ಪಾದಗಳೊಂದಿಗೆ ಪಾದರಕ್ಷೆಗಳು ನಡೆದು ಬಂದ ದಾರಿ - Mahanayaka
9:13 AM Tuesday 24 - December 2024

ಪಾದಗಳೊಂದಿಗೆ ಪಾದರಕ್ಷೆಗಳು ನಡೆದು ಬಂದ ದಾರಿ

Footwear
28/10/2024

  • ಉದಂತ ಶಿವಕುಮಾರ್

ಪಾದಗಳಿಗೆ ರಕ್ಷಣೆ ಕೊಡುವುದು ಪಾದರಕ್ಷೆ. ಪ್ರಾಚೀನ ರೋಮ್ ನಲ್ಲಿ ಉದ್ದವಾದ ಮೊನಚಾದ ಪಾದರಕ್ಷೆ ಸಮಾಜದಲ್ಲಿ ಘನತೆಯ ಗುರುತಾಗಿತ್ತು.14ನೇ ಶತಮಾನದಲ್ಲಿ “ಕ್ರ್ಯಾಕೊ” ಎಂಬ ಪಾದರಕ್ಷೆಯ ಹೆಬ್ಬೆರಳಿನ ಭಾಗ ಎಷ್ಟು ಉದ್ದವಾಗಿದ್ದಿತೆಂದರೆ ಒಂದು ಸರಪಳಿಯಿಂದ ಅದನ್ನು ಎತ್ತಿ ಹಿಡಿದರೆ ಮಾತ್ರ ನಡೆಯಲು ಸಾಧ್ಯವಾಗುತ್ತಿತ್ತು.

16ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ “ಡಕ್ ಬಿಲ್” ಎಂಬ ಪಾದರಕ್ಷೆಯ ಅಗಲ ಬಹು ಹೆಚ್ಚಾಗಿ, ರಸ್ತೆಯಲ್ಲಿ ನಡೆಯುವವರಿಗೆ ಅನಾನುಕೂಲವಾಗಿ ಮುಂಭಾಗ 15 ಕಾಲು ಸೆಂಟಿಮೀಟರ್ ಮೀರಬಾರದೆಂದು ಶಾಸನ ಮಾಡಬೇಕಾಯಿತು. 17 ಮತ್ತು 18ನೇ ಶತಮಾನಗಳ “ಜಾಕ್ ಬೂಟ್ಸ್” ಎಷ್ಟು ಬಿಗಿಯಾಗಿ, ಭಾರವಾಗಿ ಇದ್ದುವೆಂದರೆ ಅದನ್ನು ಹಾಕಿಕೊಳ್ಳಲು ಮತ್ತು ತೆಗೆಯಲು ಇತರರ ಸಹಾಯ ಅಗತ್ಯವಾಗಿತ್ತು. ಪಾದರಕ್ಷೆ ವಿವಿಧ ರೂಪಗಳನ್ನು, ವಿಚಿತ್ರ ರೂಪಗಳನ್ನು ತಾಳಿದೆ. ಪಾದರಕ್ಷೆಯನ್ನು ಧರಿಸಿ ನಾವು ನಿರ್ಭಯವಾಗಿ ಓಡಾಡಬಹುದು. ಮಳೆಗಾಲದಲ್ಲಿ ವನ್ಯ ಪ್ರದೇಶಗಳಲ್ಲಿ ಮೊಣಕಾಲಿನವರೆಗೆ ಬರುವ, ನೀರು ಹೀರದ, ಪಾದರಕ್ಷೆಗಳಿರುತ್ತವೆ. ಬೇಸಿಗೆಯ ಧಗೆಯನ್ನು ತಗ್ಗಿಸುವ ಮೇಲ್ಮುಸುಕಿಲ್ಲದ ಚಪ್ಪಲಿಗಳೂ ಪಟ್ಟಿಯಿಂದ ಬಿಗಿಯಬಹುದಾದ ಜೋಡುಗಳೂ ಇರುತ್ತವೆ. ಅತಿ ಶೀತ ಪ್ರದೇಶಗಳಲ್ಲಿ ಉಣ್ಣೆಯ ಅಥವಾ ಕೃತಕ ಎಳೆಯ ಕಾಲು ಚೀಲಗಳನ್ನು ತೊಟ್ಟು ಮೇಲು ಬೂಟುಗಳನ್ನು ಧರಿಸುವುದರಿಂದ ಪಾದಗಳನ್ನು ರಕ್ಷಿಸಿಕೊಳ್ಳುತ್ತಾರೆ.

