ವಿಜಯಪುರ ಹುಡ್ಗನ “ದಿ ಪ್ರಾಬ್ಲಮ್” | ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಖ್ಯಾತ ಗಾಯಕ ರಘು ದೀಕ್ಷಿತ್
ಕಪ್ಪು ಬಿಳಿ ಕಣ್ಣಲ್ಲಿ ಕಲರ್ ಫುಲ್ ಕನಸು ಕಟ್ಟಿಕೊಂಡು ಬಂದ ಪ್ರತಿಭಾವಂತ ಹುಡುಗರ ತಂಡವೊಂದು ಹೊಸ ಭರವಸೆಯೊಂದಿಗೆ ಒಂದೊಳ್ಳೆಯ ಸಿನಿಮಾ ಮಾಡಲು ಹೊರಟಿದೆ. ಮೊದಲು ಆ ಉತ್ಸಾಹಿ ಬಳಗಕ್ಕೆ ನಮ್ಮ ಮಹಾನಾಯಕ ಡಾಟ್ ಇನ್ ಬಳಗದಿಂದ ಶುಭಾಶಯಗಳು.
ಗಾಂಧಿನಗರದಲ್ಲಿ ಸಿನಿಮಾ ಮಾಡೋದು ಸುಲಭವಲ್ಲ. ಕಥೆ ಹಿಡಿದು ನಿರ್ಮಾಪಕರಿಗೆ ಅಲೆದಾಡುವ ಪ್ರತಿಭಾವಂತರಿಗಂತೂ ಲೆಕ್ಕವಿಲ್ಲ. ಇನ್ನೇನು ಸಿನಿಮಾ ಶುರುವಾಯ್ತು ಅನ್ನೋವಾಗಲೆ ಇನ್ನೇನೋ ಸಮಸ್ಯೆ ಎದುರಾಗಿ ಚಿತ್ರ ಮಾಡುವ ಯುವ ನಿರ್ದೇಶಕನ ಕನಸು ನುಚ್ಚುನೂರು. ಇಲ್ಲಿರುವ ತಂಡಕ್ಕೂ ಆ ಅನುಭವ ಆಗಿದೆ. ಇಲ್ಲೇನಿದ್ದರೂ, ಮೊದಲು ಕೊರಳಿಗೆ ನಾವ್ ಹಾರ ಹಾಕಿ ಮುನ್ನಡೆದಾಗ ಮಾತ್ರ ಬೇರೆಯವರೂ ತಿರುಗಿ ನೋಡ್ತಾರೆ. ಅಂಥದ್ದೊಂದು ತಿರುಗಿ ನೊಡುವ ಕೆಲಸಕ್ಕೆ ವಿಜಯಪುರದ ನಟ ನಿರ್ದೇಶಕ ಎಮ್ ಎಮ್ ಶ್ರೀನಿವಾಸ ಕೈ ಹಾಕಿದ್ದಾರೆ. ಅವರೇ ಹೆಣೆದ ಚಂದದ ಕಥೆಗೆ ಅವರೇ ನಾಯಕ ನಟರಾಗಿ, ಅವರೇ ನಿರ್ದೇಶಕರಾಗಿ, ತಮ್ಮ ಸ್ನೇಹಿತ ಬಳಗದವರನ್ನೇ ಕಟ್ಟಿಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ.
ನಿರ್ಮಾಪಕ ಅಬ್ದುಲ್ ಕರಿಮ್ ಭಾಗವಾನ್ ಅವರ ಎ.ಕೆ. ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ವಿಜಯಪುರದಲ್ಲಿ ಎ ಕೆ ಪ್ರೊಡಕ್ಷನ್ ಅವರ ನೇತೃತ್ವದಲ್ಲಿ ನಡೆದ RhythemX Event ಸಮಾರಂಭದಲ್ಲಿ ಹೊಸ ಸಿನಿಮಾ “ದಿ ಪ್ರಾಬ್ಲಮ್
(The Problem)” ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಖ್ಯಾತ ಗಾಯಕ ರಘು ದೀಕ್ಷಿತ್ ಅವರು ಬಿಡುಗಡೆ ಮಾಡಿ ಹೊಸ ಪ್ರತಿಭೆಗಳಿಗೆ ಶುಭ ಹಾರೈಸಿದ್ದಾರೆ. ಯಾವುದೂ ಕಠಿಣ ಪರಿಶ್ರಮವನ್ನು ಸೋಲಿಸುವುದಿಲ್ಲ ಅನ್ನುವುದಕ್ಕೆ ವಿಜಯಪುರ ಹುಡುಗನ ಈ ಹೊಸ ಸಿನಿಮಾನೆ ಸಾಕ್ಷಿ. ತುಂಬಾ ದಿನದಿಂದ ಕನಸು ಹೊತ್ತಿಕೊಂಡು ಚಿತ್ರರಂಗಕ್ಕೆ ಬಂದಿರುವ ನಟ ನಿರ್ದೇಶಕ ಎಮ್ ಎಮ್ ಶ್ರೀನಿವಾಸ ಅವರ ಹೊಸ ಸಿನಿಮಾ “ದಿ ಪ್ರಾಬ್ಲಮ್”.
