ತಾನು ಕಸಗುಡಿಸುತ್ತಿದ್ದ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾದ ಮಹಿಳೆ | ಇದು ಸಂವಿಧಾನದ ಶಕ್ತಿ
ಕೊಲ್ಲಂ: ಮಹಿಳೆಯೊಬ್ಬರು ತಾನು ಗುಡಿಸುತ್ತಿದ್ದ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾದ ಘಟನೆ ಕೇರಳದಲ್ಲಿ ನಡೆದಿದ್ದು, ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ ಆಗಿದ್ದ ಆನಂದವಳ್ಳಿ ಎಂಬ ಮಹಿಳೆ ಇದೀಗ ಅದೇ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾಗಿದ್ದಾರೆ.
ಪರಿಶಿಷ್ಟ ಜಾತಿಯ ಆನಂದವಳ್ಳಿ ಅವರು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಶಾಲಿಯಾಗಿದ್ದರು. ಇದೀಗ ಅವರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ. ಇವರು ಸಿಪಿಎಂ ಪಕ್ಷದಿಂದ ಸ್ಪರ್ಧಿಸಿದ್ದರು. 13 ಸದಸ್ಯ ಬಲದ ಈ ಬ್ಲಾಕ್ ಪಂಚಾಯತ್‌ನಲ್ಲಿ ಎಲ್‌ಡಿಎಫ್ ಏಳು ಸ್ಥಾನಗಳನ್ನು ಗೆದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರು ಸ್ಥಾನಗಳನ್ನು ಗಳಿಸಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಶಕ್ತಿಯೇ ಅಂತಹದ್ದು. ಇಲ್ಲಿ ಟೀ ಮಾರುವವರು ಕೂಡ ಪ್ರಧಾನಿಯಾಗ ಬಲ್ಲರು. ಕಸ ಗುಡಿಸುವವರು ಕೂಡ ಯಾವುದೇ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ. ಇಲ್ಲಿ ಅಧಿಕಾರ ಎನ್ನುವುದು ಯಾರೊಬ್ಬರ ಸೊತ್ತೂ ಅಲ್ಲ. ಇದೇ ಕಾರಣಕ್ಕೆ ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠ ಎಂದು ಒಪ್ಪಿಕೊಂಡಿರುವುದು ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಆನಂದವಳ್ಳಿ ಅವರು, ನನಗೆ ಈ ಹುದ್ದೆ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಅದು ಕೂಡ ನಾನು ಗುಡಿಸುತ್ತಿದ್ದ ಪಂಚಾಯತ್ ನಲ್ಲಿಯೇ ನಾನು ಅಧ್ಯಕ್ಷೆಯಾಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ ಎಂದು ಹೇಳಿದ್ದಾರೆ.