ಪಾದರಕ್ಷೆ ಬಹಳ ಕಾಲದಿಂದ ಮನುಷ್ಯನ ಪಾದಗಳನ್ನು ಕಾಪಾಡುತ್ತಿದೆ ಎಂದು ಹೇಳಲಾಗಿದೆ. ಇದರ ಬಳಕೆ ಯಾವಾಗ ಪ್ರಾರಂಭವಾಯಿತು ತಿಳಿಯದು. ಹಿಮಯುಗದ ಮನುಷ್ಯ ಕೊರೆಯುವ ಹಿಮದಿಂದ ಪಾದವನ್ನು ರಕ್ಷಿಸಿಕೊಳ್ಳಲು ಚರ್ಮವನ್ನು ಚೀಲದಂತೆ ಕಾಲಿಗೆ ಕಟ್ಟಿಕೊಳ್ಳುತ್ತಿದ್ದಿರಬಹುದು ಇದರೊಳಗೆ ಪಾದವನ್ನು ತೋರಿಸಿ ಕಾಲಂದಿಗೆ ಬರುವ ಜಾಗದಲ್ಲಿ ಕಾಡಿನ ಬಳ್ಳಿಗಳಿಂದಲೂ, ಚರ್ಮದ ಪಟ್ಟಿಯಿಂದಲೂ ಕಟ್ಟುತ್ತಿದ್ದನು. ಆದಿಮಾನವನ ಈ ಪಾದರಕ್ಷೆಗಳು ಸ್ವಲ್ಪ ಕಾಲದಲ್ಲಿ ಕೊಳೆತು ನಾಶವಾಗುತ್ತಿದ್ದವು. ಚರ್ಮವನ್ನು ಬಹುಕಾಲ ಕೆಡದಂತೆ ಹದಗೋಳಿಸುವುದು ಅವನಿಗೆ ತಿಳಿದಿರಲಿಲ್ಲ.

ಕಾಲ ಕ್ರಮೇಣ ಪಾದರಕ್ಷೆ ಅನೇಕ ರೂಪಗಳನ್ನು ತಳೆಯಿತು. ವಿವಿಧ ಕೆಲಸ ಮಾಡುವವರು ತೊಡುವ ವಿವಿಧ ರೀತಿಯ ಪಾದರಕ್ಷೆಗಳು ಬಂದುವು. ಪದವಿ ಸೂಚಿಸುವ ಪಾದರಕ್ಷೆಗಳು ಸಿದ್ಧವಾದವು. ಕ್ರಿಸ್ತಪೂರ್ವ 4000 ದಲ್ಲಿ ಈಜಿಪ್ಟ್ ನವರು ಪೇಪಿರಸ್ ಎಂಬ ಜೊಂಡಿನಿಂದ ಮಾಡಿದ ಪಾದರಕ್ಷೆಯನ್ನು ಉಪಯೋಗಿಸುತ್ತಿದ್ದರು. ಕ್ರಿಸ್ತಪೂರ್ವ 1350 ರಲ್ಲಿ ಹೇಳಲಾದ ಈಜಿಪ್ಟ್ ಜೋಡುಗಳು ಚರ್ಮವನ್ನು ಹದಗೊಳಿಸುವುದರಲ್ಲಿ ಅವರಿಗಿದ್ದ ತಿಳುವಳಿಕೆಯನ್ನು ಸೂಚಿಸುತ್ತವೆ. ಕಾದ ಮರಳಿನಿಂದ ರಕ್ಷಣೆಗೆಂದು ಇವುಗಳನ್ನು ತೊಡುತ್ತಿದ್ದರು. ಚೀನಾ ಜಪಾನ್ ಗಳಲ್ಲಿಯೂ ಪ್ರಾಚೀನ ಕಾಲದಲ್ಲಿ ಇಂತ ಚಪ್ಪಲಿಗಳನ್ನು ತೊಡುತ್ತಿದ್ದರಂತೆ. ಗ್ರೀಕ್, ರೋಮನ್ ಸಾಮ್ರಾಜ್ಯಗಳಲ್ಲಿ ಪದವಿ ಸೂಚಕ ಪಾದರಕ್ಷೆಗಳು ಬಳಕೆಯಲ್ಲಿದ್ದುವು. ಅಸೀರಿಯ ಹಾಗೂ ರೂಮ್ ಯೋಧರು ಅಡ್ಡಲಾದ ಹಲವಾರು ಪಟ್ಟಿಗಳುಳ್ಳ ಜೋಡುಗಳನ್ನು ತೊಡುತ್ತಿದ್ದರು. ಉಚ್ಚ ಪದವಿಯವರು ಧರಿಸುವ ಪಾದರಕ್ಷೆಗಳಲ್ಲಿ ಕಾಲು ಬೆರಳಿಗೆ ಬರುವ ಪಾದರಕ್ಷೆಯ ಭಾಗ ನೀಳವಾಗಿಯೂ ಮೊನಚಾಗಿಯೂ ಇರುತ್ತಿತ್ತು.