ಎಮ್ ಎಮ್ ಶ್ರೀನಿವಾಸ ಮೂಲತಃ ವಿಜಯಪುರ ಜಿಲ್ಲೆಯ ಬುರಣಾಪುರ ಗ್ರಾಮದವರು, ಚಿತ್ರರಂಗಕ್ಕೆ ಬಂದು ಎರಡು ವರ್ಷವಾಯಿತು. ದೊಡ್ಡ ದೊಡ್ಡ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಶ್ರೀ ನಿವಾಸ ತಾವೇ ಸ್ವತಃ ವಿಜಯಪುರದ ಕಲಾವಿದರನ್ನು ಬಳಸಿಕೊಂಡು “ದ ಶಾರ್ಟೇಜ್” ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಭಾಗ – 2 ಚಿತ್ರದಲ್ಲಿ ಶ್ರೀ ನಿವಾಸ ಅಭಿನಯಿಸಿದ್ದಾರೆ. ಈಗ ಬಿಗ್ ಸಿನಿಮಾ ಅಂದರೆ ಚಲನಚಿತ್ರಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಕಿರುಚಿತ್ರ ಮಾಡುತ್ತಿದ್ದ ಶ್ರೀನಿವಾಸ ಈಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಅದುವೇ “ದಿ ಪ್ರಾಬ್ಲಮ್ The Problem)” ಚಿತ್ರದ ಮೂಲಕ ನಾಯಕ ನಟರಾಗಿ ಅವರೇ ನಿರ್ದೇಶಕರಾಗಿ.
ಇನ್ನೂ “ದಿ ಪ್ರಾಬ್ಲಮ್” ಚಿತ್ರಕ್ಕೆ ಎಮ್ ಎಮ್ ಶ್ರೀನಿವಾಸ ಅವರ ನಿರ್ದೇಶನದಲ್ಲಿ, ಅಬ್ದುಲ್ ಕರಿಮ್ ಭಾಗವಾನ್ ಅವರ ನಿರ್ಮಾಣದಲ್ಲಿ, ಎ ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ.
ದಿ ಪ್ರಾಬ್ಲಮ್ ಚಿತ್ರದ ಮೋಷನ್ ಪೋಸ್ಟರ್ ಎ ಕೆ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್, ಕಾಮಿಡಿ ಕಿಲಾಡಿ ಶಿವಾನಂದ ಸಿಂದಗಿ, ಸೂರಜ್, ತ್ರಿಧರ್ ಗೌಡ ಪಾಟೀಲ್, ಪವನ್ ಕುಮಾರ್ ಬೂದಿಹಾಳ, ಭಾದ್ ಷಾ, ಸನ್ಲಾ ಎಡಿಟ್ಸ್, ಸಚಿನ್, ಶಿವಾನಂದ, ರವಿ ಆರ್ ಸಿ ಎಮ್, ಅಖಿಲೇಶ್ ಜಿ, ವಿಶ್ವಪ್ರಕಾಶ ಮಲಗೊಂಡ, ತುಷಾರ್ ಮಲಗೊಂಡ, ವಿಕಾಸ್, ಸಿದ್ದನಗೌಡ ಸಿ ಜೆ, ಸಿದ್ದಾರೂಢ ಕಾಲೇಬಾಗ್, ಕಿರಣ ಶಿವಣ್ಣನವರ, ಸುರೇಶ್ ಜಿ, ಅಮೋಘ ದಾಸ್, ಭೀಮಸೇನ ಮುಂತಾದವರು ಚಿತ್ರತಂಡದಲ್ಲಿದ್ದಾರೆ.
-ವಿಶ್ವಪ್ರಕಾಶ ಮಲಗೊಂಡ
https://youtu.be/u8-KfVBoAko