ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ: ಡಿ.ಕೆ. ಶಿವಕುಮಾರ್
ಬೆಂಗಳೂರು:ಬಹುದೊಡ್ಡ ಜನಾಶಿರ್ವಾದದೊಂದಿಗೆ ನಾಳೆ ರಚನೆಯಾಗುತ್ತಿರುವ ಕಾಂಗ್ರೆಸ್ ಪಕ್ಷದ ನೂತನ ಸರ್ಕಾರ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ. ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಈಡೆರಿಸುತ್ತೇವೆ’ ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
“ಕರ್ನಾಟಕ ರಾಜ್ಯದ ಎಲ್ಲಾ ಜನತೆಗೆ, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನೀವು ಬಯಸಿದ ಸರ್ಕಾರ. ಜನರ ಧ್ವನಿ ರಾಜ್ಯ ಸರ್ಕಾರದ ಧ್ವನಿಯಾಗಲಿದೆ.
ನಾವು ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಈ ಸರ್ಕಾರ ನಾಳೆ ರಚನೆ ಆಗುತ್ತಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಎಲ್ಲಾ ನಾಯಕರು ಆಗಮಿಸುತ್ತಿದ್ದಾರೆ. ರಾಷ್ಟ್ರದ ಅನೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮಾಧ್ಯಮಗಳ ಮೂಲಕ ಆಹ್ವಾನ ನೀಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಆಗಮಿಸುವರು 11 ಗಂಟೆ ಒಳಗಾಗಿ ಆಗಮಿಸಬೇಕು. ತಡವಾಗಿ ಬಂದರೆ ಗಣ್ಯರ ಭೇಟಿ ಹಿನ್ನೆಲೆಯಲ್ಲಿ ರಸ್ತೆ ನಿರ್ಬಂಧ ಮಾಡಲಾಗಿರುತ್ತದೆ.
ಈ ನೂತನ ಸರ್ಕಾರ ರಚನೆ ಕಾರ್ಯಕ್ರಮ ಪಕ್ಷಾತೀತ ಕಾರ್ಯಕ್ರಮ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೂ ಆಹ್ವಾನ ನೀಡುತ್ತೇವೆ. ನೀವು ಅನ್ಯತಾ ಭಾವಿಸದೆ, ನೀವು ಜನಪ್ರತಿನಿಧಿಗಳಾಗಿದ್ದೀರಿ. ನೀವು ಸರ್ಕಾರದ ಭಾಗ. ಹೀಗಾಗಿ ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ.”
ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, ‘ನಾವು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ವಿಚಾರವಾಗಿ ಚರ್ಚೆ ಮಾಡುತ್ತೇವೆ. ನಾವು ಸಧ್ಯಕ್ಕೆ ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ನಮ್ಮ ಆದ್ಯತೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿ ಜನರ ಸೇವೆ ಮಾಡುತ್ತೇವೆ’ ಎಂದು ತಿಳಿಸಿದರು.
ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿಗೆ ಷರತ್ತು ಅನ್ವಯ ಆಗುವುದೇ ಎಂಬ ಪ್ರಶ್ನೆಗೆ, ‘ಈಗ ಈ ವಿಚಾರವಾಗಿ ಏನನ್ನೂ ಹೇಳುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ. ನಾವು ತೀರ್ಮಾನ ಮಾಡಿ ನಿಮಗೆ ಮಾಹಿತಿ ನೀಡಿಯೇ ಯೋಜನೆ ಜಾರಿ ಮಾಡುತ್ತೇವೆ. ಈ ಗ್ಯಾರಂಟಿ ಯೋಜನೆಗಳು ಕೇವಲ ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಗ್ಯಾರಂಟಿ ಅಲ್ಲ. ಇದು ಕಾಂಗ್ರೆಸ್ ಗ್ಯಾರಂಟಿ. ಈ ಯೋಜನೆಗಳಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ನಾನು, ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದು, ಈ ಯೋಜನೆ ಜಾರಿ ಮಾಡುತ್ತೇವೆ ‘ ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw