ದಿ ಗ್ರೇಟೆಸ್ಟ್‌ ಇಂಡಿಯನ್ ಡಾ.ಅಂಬೇಡ್ಕರ್-ರಘೋತ್ತಮ ಹೊ‌.ಬ - Mahanayaka
9:18 AM Tuesday 24 - December 2024

ದಿ ಗ್ರೇಟೆಸ್ಟ್‌ ಇಂಡಿಯನ್ ಡಾ.ಅಂಬೇಡ್ಕರ್-ರಘೋತ್ತಮ ಹೊ‌.ಬ

greatest indian dr ambedkar
12/04/2021

2011-12 ರಲ್ಲಿ ಔಟ್ ಲುಕ್ ಪತ್ರಿಕೆ
ಸಿ ಎನ್ ಎನ್ -ಐಬಿಎನ್, ಹಿಸ್ಟರಿ -18 ಮತ್ತು ಬಿಬಿಸಿ ಚಾನಲ್ ಗಳ ಸಹಯೋಗದೊಂದಿಗೆ ಒಂದು ಬೃಹತ್ ಸಮೀಕ್ಷೆ ಹಮ್ಮಿಕೊಂಡಿತ್ತು. ಆ ಸಮೀಕ್ಷೆ “ದಿ ಗ್ರೇಟೆಸ್ಟ್ ಇಂಡಿಯನ್ ಆಫ್ಟರ್ ಮಹಾತ್ಮ ಗಾಂಧಿ” ಎಂಬುದಾಗಿತ್ತು. ರಾಷ್ಟ್ರಪಿತ ಎಂದು ಮಹಾತ್ಮ ಗಾಂಧಿಯವರು ಅದಾಗಲೇ ಕರೆಯಲ್ಪಟ್ಟಿದ್ದರಿಂದ ಗಾಂಧೀಜಿಯವರ ಹೆಸರನ್ನು ಹೊರತುಪಡಿಸಿ ಇಂತಹ ಒಂದು ಸಮೀಕ್ಷೆ ಯನ್ನು ವಿಶ್ವಮಟ್ಟದಲ್ಲಿ ಕೈಗೊಳ್ಳಲಾಗಿತ್ತು. ಇದು ಹೊಸದೇನು ಆಗಿರಲಿಲ್ಲ. ಅದಾಗಲೇ ಸುಮಾರು 21 ದೇಶಗಳಲ್ಲಿ ಆಯಾ ದೇಶಗಳ ಗ್ರೇಟೆಸ್ಟ್ ವ್ಯಕ್ತಿಗಳು ಯಾರು ಎಂಬ ಸಮೀಕ್ಷೆ ನಡೆದಿತ್ತು. ಆ ನಿಟ್ಟಿನಲ್ಲಿ ಉದಾಹರಣೆಗೆ ಇಂಗ್ಲೆಂಡ್ ನಲ್ಲಿ ಅಲ್ಲಿಯ ಮಾಜಿ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಗ್ರೇಟೆಸ್ಟ್ ಆಗಿ ಹೊರಹಮ್ಮಿದ್ದರೆ ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಗ್ರೇಟೆಸ್ಟ್ ಆಗಿ ಹೊರಹೊಮ್ಮಿದ್ದರು.

ಅಂದಹಾಗೆ ಇದು ನಿಜಕ್ಕೂ ಟಫ್ ಕಾಂಪಿಟಿಷನ್ ಆಗಿತ್ತು, ಆಯ್ಕೆ ಒಂದು ರೀತಿ ಚಾಲೆಂಜ್ ಕೂಡ ಆಗಿತ್ತು. ಯಾಕೆಂದರೆ ಔಟ್ ಲುಕ್ ಪತ್ರಿಕೆ ಇಟ್ಟಿದ್ದ ಮಾನದಂಡಗಳು “ಸ್ವಾತಂತ್ರ್ಯಾನಂತರ ಗರಿಷ್ಠ ಸಂಖ್ಯೆಯ ಭಾರತೀಯರನ್ನು ಮುನ್ನಡೆಸಿದ್ದು, ಅವರ ಬುದ್ಧಿವಂತಿಕೆ, ನಾಯಕತ್ವ, ಮಾನವ ಜನಾಂಗದೆಡೆಗಿನ ಪ್ರೀತಿ ಇವು ಗ್ರೇಟೆಸ್ಟ್ ಇಂಡಿಯನ್ ಸ್ಪರ್ಧೆಯ ಅಳತೆಗೋಲಾಗಿದ್ದವು. (ಔಟ್ ಲುಕ್ ವಿಶೇಷಾಂಕ, ಆಗಸ್ಟ್ 20, 2012). ಹಾಗೆ ಸ್ಪರ್ಧೆಯು ಮೂರು ಹಂತಗಳನ್ನು ಒಳಗೊಂಡಿತ್ತು.

