ಹೃದಯ ವಿದ್ರಾವಕ ಘಟನೆ | ತಾಯಿ ಮೃತಪಟ್ಟಿರುವುದು ತಿಳಿಯದೇ ಮೃತ ದೇಹದ ಬಳಿ ಆಟವಾಡಿದ ಮಕ್ಕಳು!
ಖಂಡ್ವಾ: ಐದು ತಿಂಗಳ ಗರ್ಭಿಣಿ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಹರ್ಡಾ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಮಧ್ಯಪ್ರದೇಶದ ಭೀಂದ್ ಜಿಲ್ಲೆಯಲ್ಲಿರುವ ಪತಿಯ ಮನೆಯಿಂದ ಕರ್ನಾಟಕದ ಯಾದಗಿರಿಗೆ ತೆರಳಲು ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ನೂರ್ ಜಹಾನ್ ಮೃತ ಮಹಿಳೆಯಾಗಿದ್ದು, ಮಹಿಳೆ ಮೃತಪಟ್ಟಿರುವುದು ತಿಳಿಯದೇ ಆಕೆಯ ಮಕ್ಕಳು ಮೃತದೇಹದ ಬಳಿಯಲ್ಲಿಯೇ ಆಟವಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಕರುಳು ಚುರ್ ಎನ್ನುವಂತಿತ್ತು.
ಗುರುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಹರ್ಡಾ ರೈಲ್ವೆ ನಿಲ್ದಾಣದ ಬಳಿಯಲ್ಲಿ ನೂರ್ ಜಹಾನ್ ಗೆ ವಾಂತಿಯಾಗಿದ್ದು, ಏಕಾಏಕಿ ತಲೆ ತಿರುಗಿ ಬಿದ್ದಿದ್ದಾರೆ. ರೈಲಿನಲ್ಲಿ ಅಕ್ಕಪಕ್ಕದಲ್ಲಿದ್ದ ಜನರು ನೀರು ಕುಡಿಸಲು ಪ್ರಯತ್ನಿಸಿದರೂ ಆದರೂ ಮಹಿಳೆಗೆ ಪ್ರಜ್ಞೆ ಬಂದಿರಲಿಲ್ಲ.
ರೈಲು ಖಂಡ್ವಾ ನಿಲ್ದಾಣಕ್ಕೆ ತಲುಪುತ್ತಿದ್ದಂತೆಯೇ ಪತಿ ಜಮಾಲುದ್ದೀನ್ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಗರ್ಭೀಣಿಯನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ಮೃತಪಟ್ಟಿರುವುದು ತಿಳಿದು ಬಂದಿದೆ.
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಿಲ್ದಾಣದಲ್ಲಿಡಲಾಗಿತ್ತು. ತಾಯಿ ಸಾವಿಗೀಡಾದ ವಿಚಾರ ತಿಳಿಯದ ಮಕ್ಕಳು ತಾಯಿಯ ಮೃತದೇಹದ ಬಳಿಯಲ್ಲಿ ಆಟವಾಡುತ್ತಿರುವ ದೃಶ್ಯ ಕಂಡು ಸಾರ್ವಜನಿಕರು ಮರುಗಿದ್ದಾರೆ.