಂಸಾರ ಹೂಡಿದರು.

ದೆಹಲಿಯಲ್ಲಿ ವಾಸವಿದ್ದ ಚಾಂದಿನಿ ದಲಿತ ಯುವಕ ಅರ್ಜುನ್ ಜೊತೆಗೆ ಖುಷಿಯಿಂದ ಸಂಸಾರ ಮಾಡುತ್ತಿದ್ದಳು. ಹೀಗಿರುವಾಗ  ಕಳೆದ ನವೆಂಬರ್ ತಿಂಗಳಿನಿಂದ ಚಾಂದಿನಿಯ ಅಣ್ಣ ಆಕೆಯ ಜೊತೆಗೆ ಮಾತನಾಡಲು ಆರಂಭಿಸಿದ್ದಾನೆ “ನಿಮ್ಮ ಪ್ರೀತಿಯನ್ನು ನಾವು ಒಪ್ಪಿದ್ದೇವೆ. ನೀನು ನಮ್ಮ ಮನೆಗೆ ಬರಬೇಕು ಎಂದಿದ್ದ. ಅಣ್ಣಪ್ರೀತಿಯ ಮಾತಿಗೆ ಮರುಳಾದ ಚಾಂದಿನಿ ನವೆಂಬರ್ 17ರಂದು ತನ್ನ ಮನೆಗೆ ಬಂದಿದ್ದಳು. ನವೆಂಬರ್ 20ರಂದು ತನ್ನ ಗಂಡ ಅರ್ಜುನ್ ಗೆ ಕರೆ ಮಾಡಿದ್ದ ಆಕೆ,  ನನಗೆ ಮನೆಯಲ್ಲಿ ಹಿಂಸೆ ನೀಡುತ್ತಿದ್ದಾರೆ. ದೆಹಲಿಗೆ ಕಳುಹಿಸಲು ಅವರು ಒಪ್ಪುತ್ತಿಲ್ಲ ಎಂದು ಹೇಳಿದ್ದಾಳೆ. ಅದು ಆಕೆ ಕೊನೆಯದಾಗಿ ತನ್ನ ಪತಿಯ ಬಳಿಯಲ್ಲಿ ಮಾತನಾಡಿದ್ದು. ಆ ಬಳಿಕ ಆಕೆಯಿಂದ ಯಾವುದೇ ಕರೆ ಬರಲಿಲ್ಲ.

ಚಾಂದಿನಿಯಿಂದ ಯಾವುದೇ ಕರೆಗಳು ಬಾರದಿದ್ದರಿಂದ ಅನುಮಾನಗೊಂಡ ಅರ್ಜುನ್ ನವೆಂಬರ್ 22ರಂದು ಪೊಲೀಸರಿಗೆ ದೂರು ನೀಡಿದ್ದಾನೆ.  ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದು, ಈ ವೇಳೆ ತಂಗಿ ಕೆಳ ಜಾತಿಯವನನ್ನು ಮದುವೆಯಾಗಿದ್ದಾಳೆ ಎನ್ನುವ ಮಾನಸಿಕತೆಯಿಂದ ಅಣ್ಣ,  ತಂಗಿ ಎಂದೂ ನೋಡದೇ ಆಕೆಯನ್ನು ತನ್ನ ಕುಟುಂಬದ ಸದಸ್ಯರ ಸಹಾಯದಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸದ್ಯ ಚಾಂದಿನಿಯ ಹತ್ಯೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ

Exit mobile version