1.100 ಜನರಲ್ಲಿ ಸ್ಪರ್ಧೆಗೆ 50 ಜನರನ್ನು ಇಳಿಸುವ ಅಥವಾ short list ಮಾಡುವ 28 ಜನ ಪ್ರಮುಖ ಭಾರತೀಯರ ಒಂದು ಆಯ್ಕೆ ಸಮಿತಿ.
2. ಜನಪ್ರಿಯ ಮತಗಳು (popular votes) ತಿಳಿಯಲು ಮೊದಲು ಆನ್ ಲೈನ್ ಮೂಲಕದ ಮತದಾನ, ನಂತರ ಮಿಸ್ಡ್ ಕಾಲ್ ಮೂಲಕ ಮತದಾನ.
3. ಎ.ಸಿ‌ ನೀಲ್ಸನ್ ಸಂಸ್ಥೆಯಿಂದ ದೇಶದ 15 ನಗರಗಳಲ್ಲಿ ನಡೆದ ಎರಡು ಹಂತಗಳ ಸ್ಯಾಂಪಲ್ ಸರ್ವೆ.

ಮೊದಲನೆಯ ಹಂತದ ಮತದಾನ ಆನ್ ಲೈನ್ ಮೂಲಕದ ಮತದಾನ “ಗ್ರೇಟೆಸ್ಟ್ ಇಂಡಿಯನ್. ಇನ್” ವೆಬ್ ಸೈಟ್ ನಲ್ಲಿ 2012 ಜೂನ್ 4 ರಿಂದ 25 ರವರೆಗೆ ನಡೆಯಿತು. ಈ ಹಂತ 71 ಲಕ್ಷ ಮತದಾರರು ಆನ್ ಲೈನ್ ನಲ್ಲಿ ಚಲಾಯಿಸಲ್ಪಟ್ಟಿದ್ದವು. ಈ ಹಂತದಲ್ಲಿ 50 ಜನ ಸ್ಪರ್ಧಿಗಳಲ್ಲಿ ಮೊದಲ ಹತ್ತು ಜನರ ಪಟ್ಟಿ ಅದೇ ತಿಂಗಳ 31ರಂದು ಬಿಡುಗಡೆಗೊಂಡಿತು. ಆ ಪಟ್ಟಿಯಲ್ಲಿ ಡಾ.ಅಂಬೇಡ್ಕರರು ಇದ್ದರಾದರೂ ಟಾಪ್ ಆಗಿರಲಿಲ್ಲ.

ಆದರೆ ಎರಡನೇ ಹಂತದ ಮತದಾನ, ಈ ಹಂತದಲ್ಲಿ ಮಿಸ್ಡ್ ಕಾಲ್ ನೀಡುವ ಮೂಲಕ ಮತದಾನ ಮಾಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಯಿತು. ಇದರಲ್ಲಿ ಸುಮಾರು 2 ಕೋಟಿ ಮತಗಳು ಚಲಾವಣೆಯಾದವು. ಜುಲೈ 1 ರಿಂದ ಜುಲೈ 31 ರವರೆಗೆ ನಡೆದ ಈ ಮತದಾನದಲ್ಲಿ ಎಲ್ಲರ ಊಹೆ ಮೀರಿ ಬಾಬಾಸಾಹೇಬ್ ಅಂಬೇಡ್ಕರರು ಪ್ರಪ್ರಥಮರಾಗಿ ಹೊರಹೊಮ್ಮಿದರು. ಯಾವ ರೀತಿ ಎಂದರೆ ಸಿಂಧು(valid) ಎಂದು ಪರಿಗಣಿಸಲ್ಪಟ್ಟ 43 ಲಕ್ಷ ಮತಗಳಲ್ಲಿ ಡಾ.ಅಂಬೇಡ್ಕರರೊಬ್ಬರೇ ಬರೋಬ್ಬರಿ 20 ಲಕ್ಷ ಮತ ಪಡೆದಿದ್ದರು! ಆ ಮೂಲಕ ಡಾ.ಅಂಬೇಡ್ಕರರು “ಸ್ವತಂತ್ರ ಭಾರತದ ಗ್ರೇಟೆಸ್ಟ್ ಇಂಡಿಯನ್” ಆಗಿ ಹೊರಹೊಮ್ಮಿದ್ದರು!!

