ಹೀನಾಯ ಸ್ಥಿತಿಯಲ್ಲಿ ಬದುಕು ದೂಡುತ್ತಿರುವ ಸೋಲಿಗರಿಗೆ ಬೇಕಿದೆ ಸೂರು!!
ಚಾಮರಾಜನಗರ: ನಗರೀಕರಣದ ಹೆಸರಿನಲ್ಲಿ ಕಟ್ಟಡಗಳನ್ನು ಕಟ್ಟಿ ಇದ್ದನ್ನೇ ಅಭಿವೃದ್ಧಿ ಎನ್ನುವ ಆಡಳಿತ ವ್ಯವಸ್ಥೆಗೆ ಬಡವರತ್ತ ಕಣ್ಣಾಯಿಸಲು ದೃಷ್ಟಿದೋಷವಾಗಿದೆ. ಸಹಾಯಸ್ತ ಚಾಚಲು ಕೈ ತುಂಡಾಗಿದೆ.
ನಗರದಲ್ಲಿ ಜನರಿಗೆ ಸೇವೆ ನೀಡಲು ಎಲ್ಲ ಇಲಾಖೆಗಳನ್ನೂ ಒಳಗೊಂಡ ಸುಸಜ್ಜಿತವಾದ ಜಿಲ್ಲಾಡಳಿತ ಭವನವಿದೆ. ಅಧಿಕಾರಿಗಳು ಫ್ಯಾನ್ ಕೆಳಗೆ, ಎಸಿ ಕೊಠಡಿಯಲ್ಲಿ ಕುಳಿತು ಆರಾಮವಾಗಿ ಕೆಲಸ ಮಾಡಲು ಉತ್ತಮವಾದ ಕೊಠಡಿಗಳಿವೆ. ಆದರೆ ಇದೇ ತಾಲೂಕಿನಲ್ಲಿರುವ ಹೆಬ್ಬಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಗುಡ್ಡದಲ್ಲಿ ವಾಸಿಸುತ್ತಿರುವ ಜನರು ಮುರಿದುಹೋದ ಸೂರಿನಲ್ಲಿ ಬದುಕುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೌಲಭ್ಯ ತಲುಪಿಸಬೇಕಾದ ಅಧಿಕಾರಿಗಳ ನೆತ್ತಿಯ ಮೇಲೆ ನೆರಳಿದೆ. ವಸತಿ ಸವಲತ್ತನ್ನೇ ಎದುರು ನೋಡುತ್ತಿರುವ ಹಿತ್ತಲಗುಡ್ಡದ ಜನರ ಮನೆಗಳು ಸೋರುತ್ತಿವೆ. ಛಾವಣಿ ಹಾರಿ ಹೋಗಿದ್ದು, ಟಾರ್ಪಾಲ್ ಹೊದಿಕೆಯಾಗಿದೆ.
ಗ್ರಾಮದಲ್ಲಿ ಸುಮಾರು 35 ಮನೆಗಳಿದ್ದು, 200ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. 3-4 ತಲೆಮಾರುಗಳಿಂದಲೂ ಇಲ್ಲೇ ವಾಸವಿರುವುದಾಗಿ ಹೇಳುವ ಇಲ್ಲಿನ ಜನರು, ಮಲೆಕಾಡು, ಕನ್ನೇರಿಕಾಲನಿ, ಬೂದಿಪಡಗ ಇನ್ನಿತರ ಕಡೆಗಳಲ್ಲಿ ಸಂಬಂಧಿಕರು ಇರುವುದಾಗಿ ಹೇಳುತ್ತಾರೆ. ಜತೆಗೆ ಎಷ್ಟೋ ವರ್ಷಗಳ ಹಿಂದೆ ತಮಗೆ ಇಲ್ಲಿ ಮನೆ ಕಟ್ಟಿಕೊಟ್ಟಿರುವುದಾಗಿ ಹೇಳುತ್ತಾ ಪ್ರಸ್ತುತ ಮನೆಗಳ ಸ್ಥಿತಿ ಮತ್ತು ತಮ್ಮ ಶೋಚನೀಯ ಬದುಕಿನ ಬಗ್ಗೆ ಅಳಲು ತೋಡಿಕೊಳ್ಳುತ್ತಾರೆ.
