ಕಷ್ಟದಲ್ಲಿದ್ದಾಗಲೂ ಕುಟುಂಬಸ್ಥರು ತಿರುಗಿ ನೋಡಲಿಲ್ಲ, ಕರೆ ಮಾಡಿದಾಗ ಜಗಳವಾಡಿದ್ರು: ದಂಪತಿಯ ಡೆತ್ ನೋಟ್ ನಲ್ಲಿ ಕರುಣಾಜನಕ ಕಥೆ - Mahanayaka
10:32 AM Wednesday 8 - January 2025

ಕಷ್ಟದಲ್ಲಿದ್ದಾಗಲೂ ಕುಟುಂಬಸ್ಥರು ತಿರುಗಿ ನೋಡಲಿಲ್ಲ, ಕರೆ ಮಾಡಿದಾಗ ಜಗಳವಾಡಿದ್ರು: ದಂಪತಿಯ ಡೆತ್ ನೋಟ್ ನಲ್ಲಿ ಕರುಣಾಜನಕ ಕಥೆ

up family
07/01/2025

ಬೆಂಗಳೂರು:  ಇಬ್ಬರು ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ದಂಪತಿಯ ಕರುಣಾಜನಕ ಕಥೆ ಡೆತ್ ನೋಟ್ ನಿಂದ ಬಹಿರಂಗಗೊಂಡಿದೆ.

ಅನೂಪ್(38) ಹಾಗೂ ರಾಖಿ(35) ಇವರ ಮಕ್ಕಳಾದ ಅನುಪ್ರಿಯಾ, ಪ್ರಿಯಾಂಶ್ ಸಾವಿಗೆ ಶರಣಾದವರಾಗಿದ್ದಾರೆ. ಆತ್ಮಹತ್ಯೆಗೂ ಮೊದಲು ಅನೂಪ್ ತನ್ನ ಸಹೋದರನಿಗೆ ಒಂದು ಪುಟದ ಡೆತ್ ನೋಟ್ ಬರೆದಿಟ್ಟು, ಇಮೇಲ್ ಮಾಡಿದ್ದಾರೆ.

ಡೆತ್ ನೋಟ್:

ನಮ್ಮ ಕುಟುಂಬ ನಮ್ಮ ಜೊತೆಗೆ ಇರಲಿಲ್ಲ,  ಅಪ್ಪನಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಕರೆ ಸ್ವೀಕರಿಸಿದರೂ ನಾನು ಆಸ್ತಿ ಕೇಳುತ್ತೇನೆ ಎಂದು ಜಗಳವಾಡುತ್ತಿದ್ದರು.  ನನಗೆ ಎರಡನೇ ಮಗು ಹುಟ್ಟಿದಾಗಲೂ ಯಾರೂ ವಿಚಾರಿಸಲಿಲ್ಲ. ಕನಿಷ್ಠ ವಿಡಿಯೋ ಕರೆ  ಮಾಡಿ ಮಾತನಾಡಿಸಲಿಲ್ಲ. ಇದರಿಂದ ನಾನು ನನ್ನ ಪತ್ನಿ ನೊಂದಿದ್ದೇವೆ. ಮೊದಲ ಮಗು ಅನುಪ್ರಿಯಾಗೆ ಬುದ್ಧಿಮಾಂಧ್ಯತೆ ಇತ್ತು. ಈ ವಿಚಾರದಲ್ಲಿ ನಾವು ಬಹಳ ನೊಂದಿದ್ದೆವು. ಯಾರೊಬ್ಬರೂ ನಮಗೆ ಸಹಾಯ ಮಾಡಲಿಲ್ಲ, ಧೈರ್ಯ ತುಂಬಲಿಲ್ಲ, ನಮ್ಮ ಕುಟುಂಬದವರು ದೂರವಾದರು ಎಂದು ಡೆತ್ ಬರೆದುಕೊಂಡಿದ್ದಾರೆ.

ಪ್ರೀತಿಸಿ ವಿವಾಹವಾಗಿದ್ದ ದಂಪತಿ:

ಉತ್ತರ ಪ್ರದೇಶ ಮೂಲದ ಅನೂಪ್ ಹಾಗೂ ರಾಖಿ  ಪ್ರೀತಿಸಿ ಮದುವೆಯಾಗಿದ್ದರು. ಅನೂಪ್ ಸಾಫ್ಟ್ ವೇರ್ ಕಂಪೆನಿಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರೆ, ರಾಖಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರು.

ಸತ್ತರೂ ತಿರುಗಿ ನೋಡದ ಕುಟುಂಬಸ್ಥರು:

ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ವಿಚಾರ ಕುಟುಂಬಸ್ಥರಿಗೆ ತಿಳಿಸಿದರೂ ಉತ್ತರ ಪ್ರದೇಶದಿಂದ ಕುಟುಂಬಸ್ಥರು ಬಂದಿಲ್ಲ. ಬದುಕಿರುವಾಗಲೂ ಅನಾಥವಾಗಿದ್ದ ಈ ಕುಟುಂಬ, ಪ್ರಾಣ ಕಳೆದುಕೊಂಡ ನಂತರವೂ ಅನಾಥವಾಗಿದ್ದಾರೆ. ಮೃತದೇಹಗಳು ಇನ್ನೂ ಶವಾಗಾರದಲ್ಲೇ ಇದೆ ಎಂದು ವರದಿಗಳಿಂದ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