ಬಹುಮುಖ ಪ್ರತಿಭೆಯ ಜಾನಪದ ತಜ್ಞ “ಸಿಂಪಿ ಲಿಂಗಣ್ಣ”
- ಉದಂತ ಶಿವಕುಮಾರ್
ಕರ್ನಾಟಕದ ಜಾನಪದ ರತ್ನ, ಜಾನಪದ ದಿಗ್ಗಜರೆಂದು ಖ್ಯಾತರಾದ ಸಿಂಪಿ ಲಿಂಗಣ್ಣನವರು, ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗೂ ಜಾನಪದ ತಜ್ಞರು. ಹಳ್ಳಿಯ ಸಮುದಾಯವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಚ್ಚರಿಸಲು ಪ್ರಯತ್ನ ಪಟ್ಟವರು. ಶ್ರೇಷ್ಠ ಶಿಕ್ಷಕರು, ಮಧುರ ಚೆನ್ನರ ಒಡನಾಡಿಗಳು, ಅರವಿಂದರ ಭಕ್ತರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ ಅರವಿಂದ ಗ್ರಂಥಾಲಯವನ್ನು ತೆರೆದು ಅನೇಕ ಪುಸ್ತಕಗಳನ್ನು ಇವರು ಪ್ರಕಟಿಸಿದರು.
ಸಿಂಪಿ ಲಿಂಗಣ್ಣನವರು ದಿನಾಂಕ 11-02-1905ರಲ್ಲಿ ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕಿನ, ಚಡಚಣ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಿವಯೋಗಿ, ತಾಯಿ ಸಾವಿತ್ರಮ್ಮ. ಸಿಂಪಿ ಲಿಂಗಣ್ಣನವರು 1922 ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ, ಶಿಕ್ಷಕರ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಶಿಕ್ಷಕರ ಟ್ರೈನಿಂಗ್ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವಾರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದರು. ಶಿಕ್ಷಕ ವೃತ್ತಿಯಿಂದ 1960ರಲ್ಲಿ ನಿವೃತ್ತರಾದರು. ಇವರ ತಾಯಿ ಮತ್ತು ಅತ್ತಿಗೆಯವರು ಹೇಳುತ್ತಿದ್ದ ತ್ರಿಪದಿಗಳನ್ನು ಬಾಲ್ಯದಿಂದಲೇ ಕೇಳುತ್ತಾ, ಸಿಂಪಿ ಲಿಂಗಣ್ಣನವರು ಜನಪದ ಸಾಹಿತ್ಯದ ಒಲವನ್ನು ಬೆಳೆಸಿಕೊಂಡರು.
ಇವರು ಸಂಗ್ರಹಿಸಿದ ಜಾನಪದ ಹಾಡುಗಳಲ್ಲಿ “ಗರತಿಯ ಹಾಡು” ಮತ್ತು “ಜೀವನ ಸಂಗೀತ” ಎಂಬ ಸಂಕಲಗಳನ್ನು ಪ್ರಕಟಿಸಿದರು. ನಂತರ “ಉತ್ತರ ಕರ್ನಾಟಕದ ಜಾನಪದ ಕಥೆಗಳು” ಶಾಸ್ತ್ರೀಯವಾಗಿ 9 ಭಾಗಗಳಾಗಿ ವಿಭಜಿಸಿ ಪ್ರಕಟಿಸಿದ ಈ ಕೃತಿಯು ಎಂ.ಎ., ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. ಜಾನಪದ ವಿಮರ್ಶೆ ಕೃತಿ “ಜನಾಂಗದ ಜೀವಾಳ” ಪುಸ್ತಕವನ್ನು ಮಿಂಚಿನ ಬಳ್ಳಿ ಪ್ರಕಾಶನ 1957 ರಲ್ಲಿ ಪ್ರಕಟಿಸಿತು. ಇದರಲ್ಲಿ ಜನಪದ ಕಥೆಗಳು,ಗಾದೆಗಳು, ಒಗಟುಗಳು, ಬಯಲಾಟದ ಹಾಡುಗಳು, ಪಡೆನುಡಿಗಳು ಇವೆಲ್ಲದರ ರಸಭರಿತ ವಿಶ್ಲೇಷಣೆಯ ವಿಶಿಷ್ಟ ಕೃತಿ ಇದಾಗಿದೆ.
