ಅಂದು ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ವ್ಯಕ್ತಿ ಇದೀಗ ಆಡಿಷನಲ್ ಡಿಸ್ಟ್ರಿಕ್ಟ್ ನ್ಯಾಯಾಧೀಶ!
ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ವ್ಯಕ್ತಿ ಇದೀಗ ಆಡಿಷನಲ್ ಡಿಸ್ಟ್ರಿಕ್ಟ್ ನ್ಯಾಯಾಧೀಶರಾಗುತ್ತಿದ್ದಾರೆ. ಇವರ ಹೆಸರು ಪ್ರದೀಪ್ ಕುಮಾರ್. ಇವರು ಉತ್ತರ ಪ್ರದೇಶದ ಕಾನ್ಪುರದವರು. ಇವರನ್ನು ಜಡ್ಜ್ ಆಗಿ ನೇಮಿಸಿರುವ ಆದೇಶ ಪತ್ರವನ್ನು ಅವರಿಗೆ ತಲುಪಿಸುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.
ಗೂಢಚಾರಿಕೆ ಆರೋಪದಲ್ಲಿ 2002ರಲ್ಲಿ ಇವರನ್ನು ಬಂಧಿಸಲಾಗಿತ್ತು. ಆಗ ಇವರು 24 ವರ್ಷದ ಕಾನೂನು ಪದವೀಧರ. ದೇಶದ್ರೋಹ, ಕ್ರಿಮಿನಲ್ ಗೂಢಚಾರಿ ಮತ್ತು ಅಧಿಕೃತ ರಹಸ್ಯ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2014ರಲ್ಲಿ ಕಾನ್ಪುರ್ ನ್ಯಾಯಾಲಯ ಇವರನ್ನು ದೋಷ ಮುಕ್ತಗೊಳಿಸಿತು.
ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಎಸ್ ಟಿ ಎಫ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿತ್ತು. ಸುಲಭದಲ್ಲಿ ಹಣ ಮಾಡುವ ದಾರಿಯನ್ನು ಈ ಪ್ರದೀಪ್ ಹುಡುಕುತ್ತಿದ್ದ. ಆಗ ಫೋಟೋ ಸ್ಟಾರ್ಟ್ ಅಂಗಡಿಯನ್ನು ನಡೆಸುತ್ತಿದ್ದ ಇಲಾಹಿಯ ಪರಿಚಯವಾಯಿತು. ಈ ಇಲಾಹಿಯ ನಿರ್ದೇಶನದಂತೆ ಕಾನ್ಪುರ್ ಕಂಟೋನ್ಮೆಂಟ್ ಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪ್ರದೀಪ್ ಆತನಿಗೆ ವರ್ಗಾಯಿಸಿದ. ಇದಕ್ಕಾಗಿ ಪ್ರದೀಪ್ ಗೆ ಈ ಇಲಾಹಿ 18 ಸಾವಿರ ರೂಪಾಯಿ ನೀಡಿದ ಎಂದು ಆರೋಪ ಪತ್ರದಲ್ಲಿ ಹೇಳಲಾಗಿದೆ. ಆದರೆ ಸರಕಾರದ ವಿರುದ್ಧ ದ್ವೇಷವನ್ನೋ ವಿರೋಧವನ್ನೋ ಪ್ರಚಾರ ಮಾಡಿದ್ದಾರೆ ಎಂದು ಸಾಬೀತಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ 2014ರಲ್ಲಿ ಕಾನ್ಪೂರ್ ನ್ಯಾಯಾಲಯ ಪ್ರದೀಪ್ ನನ್ನು ದೋಷ ಮುಕ್ತಗೊಳಿಸಿತು.
2017ರಲ್ಲಿ ಈ ಪ್ರದೀಪ್ ಕುಮಾರ್ ಹೈಯರ್ ಜ್ಯುಡಿಶಿಯಲ್ ಸರ್ವಿಸ್ ಪರೀಕ್ಷೆ ಬರೆದರು ಮತ್ತು 27ನೇ ರಾಂಕ್ ಪಡೆದರು. ರಾಂಕ್ ಲಿಸ್ಟ್ ನಲ್ಲಿ ಇರುವವರನ್ನು ನ್ಯಾಯಾಧೀಶರಾಗಿ ನೇಮಿಸುವಂತೆ ಅಲಹಾಬಾದ್ ಹೈಕೋರ್ಟ್ 2017 ಆಗಸ್ಟ್ 18ರಂದು ನಿರ್ದೇಶಿಸಿತಾದರೂ ಪ್ರದೀಪ್ ಕುಮಾರ್ ಗೆ ಮಾತ್ರ ನ್ಯಾಯಾಧೀಶ ಆಗುವ ಭಾಗ್ಯ ಲಭಿಸಿರಲಿಲ್ಲ. ಇದನ್ನು ಪ್ರಶ್ನಿಸಿ 2017 ಆಗಸ್ಟ್ ನಲ್ಲಿ ಪ್ರದೀಪ್ ಕುಮಾರ್ ಹೈಕೋರ್ಟ್ ಮೆಟ್ಟಲೇರಿದರು. ಈ ಬಗ್ಗೆ ಪರಿಶೀಲಿಸುವಂತೆ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ಪ್ರದೀಪ್ ಕುಮಾರ್ ನನ್ನು ನ್ಯಾಯಾಧೀಶರನ್ನಾಗಿ ಮಾಡಬೇಕಿಲ್ಲ ಎಂದು 2019 ಸೆಪ್ಟೆಂಬರ್ ನಲ್ಲಿ ಉತ್ತರ ಪ್ರದೇಶ ಸರಕಾರ ನ್ಯಾಯಾಲಯಕ್ಕೆ ತಿಳಿಸಿತು. ಇದನ್ನು ಪ್ರಶ್ನಿಸಿ ಪ್ರದೀಪ್ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದರು. ಇದನ್ನು ಪರಿಗಣಿಸಿದ ನ್ಯಾಯಾಲಯ 2025 ಜನವರಿ 15ರ ಒಳಗೆ ಪ್ರದೀಪನನ್ನು ನ್ಯಾಯಾಧೀಶರಾಗಿ ನೇಮಿಸುವಂತೆ ಸರಕಾರಕ್ಕೆ ಸೂಚಿಸಿತು.
ಇವರು ಸರ್ಕಾರದ ವಿರುದ್ಧ ಗೂಢಚಾರಿಕೆ ನಡೆಸಿದ್ದಾರೆ ಎಂದು ಸಾಬೀತುಪಡಿಸುವುದಕ್ಕೆ ಸರ್ಕಾರದ ಬಳಿ ಯಾವ ಆಧಾರವೂ ಇಲ್ಲ. ವ್ಯಕ್ತಿಯೋರ್ವ ತಪ್ಪು ಮಾಡಿದ್ದಾನೆ ಎಂದು ಸಂಶಯಿಸುವುದು ತಪ್ಪಿಗೆ ಆಧಾರವಲ್ಲ. ಓರ್ವ ವ್ಯಕ್ತಿ ದೋಷ ಮುಕ್ತನಾದ ಬಳಿಕವೂ ಆತನನ್ನು ಅನುಮಾನಿಸುವುದು ತಪ್ಪು. ದೋಷ ಮುಕ್ತ ಆದ ವ್ಯಕ್ತಿ ಅನುಮಾನದ ಆಧಾರದಲ್ಲಿ ಶಿಕ್ಷೆಗೆ ಒಳಗಾಗುವುದು ಸಂವಿಧಾನಕ್ಕೆ ವಿರೋಧ ಎಂದು ನ್ಯಾಯಾಲಯ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj