'ಹೊಲಿಗೆಯಂತ್ರ' ನಡೆದು ಬಂದ ದಾರಿ ಮತ್ತು 'ಐಸಾಕ್ ಮೆರಿಟ್ ಸಿಂಗರ್' - Mahanayaka

‘ಹೊಲಿಗೆಯಂತ್ರ’ ನಡೆದು ಬಂದ ದಾರಿ ಮತ್ತು ‘ಐಸಾಕ್ ಮೆರಿಟ್ ಸಿಂಗರ್’

sewing machine
06/04/2025

ಬಟ್ಟೆ, ತೊಗಲು ಮತ್ತು ಇತರ ಹಲವು ಬಗೆಯ ಪದಾರ್ಥಗಳನ್ನು ಹೊಲಿಯಲು ಬಳಸುವ ಯಂತ್ರವೇ ಹೊಲಿಗೆಯಂತ್ರ. ಪ್ರಥಮ ಹೊಲಿಗೆ ಯಂತ್ರ ಬೆಳಕಿಗೆ ಬಂದದ್ದು 200 ವರ್ಷಗಳು ಕೂಡ ಕಳೆದಿಲ್ಲ. ಆದರೆ ಇಂದು ಕೈಗಾರಿಕೆಯಲ್ಲಿ ಸುಮಾರು 2000 ಬಗೆಯ ಹೊಲಿಗೆ ಯಂತ್ರಗಳು ಬಳಕೆಯಲ್ಲಿವೆ. ಬಟ್ಟೆ ಹರಿದರೂ ಹೊಲಿಗೆ ಬಿಡದಂತ, ಮಿನಿಟಿಗೆ ಐದು ಸಾವಿರಕ್ಕೂ ಹೆಚ್ಚಿನ ಹೊಲಿಗೆಗಳನ್ನು ಹಾಕುವ ಯಂತ್ರಗಳಿವೆ. ಮನೆಗಳಲ್ಲಿ ಬಳಸುವ ಮಾದರಿಯ ಯಂತ್ರ ಮಿನಿಟಿಗೆ 1500 ಹೊಲಿಗೆಗಳನ್ನು ಹಾಕುತ್ತದೆ. ಉಕ್ಕಿನ ತಂತಿಯನ್ನೇ ದಾರದಂತೆ ಬಳಸುವ ಹೊಲಿಗೆ ಯಂತ್ರಗಳಿವೆ. ಹೊಲಿಗೆ ಯಂತ್ರದಿಂದ ಅಲಂಕಾರ ಕೆಲಸವನ್ನು ಪೂರೈಸಬಹುದು. ಮನೋಹರ ಕಸೂತಿ ಕೆಲಸಗಳು ಇದರಲ್ಲಿ ಸುಲಭವಾಗಿರುತ್ತವೆ.


Provided by

ಹೊಲಿಗೆಯಂತ್ರ ಒಂದೆರಡು ಶೋಧಗಳ ಫಲವಲ್ಲ. ಇಂಥ ಒಂದು ಆಧುನಿಕ ಯಂತ್ರದಲ್ಲಿ 157 ಭಾಗಗಳಿರುತ್ತವೆ. ಮೊದಲಿಗೆ ಹೊಲಿಯಲು ಸೂಜಿ ಏಕೈಕ ಆಧಾರವಾಗಿದ್ದಿತು. ಇದರ ಆರಂಭವನ್ನು ಗುರುತಿಸುವುದು ಕಷ್ಟ. ಮುಳ್ಳು, ಆನೆಯ ದಂತ, ಮರಗಳಿಂದ ಮಾಡಿದ ಸೂಜಿಗಳಿದ್ದುವೆಂಬುದಕ್ಕೆ ಪುರಾವೆ ದೊರೆತಿದೆ. ಶಸ್ತ್ರಚಿಕಿತ್ಸೆ ಬಹಳ ಮುಂದುವರಿದಿದ್ದ ಪ್ರಾಚೀನ ಭಾರತದಲ್ಲಿ ಖ್ಯಾತ ವೈದ್ಯ ಸುಶ್ರುತ ತನ್ನ ಚಿಕಿತ್ಸೆಯಲ್ಲಿ ಚಿಕ್ಕ ಚಿಕ್ಕ ಸೂಜಿಗಳನ್ನು ಬಳಸುತ್ತಿದ್ದ. ಬಂಗಾರ, ಬೆಳ್ಳಿ, ತಾಮ್ರ, ಕಂಚುಗಳ ಸೂಜಿಗಳು ಕ್ರಮೇಣ ಬಳಕೆಗೆ ಬಂದುವು. ಅನಂತರ ಬಂದದ್ದು ಉಕ್ಕಿನ ಸೂಜಿ. ಸೂಜಿಯ ಕಣ್ಣು ಮೊನೆಯ ಬದಿಗೇ ಇರುವಂತೆ ಮಾಡಿದ್ದು ಸೂಜಿಯನ್ನು ಹೊಲಿಗೆಯಂತ್ರಕ್ಕೆ ಅಳವಡಿಸುವುದರಲ್ಲಿ ಆದ ಒಂದು ಮುಖ್ಯ ಶೋಧ.

ಇಂದಿನ ಹೊಲಿಗೆಯಂತ್ರವನ್ನು ಹೋಲುವ ಯಂತ್ರ ಜೋಡಿಸಿ ಮೊಟ್ಟಮೊದಲ ಏಕಸ್ವ ಪಡೆದವನು ಥಾಮಸ್ ಸೇಯಿಂಟ್. 1790ರಲ್ಲಿ ತಯಾರಾದ ಈ ಹೊಲಿಗೆ ಯಂತ್ರ ತೊಗಲು ಹೊಲಿಯುವುದಕ್ಕಾಗಿ ರಚಿಸಲ್ಪಟ್ಟಿತು. ದಾರ ನುಸುಳುವುದಕ್ಕಾಗಿ ಚಲಿಸುವ ಮೋಚಿದಬ್ಬಳ ತೊಗಲಿನಲ್ಲಿ ತೂತು ಮಾಡುವುದು. ಇದು ಸೇಯಿಂಟ್ ರಚಿಸಿದ ಯಂತ್ರದ ಕಾರ್ಯವಿಧಾನ. ಅನಂತರ ದಾರ ಹಾಕುವ ಕೆಲಸ. ಇದು ಯಾಂತ್ರಿಕವಾದರೂ ಕೆಲಸ ನಿಧಾನವಾಗಿತ್ತು. ಇದರಲ್ಲಿ ಸರಪಳಿ ಹೊಲಿಗೆ ಮೂಡುತ್ತಿತ್ತು. ಈ ಆವಿಷ್ಕಾರದ 30 ವರ್ಷಗಳ ಅನಂತರ ಫ್ರಾನ್ಸಿನ ಬಾರ್ತಲೆಲಮ್ಮಿ ಥಿಮೋನಿಯರ್ ಎಂಬ ದರ್ಜಿ ಹೆಚ್ಚಾಗಿ ಮರ ಭಾಗಗಳುಳ್ಳ ಕೊಕ್ಕೆಯಂತ ಸೂಜಿಯುಳ್ಳ ಯಂತ್ರ ರಚಿಸಿದ


Provided by

 ಇದು ಸರಪಳಿ ಹೊಲಿಗೆಯ ಯಂತ್ರ:

ದರ್ಜಿಗಳ ಜೀವನಕ್ಕೆ ಇದು ಮುಳುವು ಎಂದು ಜನ ಇವನ ಮೇಲೆ ಕೋಪಗೊಂಡರು. ಥಿಮೋನಿಯರನ ಕಾಲಕ್ಕೆ ನ್ಯೂಯಾರ್ಕಿನ ವಾಲ್ಮರ್ ಹಂಟ್ ಎಂಬಾತ ಇಂದಿನ ಜಡೆ ಹೊಲಿಗೆಯನ್ನು ಹೋಲುವ ಹೊಲಿಗೆ  ಹಾಕುವ ಯಂತ್ರವನ್ನು ರಚಿಸಿದ. ಇವನ ಸುಧಾರಣೆಯೆಂದರೆ ಸೂಜಿ ಬಟ್ಟೆಯೊಳಕ್ಕೆ ಹೋಗುವ ತುದಿಯಲ್ಲೇ ಕಣ್ಣು ಇದ್ದ ಬಾಗಿದ ಸೂಜಿ. ಇದು ಬಟ್ಟೆ ಒಳಗೆ ಹಾಯಿಸಿದ ಒಂದು ದಾರವನ್ನು, ಕೆಳಗಿನಿಂದ ಬಂದ ದಾರ ಹಿಡಿಯಿತು. ಹಿಂದಕ್ಕೂ ಮುಂದಕ್ಕೂ ಓಡಾಡುವ ಒಂದು ಲಾಳಿಯಿಂದ ಎರಡನೆಯ ದಾರ ಬರುವಂತೆ ವಾಲ್ಮರ್ ಹಂಟ್ ಮಾಡಿದ ಹೊಲಿಗೆಯಂತ್ರದಲ್ಲಿ ಈ ಎರಡು ದಾರಗಳ ಬಳಕೆಯು ಒಂದು ಮುಖ್ಯ ಘಟ್ಟವಾಯಿತು.

1846ರಲ್ಲಿ ಮಸಾಚುಸೆಟ್ಸ್ ನ ಎಲಿಯಾಸ್ ಹೋವೆ ಎಂಬಾತ ಜಡೆ ಹೊಲಿಗೆಯ ಯಂತ್ರ ತಯಾರಿಸಿದ. ಹಿಡಿಕೆಯುಳ್ಳ ಚಕ್ರವನ್ನು ಕೈಯಿಂದ ತಿರುಗಿಸಿ ಈ ಯಂತ್ರ ಚಲಿಸಬೇಕಿತ್ತು. ಮುಂದೆ-ಹಿಂದೆ, ಮೇಲೆ- ಕೆಳಗೆ ಹೀಗೆ ನಾಲ್ಕು ಚಲನೆಗಳುಳ್ಳ ಯಂತ್ರವನ್ನು 1850 ರಲ್ಲಿ ಆಲನ್ ಬೆಂಜಮಿನ್ ವಿಲ್ಸನ್ ಎಂಬುವನು ಕಂಡುಹಿಡಿದ.

ಹೊಲಿಗೆ ಯಂತ್ರದಲ್ಲಿ ಕೆಲವು ಮುಖ್ಯ ಸುಧಾರಣೆಗಳನ್ನು ತಂದು ಖ್ಯಾತಿ ಪಡೆದವನು ಐಸಾಕ್ ಮೆರಿಟ್ ಸಿಂಗರ್(1811-75). ಯಂತ್ರದಲ್ಲಿನ ಸೂಜಿ ನೇರವಾಗಿ ಒಳಗಿನ ದಾರ ಪೂರೈಸುವ ಲಾಳಿ ಅಡ್ಡಡ್ಡಕ್ಕೂ ಚಲಿಸುವಂತೆ ಇವನು ಮಾಡಿದ. ಬಟ್ಟೆಗೆ ಆಧಾರವಾಗಿ ಒಂದು ಮೇಜಿನಂತ ಭಾಗ ಹಾಕಿದ್ದು ಇವನ ಯಂತ್ರಗಳಲ್ಲಿ. ಸೂಜಿಯ ಕೆಳಗಿರುವ, ಬಟ್ಟೆಯನ್ನು ಮುಂದುಮುಂದಕ್ಕೆ ಚಲಿಸುವ ಹಲ್ಲುಹಲ್ಲಾದ ಭಾಗ, ಬಟ್ಟೆಯನ್ನು ಒತ್ತಿ ಹಿಡಿಯುವ ಪಾದ, ಇವೆಲ್ಲ ಹೊಲಿಗೆ ಯಂತ್ರದ ಕೆಲಸವನ್ನು ಸರಾಗಗೊಳಿಸಿದವು. ಸಿಂಗರ್ ನ ಹೊಲಿಗೆಯಂತ್ರಗಳು ಜನಪ್ರಿಯವಾದವು.  ಹೊಲಿಗೆಯಂತ್ರ ಎಲ್ಲೆಡೆಗಳಿಗೂ ವ್ಯಾಪಿಸಿತು. ಅದುವರೆಗೆ ಕೈಗಳಿಂದಲೇ ನಡೆಯುತ್ತಿದ್ದ ಹೊಲಿಗೆಯ ಯಂತ್ರಗಳಿಗೆ ಬದಲಾಗಿ ಮೆಟ್ಟುಸನ್ನೆಗಳು ಇರುವ ಹೊಲಿಗೆ ಯಂತ್ರಗಳು ಪ್ರಚಾರಕ್ಕೆ ಬಂದುವು. ಇದರಿಂದ ಕೈಗಳೆರಡೂ ಹೊಲಿಗೆ ಕಾರ್ಯದಲ್ಲಿ ನಿರತವಾಗಿರುವುದು ಸಾಧ್ಯವಾಯಿತು.

