ಬಡವರ ನಗುವಿನ ಶಕ್ತಿಯೇ  - ಅನ್ನಭಾಗ್ಯ - Mahanayaka

ಬಡವರ ನಗುವಿನ ಶಕ್ತಿಯೇ  — ಅನ್ನಭಾಗ್ಯ

annabhagya
03/07/2023

  • ದಮ್ಮಪ್ರಿಯಾ ಬೆಂಗಳೂರು

ಅನ್ನಭಾಗ್ಯ ಎನ್ನುವುದು , ತಳ ಸಮುದಾಯಗಳ ಹಸಿವಿನ ಕೂಗು. ಉತ್ತಮ ಯೋಜನೆಯ ಬಗ್ಗೆ ಕೆಲಸಕ್ಕೆ ಬಾರದ ಹಾಗೆ ಮಾತನಾಡುವುದು, ಮಾತಿಗೆ ಪ್ರತಿ ಮಾತಿನಂತೆ  ಟಾಂಗ್ ಕೊಟ್ಟು ಮಾತನಾಡುವಷ್ಟು ಬೇಡದ ವಿಚಾರವಲ್ಲ.  ದುಡಿಯುತ್ತಿರುವ ಕೈಗಳಿಗೆ ಬೌದ್ಧಿಕ ಮತ್ತು ದೈಹಿಕ ಸಾಮರ್ಥ್ಯ ತುಂಬುವ ಯೋಜನೆ ಇದಾಗಿದೆ. ದುಡಿಯುವ ವರ್ಗಗಳಿಗೆ ದಿನನಿತ್ಯದ ಬದುಕಲ್ಲಿ ಅನ್ನದ ಚಿಂತೆಯೇ ಹೆಚ್ಚಿರುವುದರಿಂದ, ಅಂತಹ ಮಾನಸಿಕ ಸ್ಥಿತಿಯಿಂದ ಹೊರಬರಬೇಕಾದರೆ  ಅನ್ನಭಾಗ್ಯ ಎನ್ನುವ ಯೋಜನೆಯ ಅಗತ್ಯತೆ ಬಹಳ ಅಗತ್ಯವಾಗಿದೆ.ಇದನ್ನು ಮಾನ್ಯ ಜನಪ್ರತಿನಿಧಿ ನಾಯಕರುಗಳು ಮೊದಲು ತಿಳಿಯಬೇಕಾಗದೆ.  ಅಕ್ಕಿ ಕೊಡುವ ಬದಲು ಖಾತೆಗಳಿಗೆ ಹಣ ಹಾಕಿ ಎನ್ನುವ ಅರೆಪ್ರಜ್ಞಾವಸ್ಥೆಯ ನಾಯಕರ ನಮ್ಮ ಮದ್ಯೆಯೇ ಮದ್ಯ ಕುಡಿದವರಂತೆ ಮಾತನಾಡುತ್ತಾರೆ. ಇವರಿಗೆ ಇವರ ಕ್ಷೇತ್ರವನ್ನು ಗೆಲ್ಲುವ ಸಾಮರ್ಥ್ಯ ಇಲ್ಲದಿದ್ದರೂ, ಮತ್ತು ನಾಯಕರಾಗುವ ಅರ್ಹತೆ ನಿಮಗಿಲ್ಲವೆಂದು ಮತದಾರರೇ ತೀರ್ಮಾನಿಸಿದ್ದಾರೆ.ಅದರ ಅರಿವಾಗದ ನಾಯಕರು ಆಳುವ ಸರ್ಕಾರಗಳ ವಿರುದ್ಧ ಮಾತನಾಡುವುದು ಎಷ್ಟು ಸರಿ ಒಮ್ಮೆ ಯೋಚಿಸಬೇಕಾಗಿದೆ. ಅಕ್ಕಿ ಸಿಗದಿದ್ದಾಗ ಹಣ ತಿನ್ನಲು ಸಾಧ್ಯವಿಲ್ಲಾ ಎನ್ನುವ ಸಾಮಾನ್ಯ ಪ್ರಜ್ಞೆಯು ಇವರಿಗಿಲ್ಲ ಎನ್ನಬೇಕೋ,  ಅಥವಾ ಕೇಂದ್ರದಿಂದ ಬೇನಾಮಿಯಾಗಿ ಅಕ್ಕಿ ತರಿಸಿಕೊಂಡು ಯಾವುದೋ ಗೋದಾಮಿನಲ್ಲಿ ಶೇಖರಿಸಿಕೊಂಡು ಹಣಕೊಟ್ಟರೆ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಹಣ ಮಾಡುವ  ಮತ್ತೊಂದು ಹುನ್ನಾರವೋ ಜನಸಾಮಾನ್ಯರಿಗೆ ಅರ್ಥವಾಗಬೇಕಿದೆ.

ಈ ದೇಶದಲ್ಲಿ  ಮಾನ್ಯ ವಾಜಪೇಯಿಯವರ ಸರ್ಕಾರವಿದ್ದಾಗ  ಗೋದಾಮಿನಲ್ಲಿದ್ದ  ದಾಸ್ತಾನು ಪದಾರ್ಥಗಳು ಈ ದೇಶದ ಜನಸಂಖ್ಯೆ ಸುಮಾರು 5 ವರ್ಷಗಳ ಕಾಲ ಯಾವ ಬೆಳೆಯನ್ನು ಬೆಳೆಯದಿದ್ದರು ಅವರ ಹಸಿವಿನ ಬವಣೆಯನ್ನು ನೀಗಿಸಬಹುದು ಎನ್ನುವಷ್ಟು  ಆಹಾರ ಪದಾರ್ಥಗಳು  ಈ ಗೋದಾಮಿನಲ್ಲಿವೆ ಎನ್ನುವ ಮಾತುಗಳಿದ್ದವು.  ಅಂತಹ ಅಕ್ಕಿ ಮತ್ತು ಇತರೆ ಆಹಾರ ಪದಾರ್ಥಗಳನ್ನು  ಸಮುದ್ರಕ್ಕೆ ಸುರಿದು ಸಾವಿರಾರು ಜಲಚರಗಳು ಸತ್ತವು ಎನ್ನುವುದನ್ನ ನಾವು ಕೇಳಿದ್ದೇವೆ.

ಇಂತಹ ಸಂದರ್ಭದಲ್ಲಿ  ರಾಜ್ಯ ಸರ್ಕಾರ ಬಡವರಿಗೆ ಅಕ್ಕಿ ಕೊಡಿ ಎಂದಾಗ ಗೋದಾಮುಗಳಲ್ಲಿ ಅಕ್ಕಿ ಸಂಗ್ರಹ ಸಾಕಷ್ಟಿಲ್ಲ ಎನ್ನುವವರು ನೀವೇ.  ಈ ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ  ಸರಿಯಾದ ಬೆಂಬಲ ಬೆಲೆಕೊಟ್ಟು ಖರೀದಿಸಿ ಎಂದಾಗ, ಇಳುವರಿ ಹೆಚ್ಚಾಗಿ ಗೋದಾಮುಗಳಲ್ಲಿ ಸ್ಥಳವಿಲ್ಲ ಎಂದು ಹೇಳುವವರು ನೀವೇ, ಇದು ಎಂತಹ ಜನವಿರೋಧಿ ಸರ್ಕಾರದ ನೀತಿ ಎನ್ನುವುದನ್ನು ಜನಸಾಮಾನ್ಯರು ಅರಿಯಬೇಕಿದೆ. ಜನಸಾಮಾನ್ಯರ ಹಸಿವನ್ನು ನೀಗಿಸಲು ಅಕ್ಕಿ ಕೊಡಿ ಎಂದಾಗ ಸುಮ್ಮ ಸುಮ್ಮನೆ ಕ್ಯಾತೆ ತೆಗೆಯುವ  ಕೇಂದ್ರ ಸರ್ಕಾರದ ಈ  ನೀತಿ  ಜನಸಾಮಾನ್ಯರ  ಬಗೆಗಿನ ಕಾಳಜಿಯಲ್ಲ ಎಂದು ನೇರವಾಗಿ ಅರ್ಥೈಸಿಕೊಳ್ಳಬೇಕಿದೆ.