ಪ್ರಾಣಿಗಳಿಗಿಂತಲೂ ಕಡೆಯಾದ ಬದುಕು:
ಹಿತ್ತಲಗುಡ್ಡ ಗ್ರಾಮದಲ್ಲಿ ಕೆಲವರು ಪ್ರಾಣಿಗಳಿಗಿಂತಲೂ ಕಡೆಯಾಗಿ ಜೀವಿಸುತ್ತಿದ್ದಾರೆ. ಮುರಿದುಹೋದ ಛಾವಣಿ, ಕುಸಿದು ಬಿದ್ದ ಗೋಡೆಗಳ ಮಧ್ಯೆ ಗರಿಯಲ್ಲಿ ಕಟ್ಟಿಕೊಂಡಿರುವ ಗೂಡಿನಲ್ಲಿ ವೃದ್ಧ ಮಹಿಳೆಯರು ವಾಸ ಮಾಡುತ್ತಿದ್ದಾರೆ. ಶ್ರೀಮಂತರ ಮನೆಯಲ್ಲಿ ಸಾಕಿದ ನಾಯಿಗಳೂ ಇಂತಹ ಸ್ಥಿತಿಯಲ್ಲಿ ಬದುಕುವುದಿಲ್ಲ. ಆದರೆ ಇಲ್ಲಿನ ಬಡಜನರು ಕತ್ತಲಗೂಡುಗಳಲ್ಲಿ ಪ್ರಾಣಿಗಳಿಗಿಂತಲೂ ಕಡೆಯಾಗಿ ಜೀವಿಸುತ್ತಿದ್ದಾರೆ. ಇನ್ನಷ್ಟು ಮನೆಗಳ ಛಾವಣಿ ಕುಸಿದಿದೆ. ಇದಕ್ಕೆ ಕಂಬಗಳು ಆಸರೆಯಾಗಿವೆ. ಕಿಟಕಿ, ಬಾಗಿಲುಗಳು ಮುರಿದಿವೆ. ನೆಲದ ಮೇಲಿದ್ದ ಸಿಮೆಂಟ್ ಪುಡಿಯಾಗಿ ಮಣ್ಣು ತುಂಬಿಕೊಂಡಿದೆ. ಜೋರಾಗಿ ಮಳೆ ಸುರಿದಾಗ ಬಯಲಿನಂತೆ ಮನೆಯಲ್ಲೂ ಮಳೆ ನೀರು ಸುರಿಯುತ್ತದೆ. ಇವರಿಗೆ ನೆತ್ತಿ ಮೇಲೊಂದು ಸೂರು ಇಲ್ಲ ಎನ್ನುವುದು ಅಧಿಕಾರಿಗಳಿಗೂ ಗೊತ್ತು, ಜನಪ್ರತಿನಿಧಿಗಳಿಗೂ ತಿಳಿದಿದೆ. ಆದರೆ ಏನು ಪ್ರಯೋಜನ?