ಸಿಂಪಿ ಲಿಂಗಣ್ಣನವರಿಗೆ ಜಾನಪದ ಕ್ಷೇತ್ರದಷ್ಟೇ ಪ್ರಿಯವಾದ ಮತ್ತೊಂದು ಕ್ಷೇತ್ರವೆಂದರೆ ಕಾವ್ಯ ಪ್ರಕಾರ 1936ರಲ್ಲಿ ರಾಮನರೇಶ್ ತ್ರಿಪಾಠಿಯವರು ಹಿಂದಿಯಲ್ಲಿ ಬರೆದ ‘ಮಿಲನ’ ಖಂಡಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ಜಾನಪದ ಮತ್ತು ಕಾವ್ಯದ ಜೊತೆಗೆ ಇವರು ಉತ್ಕೃಷ್ಟ ಕೃತಿಗಳನ್ನು ನೀಡಿದ ಮತ್ತೊಂದು ಕ್ಷೇತ್ರವೆಂದರೆ ಪ್ರಬಂಧ ಪ್ರಕಾರ ಸುಮಾರು 15 ಪ್ರಬಂಧ ಕೃತಿಗಳನ್ನು, 18 ಜೀವನ ಕೃತಿಗಳನ್ನು, 8 ನಾಟಕ ಕೃತಿಗಳನ್ನು, 4 ಕಥಾ ಸಂಕಲನಗಳನ್ನು, 16 ಮಕ್ಕಳ ಸಾಹಿತ್ಯ ಕೃತಿಗಳನ್ನು, ರಾಮತೀರ್ಥರ ಬಗ್ಗೆ 5 ಕೃತಿಗಳನ್ನು ಶ್ರೀ ಅರವಿಂದರ ಬಗ್ಗೆ 12 ಕೃತಿಗಳನ್ನು ಹೀಗೆ ಹಲವಾರು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ಸಿಂಪಿ ಲಿಂಗಣ್ಣನವರು ನೀಡಿದ್ದಾರೆ.
ಡಾ. ಎಂ.ಎಲ್. ವಾಲಿಯವರು “ಸಿಂಪಿಲಿಂಗಣ್ಣನವರ ಜೀವನ ಸಾಧನೆ”ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ. ಸಿಂಪಿ ಲಿಂಗಣ್ಣನವರಿಗೆ 1944ರಲ್ಲಿ ರಬಕವಿಯಲ್ಲಿ ನಡೆದ 28ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯ ಅಧ್ಯಕ್ಷತೆ, (ಆಗ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಎಸ್ ಎಸ್ ಬಸವನಾಳರು). 1969ರಲ್ಲಿ ನಡೆದ ಅಖಿಲ ಕರ್ನಾಟಕ ಎರಡನೇ ಜಾನಪದ ಸಮ್ಮೇಳದ ಅಧ್ಯಕ್ಷತೆ, 1972ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1979ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇಳಕಲ್ಲಿನಲ್ಲಿ ಆಯೋಜಿಸಿದ್ದ ಆರನೇ ಜಾನಪದ ಸಮ್ಮೇಳನದ ಅಧ್ಯಕ್ಷತೆ, 1980 ರಲ್ಲಿ ಜಮಖಂಡಿಯಲ್ಲಿ ನಡೆದ ವಿಜಾಪುರ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ, 1989ರಲ್ಲಿ ಹೊಸಪೇಟೆಯಲ್ಲಿ ನಡೆದ ಶಕ್ತಿ ಕೇಂದ್ರ ಮಕ್ಕಳ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ, 1992 ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಜಾನಪದದ ಕೃಷಿಯಲ್ಲಿ ಗರತಿಯ ಹಾಡು, ಜೀವನ ಸಂಗೀತ, ಉತ್ತರ ಕರ್ನಾಟಕದ ಜನಪದ ಕಥೆಗಳು, ಗರತಿಯ ಬಾಳು, ಜನಾಂಗದ ಜೀವಾಳ, ಹೆಡಿಗೆ ಜಾತ್ರೆ, ಗಾದೆಗಳ ಗಾರುಡಿ, ಗರತಿಯ ಬಾಳ ಸಂಮಿತೆ, ಉತ್ತರ ಕರ್ನಾಟಕದ ಜನಪದ ಗೀತೆಗಳು, ಕಿರಿದರೋಲ್ ಪಿರಿದರ್ಥದ ಚಲಕ, ಲಾವಣಿಗಳು ಕೃತಿಗಳನ್ನು ರಚಿಸಿದ್ದಾರೆ.