ಈಗಿನ ಹೊಲಿಗೆ ಯಂತ್ರಗಳನ್ನು ಒಳಕೆ ಮಡಚಿ ಬರಿಯ ಮೇಜಿನಂತೆ ಕಾಣುವ ಹಾಗೆ ಮಾಡಬಹುದು. ಎಲ್ಲೆಂದರಲ್ಲಿ ಸುಲಭವಾಗಿ ಕೊಂಡೊಯ್ಯಬಹುದಾದ ಹೊಲಿಗೆ ಯಂತ್ರಗಳಿವೆ. ಎಡಕ್ಕೂ ಬಲಕ್ಕೂ ಪರ್ಯಾಯವಾಗಿ ಜಿಗಿಯುವ ಸೂಜಿಯಿಂದಾಗಿ ಓರೆಯೊರೆ, ಜಿಗ್ ಜಾಗ್, ಹೊಲಿಗೆ ಬೀಳುತ್ತದೆ. ಇಂಥ ಕೆಲವು ಜಿಗ್ ಜಾಗ್ ಯಂತ್ರಗಳು ನಮೂನೆಗಳನ್ನು ಸ್ವಕ್ರಿಯಾತ್ಮಕವಾಗಿ ಹೊಲೆಯುತ್ತವೆ. ಹೊಲಿಯುವವರಿಗೆ ಬಟ್ಟೆಯನ್ನು ಸರಿಸುವ ಕೆಲಸ ಮಾತ್ರ. ತೇಪೆ ಹಾಕುವ ಹೊಲಿಗೆ, ಅಂಚು ಕಟ್ಟುವ ಹೊಲಿಗೆ, ಬಟ್ಟೆ ರಿಪೇರಿ ಹೊಲಿಗೆ, ಗುಂಡಿ ಹಾಕುವುದು, ಟಿಬ್ಬಿ ಹೊಲಿಗೆ, ಕಾಜ ಹೊಲಿಗೆ ಇವುಗಳನ್ನು ಮಾಡುವ ಯಂತ್ರಗಳಿವೆ. ತಾನಾಗಿಯೇ ಬಟ್ಟೆ ಮಡಿಸುವ, ನೆರಿಗೆಕೊಟ್ಟು ಹೊಲಿಯುವ ಯಂತ್ರಗಳು ಇವೆ. ಪುಸ್ತಕ, ಪರ್ಸ್, ಹಾಸಿಗೆ, ಒಳಉಡುಪುಗಳು, ಹ್ಯಾಟು, ಕಾಲ್ ಚೀಲ, ಕೈಗವಸು, ಛತ್ರಿಗಳನ್ನು ಹೊಲಿಯುವುದಕ್ಕೆ ವಿಶೇಷ ಬಗೆಯ ಯಂತ್ರ ಬೇಕು. ವಿದೇಶಗಳಲ್ಲಿ ಪೊರಕೆ ಹೊಲಿಯುವುದಕ್ಕೂ ಯಂತ್ರವಿದೆ. ಜಮಖಾನ ಹೊಲಿಯುವ ಯಂತ್ರದಲ್ಲಿ ಜಮಕಾನವನ್ನು ಸರಿಸುವ ಬದಲಾಗಿ ಯಂತ್ರವೇ ಸರಿದಾಡುತ್ತದೆ. ಹಲವು ಸಾಲುಗಳ ಸೂಜಿ ಇದ್ದು ಒಂದೇ ಬಾರಿಗೆ ಸಮಾನಾಂತರವಾಗಿ ಹಲವು ಸಾಲುಗಳ ಹೋಲಿಗೆ  ಮೂಡಿಸುವ ಹೊಲಿಗೆ ಯಂತ್ರಗಳಿವೆ. 7 ಸಾಲುಗಳ ಸೂಜಿಯ ಒಂದು ಬಗೆಯ ಹೊಲಿಗೆ ಯಂತ್ರ ಮಿನಿಟಿಗೆ ಇಪ್ಪತ್ತು ಸಾವಿರ ಹೊಲಿಗೆಗಳನ್ನು ಹಾಕುತ್ತದೆ.

ಕಸೂತಿ ಹಾಕುವುದಕ್ಕೆ ಸಾಧಾರಣವಾಗಿ ಸರಪಳಿ ಹೊಲಿಗೆಯಂತ್ರ ಉಪಯೋಗಿಸುತ್ತಾರೆ. ಇಲ್ಲವೇ ಮನೆಗಳಲ್ಲಿ ಉಪಯೋಗಿಸುವ ಯಂತ್ರಕ್ಕೆ ಬಿಡಿ ಭಾಗಗಳನ್ನು ಹೊಂದಿಸಿ ಕಸೂತಿ, ಬಟ್ಟೆ ಮಡಚುವ, ನೆರಿಗೆ ಕೊಡುವ ಕಾರ್ಯಗಳನ್ನು ನಡೆಸಬಹುದು. ಸಾಧಾರಣ ಜಡೆ ಹೊಲಿಗೆಯಿಂದಲೇ ಬೇರೆ ಬೇರೆ ಬಣ್ಣದ ದಾರಗಳನ್ನು ಹಾಕಿ ಕಸೂತಿ ಮಾಡಬಹುದು. ಹೊಲಿಗೆ ಯಂತ್ರ ಬಳಕೆಗೆ ಬಂದ ಅನಂತರ ಅನೇಕ ಬದಲಾವಣೆ, ಜೋಡಣೆ, ಸುಧಾರಣೆಗಳಾಗಿವೆ. ಸಿದ್ದ ಉಡುಪುಗಳ ಉದ್ಯಮಕ್ಕೆ ಹೊಲಿಗೆ ಯಂತ್ರವೇ ಆಧಾರ.

udanth kumar

  • ಉದಂತ ಶಿವಕುಮಾರ

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