ಸಾಲ ಮಾಡಿ ಮನೆ ಕಟ್ಟಿ:
ಹಿತ್ತಲಗುಡ್ಡ ಗ್ರಾಮ ಸೇರಿರುವ ಹೆಬ್ಬಸೂರು ಗ್ರಾಮ ಪಂಚಾಯಿತಿಗೆ ಬಸವ ವಸತಿ ಯೋಜನೆಯಡಿ ಒಟ್ಟು 14 ಮನೆಗಳ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. 1 ಮನೆಗೆ 1.75 ಲಕ್ಷ ರೂ. ಅನುದಾನ ಸಿಗುತ್ತದೆ. ಈ ವಿಷಯವನ್ನು ಸೋಲಿಗರಿಗೆ ತಿಳಿಸಿ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಗ್ರಾಪಂ ಸಿಬ್ಬಂದಿ ನೀಡುವ ಮಾಹಿತಿ ಪ್ರಕಾರ, 7 ಜನರು ದಾಖಲೆಗಳನ್ನು ನೀಡಿದ್ದಾರೆ. ಉಳಿದವರ ಬಳಿ ದಾಖಲೆಗಳ ಹೊಂದಿಸುವ ಕಾರ್ಯ ನಡೆಯುತ್ತಿದೆ. ಆದರೆ ಸೋಲಿಗರ ಬಳಿ ಸೂಕ್ತ ದಾಖಲೆಗಳಿಲ್ಲ. ಇನ್ನು ದಾಖಲೆಗಳು ಇರುವವರು 1.75 ಲಕ್ಷ ರೂ.ಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದೆ ಚಿಂತೆಗೀಡಾಗಿದ್ದಾರೆ.
ಈಗ ಇರುವ ಮನೆಗಳು ಸಂಪೂರ್ಣ ಹಾಳಾಗಿರುವುದರಿಂದ ಇಷ್ಟು ಹಣದಲ್ಲಿ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಸಾಲ ಮಾಡಿ ತಾವೂ ಕೈಯಿಂದ ಇನ್ನಷ್ಟು ಹಣ ಹಾಕಬೇಕು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವವರು ಸಾಲ ಮಾಡಿ ಮನೆ ನಿರ್ಮಾಣ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬುದು ಸೋಲಿಗರ ಅಳಲಾಗಿದೆ.
ಇನ್ನು ಗ್ರಾಪಂ ನೀಡಿರುವ ಸೌಲಭ್ಯವನ್ನು ಬಳಸಿಕೊಂಡು ಪುಟ್ಟದಾದ ಮನೆ ನಿರ್ಮಾಣ ಮಾಡುತ್ತಿರುವ ಹಿತ್ತಲಗುಡ್ಡದ ನಿವಾಸಿ ಪ್ರದೀಪ್‌ಕುಮಾರ್, ಸಂಘದಲ್ಲಿ ಸಾಲ ಮಾಡಿ ಇನ್ನಷ್ಟು ಹಣವನ್ನು ಕೈಯಿಂದ ಹಾಕಿದ್ದಾರೆ. ಈ ಸಾಲವನ್ನು ತೀರಿಸಬೇಕು. ಹಾಗಾಗಿ, ತಾನು ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತೇನೆ. ಹೀಗಾಗಿ ಮನೆ ಕಟ್ಟಲು ಮಾಡಿರುವ ಸಾಲ ತೀರಿಸಬೇಕೆಂದರೆ 2 ವರ್ಷಗಳು ಬೇಕು ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
“ನನಗೆ ತಿಳಿದಿರುವ ಹಾಗೆ ಸುಮಾರು 30 ವರ್ಷಗಳ ಹಿಂದೆ ಮನೆ ನಿರ್ಮಾಣ ಮಾಡಿಕೊಡಲಾಗಿತ್ತು. ಈಗ ಇವುಗಳ ಸ್ಥಿತಿ ತುಂಬಾ ಹದಗೆಟ್ಟಿದೆ. ನಮ್ಮ ಮನೆಯ ಛಾವಣಿ ಹಾಳಾಗಿದೆ. ಮಳೆ ಬಂದರೆ ಸೋರುತ್ತದೆ ಎಂದು ಕಣ್ಣೀರಾಗುತ್ತಾರೆ ವೃದ್ಧೆ
ಮುತ್ತಮ್ಮ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಡವರತ್ತ ದೃಷ್ಟಿ ಹಾಯಿಸಿ ಕನಿಷ್ಠ ಮೂಲಸೌಕರ್ಯವಾದರು ಕೊಡಬೇಕಿದೆ.