ಸಿಂಪಿ ಲಿಂಗಣ್ಣನವರು ಬರೆದ ಕವನಸಂಕನಲಗಳನ್ನು ಹೆಸರಿಸುವುದಾದರೆ ಮಿಲನ, ಮುಗಿಲ ಜೇನು, ಶ್ರುತಾಶ್ರುತ, ಪೂಜಾ, ಮಾತೃವಾಣಿ, ನಮಸ್ಕಾರ, ಸಾಯ್ ಕೋಲ್. ಸಿಂಪಿ ಲಿಂಗಣ್ಣರವರು ಬರೆದ ಕಥಾ ಸಂಕಲನಗಳು ಪವಿತ್ರ ಜೀವನ ಮತ್ತು ಢಾಳಿಸಿದ ದೀಪ,
ಸಿಂಪಿ ಲಿಂಗಣ್ಣ ಅವರು ಬರೆದಿರುವ ಲೇಖನ ಕೃತಿಗಳು ಅಸ್ತವ್ಯಸ್ತ, ದಿಟ್ಟಿಸಿ ನೋಡಿದರೆ, ಭಾರತದ ಭವ್ಯಸಿದ್ಧತೆ, ತಲೆಮಾರಿನ ಹಿಂದೆ, ಸ್ವರ್ಗದೋಲೆಗಳು, ಜೀವನದೃಷ್ಠಿ, ನಾಟ್ಯ ಸಾಧನೆ, ಸನ್ಯಾಸಿ ದಿಬ್ಬ, ಬಾಳಬಟ್ಟೆ, ಮಕ್ಕಳಿವರೇನಮ್ಮ? ಬಾಳಬೇಸಾಯ, ನೂರು ಗಡಿಗೆ ಒಂದು ಬಡಿಗೆ, ಆರ್ಯದೇಶಭಕ್ತಿ, ಭಾರತದ ಸಾಂಸ್ಕೃತಿಕ ಸಂಘಟನೆ, ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ? ಬದುಕಿನ ಬೆಲೆ, ಸಾಹಿತ್ಯ ಸಂಪರ್ಕ ಮುಂತಾದವು.