ಯಾವುದನ್ನು ಬಿಟ್ಟಿಯಾಗಿ ಕೊಡಬಾರದು ಎನ್ನುವ ನಮ್ಮ ಪುಂಗಿದಾಸರಿಗೆ  ಇದುವರೆವಿಗೂ ದೇಣಿಗೆ ನೆಪದಲ್ಲಿ, ಹೋಮ ಹವನಗಳ ನೆಪದಲ್ಲಿ, ಶಾಸ್ತ್ರ ಪುರಾಣಗಳ ನೆಪದಲ್ಲಿ, ತಿಂದು ತೇಗಿದವರಿಗೆ ಅವುಗಳೆಲ್ಲಾ  ಬಿಟ್ಟಿಯಾಗಿ ಪಡೆದವುಗಳು ಎಂದು ಅನಿಸಲಿಲ್ಲವೇ ?  ಶ್ರಮಿಕರ ಶ್ರಮದ ಫಲವನ್ನು ದೋಚುತ್ತಿದ್ದೇವೆ ಎಂದು ಅರ್ಥವಾಗಲಿಲ್ಲವೇ?  ಹಸಿವಿನ ದಾಹ ಹಸಿವಿನ ಒಡಲಿನಿಂದ  ಬಂದವರಿಗೆ ಮಾತ್ರ ಗೊತ್ತಾಗುತ್ತದೆಯೇ ಹೊರತು, ಬಡಜನರ ಸವಲತ್ತುಗಳನ್ನು ದೋಚಿ  ಮುಂದಿನ ತಲೆಮಾರಿಗಾಗುವಷ್ಟು ಸಂಗ್ರಹಿಸುವವರಿಗೆ ಹೇಗೆ ಅರ್ಥವಾಗಲು ಸಾಧ್ಯವಾಗುತ್ತದೆ.

ಹಸಿವು ಮತ್ತು ಬಡತನ ಈ ದೇಶಕ್ಕೆ ಅಂಟಿರುವ ಶಾಪ ಎಂದು ಭಾಷಣಕ್ಕೆ ಸೀಮಿತಗೊಳಿಸಿ , ಲಕ್ಷಾಂತರ ಟನ್ ಅಕ್ಕಿ ಮತ್ತು ದಾಸ್ತಾನುವನ್ನು ಸಮುದ್ರಕ್ಕೆ ಎಸೆಯುವ ನಿಮಗೆ ಹೇಗೆ  ಅರ್ಥವಾಗಬೇಕು  ಅನ್ನಭಾಗ್ಯ ಯೋಜನೆಯ ಮೂಲ ಉದ್ದೇಶ. ಹಸಿವಿನ ಬಗ್ಗೆ ಮಾತನಾಡದ ನೀವುಗಳು ಕೇವಲ ದೇಶ ಭಾಷೆ, ಧರ್ಮ,  ದೇವರು, ದಿಂಡಿರು ಇಂತಹ ವಿಚಾರಗಳಲ್ಲಿ  ದ್ವೇಷ ಭಾಷಣ ಮಾಡುತ್ತಾ ಇದರಲ್ಲಿಯೇ  ಕಾಲ ಕಳೆಯುವ ನಿಮಗೆ ಅನ್ನಭಾಗ್ಯ ಎನ್ನುವ ಯೋಜನೆ ಹೇಗೆ  ಅರ್ಥವಾಗಬೇಕು ? ಅನ್ನದೇವರ ಮುಂದೆ ಇನ್ನು ದೇವರು ಉಂಟೆ,  ಅನ್ನಂ ಪರಬ್ರಹ್ಮ ಸ್ವರೂಪಂ, ಎಂದು ಪುಂಖಾನು ಪುಂಖವಾಗಿ ನಾಲಿಗೆಗೆ ಬಂದಹಾಗೆ ಮಾತನಾಡುವ ಇವರಿಗೆ ಹಸಿವಿನ ಅರಿವಾಗಲು ಹೇಗೆ ಸಾಧ್ಯ ?