ವಾಸ್ತವ ಏನೆಂದರೆ ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಲೇಖಕ ಎಸ್.ಆನಂದ್ ರ ಪ್ರಕಾರ ಈ ಫಲಿತಾಂಶ ಮಧ್ಯಮ ವರ್ಗ ಮತ್ತು ಉಚ್ಛ ವರ್ಗ ಭಾರತೀಯರ ಹುಬ್ಬೇರಿಸಿತ್ತು. ಯಾಕೆಂದರೆ ಮತದಾನ ಆರಂಭವಾದ ಮೊದಲ ವಾರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮೊದಲ ಸ್ಥಾನದಲ್ಲಿದ್ದರು. ಅಲ್ಲದೇ 50 ಜನ ಸ್ಪರ್ಧಿಗಳ ಆ ಪಟ್ಟಿಯಲ್ಲಿ ಮಾಜಿ ಪ್ರಧಾನಿಗಳಾದ ಪಂಡಿತ್ ಜವಹರಲಾಲ್ ನೆಹರು, ಇಂದಿರಾ ಗಾಂಧಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್, ಸಮಾಜವಾದಿ ನೇತಾರ ರಾಮ ಮನೋಹರ ಲೋಹಿಯಾ, ಡಾ.ಎ.ಪಿ.ಜೆ‌.ಅಬ್ದುಲ್ ಕಲಾಂ, ಮದರ್ ಥೆರೆಸಾ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್… ಹೀಗೆ ಘಟಾನುಘಟಿಗಳಿದ್ದರು. ಈ ಘಟಾನುಘಟಿಗಳನ್ನು ಮೀರಿಸಿ ಈ ದೇಶದ ಜನ ಅಂಬೇಡ್ಕರರನ್ನು ಆರಿಸುವರೇ ಎಂದು ಅಂತಹವರು ಕುಹಕವಾಡಿದ್ದರು ಮತ್ತು ಇಂತಹ ಕುಹಕಕ್ಕೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪ್ರಜ್ಞಾವಂತ ಅನೇಕರು ಅಕ್ಷರಶಃ ಆತಂಕಗೊಂಡಿದ್ದರು‌. ಹಾಗೆಯೇ ಈ ದೇಶದ ಪಠ್ಯಪುಸ್ತಕಗಳು, ಯೂನಿವರ್ಸಿಟಿಗಳು ಗಾಂಧಿ, ನೆಹರು, ಪಟೇಲ್… ಇತ್ಯಾದಿ ಮಹಾನ್ ವ್ಯಕ್ತಿಗಳ ಬಗ್ಗೆ ಉದ್ದುದ್ದ ಪಠ್ಯ ಇಟ್ಟಿವೆ ಬಾಬಾಸಾಹೇಬ್ ಅಂಬೇಡ್ಕರರ ಬಗ್ಗೆ ಎಲ್ಲೋ ಒಂದೆರಡು ಸಾಲು ಬರೆದಿವೆ! ಇಂತಹ ವ್ಯವಸ್ಥೆಯಲ್ಲಿ ಅಂಬೇಡ್ಕರರು ಗ್ರೇಟೆಸ್ಟ್ ಆಗಿ ಹೊಮ್ಮುವರೇ ಎಂದೂ ಅವರ ಅನುಯಾಯಿಗಳು ಆತಂಕಿತರಾಗಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳು ಮತ್ತು ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಮಂಚೂಣಿ ಮಾಧ್ಯಮಗಳನ್ನು ಮೀರಿ ಚುರುಕಾಗಿರುವ ದಲಿತ ವಿದ್ಯಾವಂತ ಮಧ್ಯಮ ವರ್ಗ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿತು, ಚಾಲೆಂಜ್ ಆಗಿ ತೆಗೆದುಕೊಂಡಿತು. ದೇಶಾದ್ಯಂತ ಬಾಬಾಸಾಹೇಬ್ ಅಂಬೇಡ್ಕರರ ಹೆಸರಿಗೆ ಮಿಸ್ಡ್ ಕಾಲ್ ಕೊಡಿ ಎಂಬ ಅಭೂತಪೂರ್ವ ಅಭಿಯಾನವನ್ನೇ ಈ ಯುವ ಪಡೆ ಹಮ್ಮಿಕೊಂಡಿತು. ಪರಿಣಾಮ ಡಾ.ಅಂಬೇಡ್ಕರರು “ದ ಗ್ರೇಟೆಸ್ಟ್ ಇಂಡಿಯನ್” ಆಗಿ ಹೊಮ್ಮಿದ್ದರು.