ಇವರು ಬರೆದ ಜೀವನ ಚರಿತ್ರೆಗಳೆಂದರೆ ಹಳ್ಳಿಯ ಮಹಾತ್ಮ, ನಾಮದೇವ, ಗುಡ್ಡಾಪುರ ದಾನಮ್ಮ, ಭಕ್ತರಾಜ ಬಸವೇಶ್ವರ, ಬಬಲೇಶ್ವರ ಸ್ವಾಮಿಗಳು, ಕನ್ನಡ ಕುಲದೀಪ ಬಸವಣ್ಣ, ರಾಮತೀರ್ಥರ ತೀರ್ಥ, ಭಾರತೀಯ ಮಹಾಪುರುಷರು, ದೇಶಭಕ್ತರ ಕಥೆಗಳು, ಸಿಡಿಲು ಸನ್ಯಾಸಿ, ಮಹತ್ ಕ್ರಾಂತಿಯ ಮಹಾಮನು, ಮಧುರ ಚನ್ನರ ಸ್ಮೃತಿಗಳು, ಮಧುರ ಚೆನ್ನರು, ದತ್ತ ಸಾಹಿತ್ಯ, ಪ್ರಾಯದರ್ಶಿ ಅಶೋಕ, ವಿಶ್ವಕವಿರವೀಂದ್ರ, ಗಣದಾಸಿ ವೀರಣ್ಣ, ಮಕ್ಕಳ ಶ್ರೀ ಅರವಿಂದರು, ಸುಪ್ರಮಾನಸದ ಮಹಾಮಾತೆ, ಗಾಂಧಿ ಶತದಲ, ಹಾವಿನಾಳ ಕಲ್ಲಯ್ಯ, ಕನ್ನಡಿಗರ ಕುಲಗುರು, ಕರೆಯಿಸಿಕೊಂಡು ಬಂದವರು, ಶ್ರೀತಾಯಿಯವರು, ಬಾಳಿನಲ್ಲಿ ಬೆಳಕು ಮುಂತಾದವು.
ಸಿಂಪಿ ಲಿಂಗಣ್ಣ ಅವರು ಬರೆದಿರುವ ಆತ್ಮಚರಿತ್ರೆಗಳು ಬಾಳಸಂಜೆಯ ಹಿನೋಟ ಮತ್ತು ನಾಗಾಲೋಟ.
ರಾಮತೀರ್ಥರ ಬಗ್ಗೆ ಕುರಿತು ಬರೆದ ಕೃತಿಗಳೆಂದರೆ ಸುಖದ ನೆಲೆ, ಭಾರತದ ಸಮಸ್ಯೆ, ಬಿಚ್ಚುಮೊಗ್ಗೆ, ರಾಮತೀರ್ಥರ ಪತ್ರಗಳು, ಮನೆಯಲ್ಲೇ ಮುಕ್ತಿಯ ದಾರಿ,
ಅರವಿಂದರ ಬಗ್ಗೆ ಬರೆದ ಕೃತಿಗಳೆಂದರೆ ಧರ್ಮ ಹಾಗೂ ರಾಷ್ಟ್ರೀಯತ್ವ, ಯೋಗದಿಕ್ಷೆ, ಶ್ರೀ ಅರವಿಂದರ ಪತ್ರಗಳು, ಪೂರ್ಣಯೋಗದ ಜೀವಾಳ, ದೀಪಾವರ್ತಿ, ಸುಂದರ ಕಥೆಗಳು, ಧರ್ಮ ಕ್ಷೇತ್ರೆ ಕುರುಕ್ಷೇತ್ರೆ, ದುರ್ಗಾಸ್ತ್ರೋತ್ರ, ಉತ್ತರಪಾದಾ ಉಪನ್ಯಾಸ, ಗೀತೆಯ ಭೂಮಿಕೆ, ಪೂರ್ಣಯೋಗ, ಪ್ರಾರ್ಥನಾ ಪದ್ಯಗಳು.
