ತಂದೆಯ ಜೊತೆಗೆ ವಾಕ್ಸಮರ | ತಾಯಿ, ಮಗ, ಮಗಳು ಆತ್ಮಹತ್ಯೆ

29/01/2021

ದಾವಣಗೆರೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು,  ತಂದೆಯ ಜೊತೆಗಿನ ವಾಕ್ಸಮರದಿಂದ ನೊಂದು ಮಕ್ಕಳು ತಮ್ಮ ತಾಯಿಯ ಜೊತೆಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರಾಜಪ್ಪ ವರ ಪತ್ನಿ ಕಮಲಮ್ಮ(55) ಮತ್ತು ಇವರ ಮಗಳು ಶ್ರುತಿ(24), ಮಗ ಸಂಜಯ್(21) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.

 ಕಮಲಮ್ಮ ಅವರ ಪತಿ ರಾಜಪ್ಪ ನಿವೃತ್ತ ಉಪನ್ಯಾಸಕರಾಗಿದ್ದು, ಹೊಳಲ್ಕೆರೆ ತಾಲೂಕು ರಾಮಗಿರಿಯ ಮಣ್ಣಮ್ಮ ಕಾಲೇಜಿನಲ್ಲಿ ಕೆಲಸ ನಿರ್ವಹಿಸಿದ್ದರು. ಮಗಳು ಶ್ರುತಿ ಮದುವೆಗೆ ನಿರ್ಧರಿಸಿದ್ದರು. ಆದರೆ ಆಕೆ ಮದುವೆಗೆ ನಿರಾಕರಿಸಿದ್ದಳು. ಈ ವಿಚಾರವಾಗಿ ಕುಟುಂಬದಲ್ಲಿ ಕೋಲಾಹಲವೆದ್ದಿದ್ದು, ಇದೇ ವಿಚಾರಕ್ಕೆ ಈ ಸಾಮೂಹಿಕ ಆತ್ಮಹತ್ಯೆ ನಡೆದಿದೆ ಎಂದು ಹೇಳಲಾಗಿದೆ.

ಬುಧವಾರ ಬೆಳಗ್ಗೆ ತಾಯಿ, ಮಗಳು, ಮಗ ಚನ್ನಗಿರಿಯಲ್ಲಿ ಒಟ್ಟಾಗಿದ್ದು ಬಳಿಕ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಕುಟುಂಬದಲ್ಲಿ ಒಬ್ಬರ ಮಾತನ್ನು ಇನ್ನೊಬ್ಬರು ಗೌರವದಿಂದ ಸ್ವೀಕರಿಸಿದರೆ, ಇಂತಹ ಘಟನೆಗಳೇ ನಡೆಯುವುದಿಲ್ಲ ಅಲ್ಲವೇ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version