ಈ ದೇಶದಲ್ಲಿ  ಜನಸಂಖ್ಯೆಯನ್ನು  ಜಾತೀಯ ಆಧಾರದ ಮೇಲೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹಾಗೂ ಪಂಚಮರೆಂದು ವಿಭಾಗ ಮಾಡಲಾಗಿದೆ.ಈ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಆಚರಿಸುವುದು ಹೇಗೆ ಒಂದು ರೋಗವಾಗಿದೆಯೋ, ಹಾಗೆಯೇ ಬಡವರ ಹಸಿವನ್ನು ನೀಗಿಸದೆ ಅನ್ನಕ್ಕಾಗಿ ಪರದಾಟ ಮಾಡುವ ವ್ಯವಸ್ಥೆಯನ್ನು ಕಾಪಾಡಿಕೊಳ್ಳುತ್ತಿರುವ ಮಡಿವಂತಿಕೆಯು ಅಷ್ಟೇ ಶಾಪವಾಗಿದೆ.

ಈ ದೇಶದ ಶೇಕಡ 85 ರಷ್ಟು ಜನಸಂಖ್ಯೆ ಶ್ರಮಿಕವರ್ಗ ಮತ್ತು ಉತ್ಪಾದಕ ವರ್ಗವಾಗಿದ್ದರೆ ಇವರ ಒಡೆತನದಲ್ಲಿ ಶೇಕಡ ಕೇವಲ 3 ರಷ್ಟು ಮಾತ್ರ ಸಂಪತ್ತು ಮತ್ತು ಅಧಿಕಾರ ಇದೆ. ಆದರೆ ಶೇಕಡ 15 ರಷ್ಟಿರುವ ಜನರು ಅನುತ್ಪಾದಕ ವರ್ಗವೆನಿಸಿಕೊಂಡಿದ್ದು  ಶೇಕಡ  97 ರಷ್ಟು  ಸಂಪತ್ತು ಮತ್ತು ಅಧಿಕಾರ ಇವರ ಕೈಯ್ಯಲ್ಲಿದೆ.  ಪ್ರಸ್ತುತವಾಗಿ ಇದು ಈ ದೇಶದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಪಾಪಿಗಳ  ಪರಮೋಚ್ಚ  ಸ್ಥಿತಿಯಾಗಿದೆ.  ಈ ದೇಶದಲ್ಲಿ ಪ್ರತೀ ವರ್ಷ ಸಾವಿರಾರು ಟನ್ ಆಹಾರ ಪದಾರ್ಥಗಳು ಕೊಳೆತು ನಾರುವ ಸ್ಥಿತಿಯಲ್ಲಿದ್ದಾಗ ಅವುಗಳನ್ನು ಸಮುದ್ರಕ್ಕೆ ಸುರಿಯಲಾಗುತ್ತಿದೆ. ಈ ರಾಜಕೀಯ ವ್ಯವಸ್ಥೆಯ ಮೂಲ ಉದ್ದೇಶವೇ ಹಸಿವಿಗೆ ಅನ್ನವನ್ನು ನೀಡಿದರೆ ಜನರು ತಮ್ಮ ಜನನಾಯಕರನ್ನು ಮರೆತುಬಿಡುತ್ತಾರೆ, ಅದಕ್ಕಾಗಿ ಹಸಿವಿನಿಂದಲೇ ಇವರನ್ನು ಇಡುವುದು ಸೂಕ್ತ ಎನ್ನುವುದು ಇವರ ಮೂಲಮಂತ್ರವಾಗಿದೆ.

ಮಾನ್ಯ ಪ್ರಧಾನಮಂತ್ರಿಗಳು ಇಡೀ ಜಗತ್ತಿನ ವಿಶ್ವಗುರುವಾಗಲು ಹೊರಟವರು ಒಮ್ಮೆ ಯೋಚಿಸಬೇಕಾಗಿತ್ತು.  ಜನರು ಇಲ್ಲಿ ಅಕ್ಕಿ ಇಲ್ಲ, ಬೇಳೆ ಇಲ್ಲ, ಎಣ್ಣೆ ಇಲ್ಲ, ಎಂದು ಕಚ್ಚಾಡುತ್ತಿರುವಾಗ ವಿದೇಶಿ ಪ್ರವಾಸ ಕೈಗೊಳ್ಳುವ ಅಗತ್ಯವಾದರೂ ಏನಿತ್ತು.  ವಿಶ್ವಗುರುವೂ ನಿಜವಾಗಿಯೂ ಜನಪರವಾದ ಕೆಲಸ ಮಾಡುವವರಾಗಿದ್ದಿದ್ದರೆ  ನಿಷ್ಪಕ್ಷಪಾತವಾಗಿ ಮುಂದೆ ನಿಂತು ರಾಜ್ಯ ಸರ್ಕಾರಕ್ಕೆ ಅಕ್ಕಿ ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ರಾಜ್ಯ ಸರ್ಕಾರ  ಜೂನ್ 9 ನೇ ತಾರೀಖು  FCI ಗೆ ಪತ್ರವನ್ನು ಬರೆಯಲಾಗಿತ್ತು. ಇವರ ಪತ್ರಕ್ಕೆ  ಜೂನ್ 12 ನೇ ತಾರೀಖು  FIC ನವರು  ಪತ್ರವನ್ನು ಬರೆದು ಸುಮಾರು  28425.750 ಮತ್ತು  13819.485 ಮೆಟ್ರಿಕ್ ಟನ್ ಅಕ್ಕಿಯನ್ನು ಸರಬರಾಜು ಮಾಡುವಂತೆ  ಒಪ್ಪಿರುವುದಾಗಿ ತಿಳಿಸಿತ್ತು.  ಆದರೆ  ಕೇಂದ್ರ ಸರ್ಕಾರ ಮದ್ಯ ಪ್ರವೇಶ ಮಾಡಿ  ಜೂನ್ 13 ನೇ ತಾರೀಖು ಛೇರ್ಮನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಆಫ್ FCI  ಗೆ ಪತ್ರ ಬರೆದು  ಇರುವ ದಾಸ್ತಾನುವನ್ನು  ಮುಕ್ತ ಮಾರುಕಟ್ಟೆಗೆ ಕಳುಹಿಸಲು  ಸೂಚನೆ ನೀಡಲಾಗಿದೆ.  ಅಂದರೆ  ಕೇವಲ 3 ರಿಂದ 4 ರೂಪಾಯಿಗೆ ರಿಯಾಯಿತಿ ದರದಲ್ಲಿ ನೀಡಬೇಕಾದ ಅಕ್ಕಿಯನ್ನು  ಸುಮಾರು 36.60 ರೂಪಾಯಿಗೆ ಕೊಂಡುಕೊಳ್ಳುವಂತಹ  ಸಂಕಷ್ಟಕ್ಕೆ ಕರ್ನಾಟಕ ಸರ್ಕಾರವನ್ನು ಸಿಲುಕಿಸುವುದು ಇವರ ಮುಖ್ಯ ಉದ್ದೇಶ ಎನ್ನುವುದರ ಜೊತೆಗೆ ರಾಜ್ಯ ಸರ್ಕಾರದ  ಯೋಜನೆಗಳು ಸುಗಮವಾಗಿ ಜಾರಿಯಾಗಬಾರದು  ಎನ್ನುವುದಾಗಿತ್ತು. ಅದಕ್ಕಾಗಿಯೇ  ಕೇಂದ್ರ ಸರ್ಕಾರ  ಇಂತಹ  ಜನ ವಿರೋಧಿ ತಂತ್ರಗಾರಿಕೆಗೆ ಮುಂದಾಗಿದೆ ಎನ್ನಬಹುದಾಗಿದೆ.

ಅಕ್ಕಿ ಕೊಡಲು ಒಪ್ಪಿಕೊಂಡಿದ್ದ  FCI  ಗೆ ಒಳಗೊಳಗೆ ಪತ್ರ ಬರೆದು,ರಾಜ್ಯ ಸರ್ಕಾರಕ್ಕೆ ಅಕ್ಕಿ ಸರಬರಾಜನ್ನು ನಿಲ್ಲಿಸಿ, ಮುಕ್ತ ಮಾರುಕಟ್ಟೆಗೆ ಅಕ್ಕಿಯನ್ನು ರವಾನಿಸಲು ಆದೇಶವನ್ನು ನೀಡಿತ್ತು. ಇದು ಮುಕ್ತ ಮಾರುಕಟ್ಟೆಯ ಬೆಲೆಯಲ್ಲಿ ಅಕ್ಕಿ ಕೊಂಡು ಜನಸಾಮಾನ್ಯರಿಗೆ ವಿತರಿಸುವುದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬಹಳ ಹೊರೆಯಾಯಿತು. ಇಂತಹ ಇಬ್ಬಂಗಿತನದ ಪೆಟ್ಟನ್ನು ನೀಡುವ ಮೂಲಕ  ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವುದು ಮಾನ್ಯ ವಿಶ್ವ ಗುರುವಿನ ಸರ್ಕಾರದ ಮೂಲ ಉದ್ದೇಶವಾಗಿತ್ತು.  ವಿಶ್ವಗುರುವಾಗಲು ಹೊರಟವರು ಎಲ್ಲ ರಾಜ್ಯಗಳನ್ನು ಒಂದೇ ಎಂದು ಭಾವಿಸಬೇಕು. ತನ್ನ ಆಳ್ವಿಕೆಯಲ್ಲಿ ಕೆಲವು ರಾಜ್ಯಗಳಿಗೆ ಮಲತಾಯಿ ದೋರಣೆ ಮಾಡುವವರಾದರೆ  ವಿಶ್ವಗುರುವಾಗಲು ಹೇಗೆ ಸಾಧ್ಯ ಎನ್ನುವುದೇ ಜನಪರ ನಾಯಕರ,  ಸಾಮಾಜಿಕ ತಜ್ಞರ,  ಅಭಿಪ್ರಾಯವಾಗಿದೆ.

ಕಳೆದ 2020  ರಲ್ಲಿ ಭಾರತದ ಬಡಜನರು ಕರೋನ ಮಹಾಮಾರಿಗೆ ಹೆದರಿ ತಲ್ಲಣಗೊಂಡರು ಎನ್ನುವುದಕ್ಕಿಂತ,  ಲಾಕ್ ಡೌನ್ ಎನ್ನುವ ಮಹಾಮಾರಿಯಿಂದ ದಿನನಿತ್ಯ ದುಡಿದು ತಿನ್ನುತ್ತಿದ್ದ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಪರದಾಡಿದರು. ಅಂತಹ  ಸಂದರ್ಭದಲ್ಲಿ  ನಮ್ಮ ವಿಶ್ವಗುರುವಿನ ಸರ್ಕಾರ ಸುಮಾರು  1550 ಮೆಟ್ರಿಕ್ ಟನ್ ಗಳಿಗೂ ಅಧಿಕ ಆಹಾರ ಪದಾರ್ಥಗಳನ್ನು ಗೋದಾಮಿನಲ್ಲಿ  ಇಟ್ಟುಕೊಂಡು ಕೊಳೆಸಲಾಯಿತು. 2020 ರಲ್ಲಿ ಗೋದಾಮಿನಲ್ಲಿದ್ದ 1571 ಮೆಟ್ರಿಕ್ ಟನ್ ಅಕ್ಕಿ ಮತ್ತು ಇತರೆ ದಾಸ್ತಾನುಗಳು ಕೊಳೆತು ಹಾನಿಗೀಡಾಗಿರುವುದನ್ನು ಸ್ವತಃ FCI ನಿಂದ ಮಾಹಿತಿ ಪಡೆಯಬಹುದಾಗಿದೆ.

ಈಗ ಜನಸಾಮಾನ್ಯರು ಯೋಚಿಸಬೇಕಾಗಿದೆ ಯಾವ ನಾಯಕರು ನಿಜವಾಗಿಯೂ ಜನಸಾಮಾನ್ಯರ ಹಸಿವಿನ ದಾಹ ನೀಗಿಲುವಲ್ಲಿ  ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ.  ಇವರು ಜಾರಿಗೆ ತಂದ  “ಅಂತ್ಯೋದಯ ಅನ್ನ ಯೋಜನೆ ” ಬಹಳ ಪವಿತ್ರವಾದ ಯೋಜನೆ ಎನ್ನುವುದಾದರೆ,  ರಾಜ್ಯ ಸರ್ಕಾರ ತಂದಿರುವ “ಅನ್ನಭಾಗ್ಯ” ಯೋಜನೆಯು ಜನಸಾಮಾನ್ಯರಿಗೆ ನೆರವಾಗುವ ಯೋಜನೆ ಎನ್ನುವುದು ನಮ್ಮ ವಿಶ್ವಗುರುವಿಗೆ ಏಕೆ ಅರ್ಥವಾಗುತ್ತಿಲ್ಲ?

ಈ ದೇಶದಲ್ಲಿ  ಶತ ಶತಮಾನಗಳಿಂದಲೂ  ಹಸಿವಿನ ಬವಣೆಯನ್ನು ನೀಗಿಸಲು ಹಲವಾರು ಹೋರಾಟಗಳೇ ನಡೆಯುತ್ತಿವೆ.  ರೈತರು ಬೆಳೆದ ಆಹಾರ ಬೆಳೆಗಳಿಗೆ  ಬೆಂಬಲ ಬೆಲೆಯೇ ಸಿಗದಾಗಿವೆ.  ಇನ್ನೊಂದು ಕಡೆ ಸರ್ಕಾರ ಸಂಗ್ರಹಿಸಿದ ಆಹಾರ ಪದಾರ್ಥಗಳು  ಹುಳುಗಳಿಂದ ತುಂಬಿಕೊಂಡು ಕೊಳೆಯಲಾರಂಭಿಸಿವೆ. ಮತ್ತೊಂದು ಕಡೆ ಹಸಿವಿಗೆ ಅನ್ನವನ್ನು ನೀಡಿ ಎಂದು ಜನಪರ ಸರ್ಕಾರಗಳು  FCI ಗೆ ಪತ್ರಗಳನ್ನು ಬರೆದಾಗ ಮದ್ಯದಲ್ಲಿ  ಮೂಗುತೂರಿಸಿ ರಾಜಕೀಯ ಮಾಡುವ ನಾಯಕರುಗಳು ನಮ್ಮ ಮಧ್ಯದಲ್ಲಿಯೇ ಸರ್ವಶ್ರೇಷ್ಠರಂತೆ ಮಾತನಾಡುತ್ತಿದ್ದಾರೆ.  ತಿನ್ನುವ ಅನ್ನಕ್ಕೂ ಅಡ್ಡಿಪಡಿಸುವ ಇಂತಹ ನೀಚ ರಾಜಕಾರಣಕ್ಕೆ ಏನೆಂದು ಹೇಳಬೇಕೋ ತಿಳಿಯದಾಗಿದೆ.

ಅದಕ್ಕೆ ವಚನಗಾರರು ಹೇಳಿದ್ದು 

ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿವಡೆ ,

ವಿಷವೇರಿತ್ತಯ್ಯ ಅಪಾದ ಮಸ್ತಕಕ್ಕೆ, 

ಹಸಿವಿಗನ್ನವನ್ನಿಕ್ಕಿ ವಿಷವನಿಳುಹಬಲ್ಲಡೆ

ವಸುಧೆಯೊಳಗೆ ಆತನೇ ಗಾರುಡಿಗ ಕಾಣ ರಾಮನಾಥ

ಓಟು ಕೇಳಲು ಬಂದು  ವಚನ ಹೇಳುವುದಲ್ಲಾ,  ಜನಪರವಾದ ನಾಯಕರಿಗೆ,  ಹಸಿವಿನ ನೋವು ತಿಳಿಯದವರಿಗೆ  ಇಂತಹ ವಚನಗಳನ್ನು ಅರ್ಥಮಾಡಿಸಬೇಕಾದ  ಅನಿವಾರ್ಯತೆ  ಇದೆ ಎಂದು ಹೇಳಬಹುದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