ಆ ಸಂದರ್ಭ ಅನಿಲ್ ಗುಪ್ತ ಎಂಬುವವರು “ದಿ ರಾಯಿಟರ್ಸ್” ವೆಬ್ ಸೈಟ್ ಗೆ ಅಂಬೇಡ್ಕರರ ಈ ಗೆಲುವಿನ ಬಗ್ಗೆ ಒಂದು ಕಮೆಂಟ್ ಮಾಡುತ್ತಾರೆ. ಆ ಕಮೆಂಟ್ ಹೇಳುವುದೇನೆಂದರೆ “ಡಾ.ಅಂಬೇಡ್ಕರರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ವಿಶ್ವದಲ್ಲೇ ಶ್ರೇಷ್ಠ ಬುದ್ಧಿವಂತಿಕೆಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದವರು, ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣರಾದವರು, ಭಾರತದ ಸಂವಿಧಾನ ಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾದವರು, ಅಮೆರಿಕ, ಇಂಗ್ಲೆಂಡ್, ಜರ್ಮನಿ ಹೀಗೆ ಮೂರು ದೇಶಗಳ ಡಾಕ್ಟರೇಟ್ ಪದವಿ ಪಡೆದವರು, ಸಾವಿರ ವರ್ಷಗಳು ಮಿಕ್ಕಿ ಕಾಡುತ್ತಿದ್ದ ಅಸ್ಪೃಶ್ಯತೆ ಕೊನೆಗಾಣಿಸಿದವರು, ಮುಚ್ಚಿ ಹೋಗಿದ್ದ ಹಳೆಯ ಧರ್ಮ ಬೌದ್ಧ ಧರ್ಮವನ್ನು ಪುನರುಜ್ಜೀವನಗೊಳಿಸಿದವರು, ಶ್ರೇಷ್ಠ ಇಂಗ್ಲಿಷ್ ಲೇಖಕ, ಕಾರ್ಮಿಕ ಹಕ್ಕುಗಳ ರಕ್ಷಕ, ಮಹಿಳಾ ಹಕ್ಕುಗಳ ನಿರ್ಮಾತೃ…

ಅನಿಲ್ ಗುಪ್ತರ ಈ ಕಮೆಂಟ್ ಎಲ್ಲವನ್ನೂ ಹೇಳುತ್ತದೆ ಗ್ರೇಟೆಸ್ಟ್ ಇಂಡಿಯನ್ ಆಗಿ ಡಾ.ಅಂಬೇಡ್ಕರರು ಏಕೆ ಆಯ್ಕೆಯಾದರು ಎಂಬುದನ್ನು. ಆ ನಿಟ್ಟಿನಲ್ಲಿ 2012 ರಲ್ಲಿ ನಡೆದ ಆ ಸಮೀಕ್ಷೆ ಬಾಬಾಸಾಹೇಬ್ ಅಂಬೇಡ್ಕರರ ಆ ಮಹಾನ್ ಸಾಧನೆಗೆ ಒಂದು ಅರ್ಥಪೂರ್ಣ ಮುದ್ರೆಯೊತ್ತಿತ್ತು. ಖಂಡಿತ, ಅಂಬೇಡ್ಕರರ ಆ ಅರ್ಥಪೂರ್ಣ ಗ್ರೇಟೆಸ್ಟ್ ಸಾಧನೆ ಸರಿಗಟ್ಟುವ ಮತ್ತೊಂದು ವ್ಯಕ್ತಿತ್ವ ಈ ಭಾರತದಲ್ಲಿ ಮತ್ತೆ ಹುಟ್ಟುವ ಸಾಧ್ಯತೆ ಇಲ್ಲ ಎಂಬುದನ್ನು ಕೂಡ ಆ ಸಮೀಕ್ಷೆ ಸಾರಿ ಹೇಳಿತ್ತು.

ಇತ್ತೀಚಿನ ಸುದ್ದಿ