ಸಿಂಪಿ ಲಿಂಗಣ್ಣ ಅವರು ಬರೆದಿರುವ ನಾಟಕಗಳು ಜನಜೀವನ, ಭಕ್ತಿ ರಹಸ್ಯ, ಮರೆ ಮುಚ್ಚುಕ, ಚಂಡಾಳ ಚೌಕಡಿ, ಪೃಥ್ವಿರಾಜ, ಮೊದಲನೇ ದೇಶದ್ರೋಹಿ, ಸಪ್ತಪದಿ. ಇವರು ಬರೆದ ಫ್ರೌಢಸಾಕ್ಷರ ಕೃತಿಗಳು ಹರಿಜನೋದ್ಧಾರ, ಅಕ್ಕ ತಂಗಿಯರಿಗೆ, ವಿಶ್ವಾಮಿತ್ರ, ಭಗವಾನ್ ಬುದ್ಧ ದೇವ, ಲೋಬೋ ಲೋಬೋ, ಅಂದಚಂದ, ತಿರುವಲ್ಲವರ, ಸ್ವಾರ್ಥ ತ್ಯಾಗ, ಪೌರ ನೀತಿ ಅ ಆ, ಕಿರುಗನ್ನಡಿ, ಕವಿ ಮತ್ತು ಕಾವ್ಯ.
ಸಿಂಪಿ ಲಿಂಗಣ್ಣ ಅವರು ಬರೆದಿರುವ ಕಾದಂಬರಿ “ಬೆಟ್ಟದ ಹೊಳೆ”
ಸಿಂಪಿಲಿಂಗಣ್ಣನವರಿಗೆ 1960ರಲ್ಲಿಆದರ್ಶ ಶಿಕ್ಷಕ ಪ್ರಶಸ್ತಿ, 1968ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರ್ ಪದವಿ. ಬಾಂಬೆ ಸರ್ಕಾರದ ಪ್ರಶಸ್ತಿ, ಮೈಸೂರು ಸರಕಾರದ ಪ್ರಶಸ್ತಿ, 1993ರಲ್ಲಿ ಕೊಪ್ಪಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1956 ರಲ್ಲಿ ಸ್ವರ್ಗದೋಲೆಗಳು ಕೃತಿಗೆ ಮುಂಬೈ ಸರ್ಕಾರದ ಬಹುಮಾನ, 1959ರಲ್ಲಿ ಗರತಿಯ ಬಾಳು ಕೃತಿಗೆ ಮೈಸೂರು ಸರಕಾರದ ಬಹುಮಾನ, 1960ರಲ್ಲಿ ಜನಾಂಗದ ಜೀವಾಳ ಕೃತಿಗೆ ಕರ್ನಾಟಕ ಸರ್ಕಾರದ ಪ್ರಶಸ್ತಿ, 1968 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ, 1977ರಲ್ಲಿ ನಾಟ್ಯ ಸಾಧನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1980 ರಲ್ಲಿ ಜಾನಪದ ಟ್ರಸ್ಟ್ ನಿಂದ ಸನ್ಮಾನ, ನೂರು ಗಡಿಗೆ ಒಂದು ಬಡಿಗೆ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1988 ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ತಜ್ಞ ಪ್ರಶಸ್ತಿ, 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ, 1989ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ
ಸಿಂಪಿ ಲಿಂಗಣ್ಣನವರು 1993 ಮೇ 5 ರಂದು ನಿಧನರಾದರು. ಬಹುಮಖ ಪ್ರತಿಭೆಯ ಜಾನಪದ ತಜ್ಞ ಸಿಂಪಿ ಲಿಂಗಣ್ಣ ಅವರ ಹೆಸರಿನಲ್ಲಿ ಅವರ ಕುಟುಂಬ ವರ್ಗ ಸಾಹಿತ್ಯದಲ್ಲಿ ಸೇವೆಯನ್ನು ಗುರುತಿಸಿ ಅಂಥವರಿಗೆ ಪ್ರಶಸ್ತಿ ನೀಡುತ್ತಿದೆ. 2024 ಫೆಬ್ರವರಿ 11ಕ್ಕೆ ಅವರ 119ನೇ ಜನ್ಮದಿನದ ಈ ಸಂದರ್ಭದಲ್ಲಿ ಅವರ ಸಾಧನೆಯ ಕಿರುಪರಿಚಯ ನಮಗಿರಲಿ…