ಮಧ್ಯಯುಗದಲ್ಲಿ ಯುರೋಪಿನಲ್ಲಿ ವಿಧವಿಧದ ಪಾದರಕ್ಷೆಗಳಿದ್ದವು. ಅತಿ ಮೊನಚಾದ ಪಾದರಕ್ಷೆಗಳ ತುದಿ ನೆಲ ತಾಗದಂತಿರಲು ಸರಪಳಿ ಅಥವಾ ಅಲಂಕಾರಿಕ ಪಟ್ಟಿಗಳಿಂದ ಅದನ್ನು ಮೊಣಕಾಲಿಗೆ ಬಿಗಿಯುತ್ತಿದ್ದರು. ಹಲವು ಪಾದರಕ್ಷೆಗಳಿಗೆ ಎಂಥ ವಿಪರೀತ ರಚನೆಯಿರುತ್ತಿದ್ದಿತೆಂದರೆ ಅವುಗಳನ್ನು ಹಾಕಿಕೊಂಡವರು ನಡೆಯುವುದು ಕೂಡ ಪ್ರಯಾಸಕರವಾಗಿತ್ತು. ಹೊಲಗಳಲ್ಲಿ ಕೆಲಸ ಮಾಡುವವರು ಮತ್ತು ವ್ಯಾಪಾರಿಗಳು ಕಾಲಿಗೆ ಮರದ ಮೆಟ್ಟನ್ನು ಉಪಯೋಗಿಸುತ್ತಿದ್ದರು. ಇವು ನೋಡಲು ಅಂದವಾಗಿ ಇಲ್ಲದಿದ್ದರೂ ಒಳ್ಳೆಯ ರಕ್ಷಣೆ ನೀಡುತ್ತಿದ್ದವು.

17ನೇ ಶತಮಾನದ ಮಧ್ಯದಿಂದ 18ನೇ ಶತಮಾನದ ಉತ್ತರಾರ್ಧದವರೆಗೆ ಮೊಣಕಾಲುಗಳಿಗೂ ಮೇಲೆ ಬರುವ ಬೂಟುಗಳನ್ನು ತೊಡುತ್ತಿದ್ದರು. ಇವು ಅತಿ ಬಿಗಿಯಾಗಿಯೂ, ಇಲ್ಲವೇ ಅತಿ ಸಡಿಲವಾಗಿ ಇರುತ್ತಿದ್ದುವು. ಹೀಗೆ ಮಧ್ಯಯುಗದಲ್ಲಿ ಕಾಲಿನ ಆಕಾರ ಅಳತೆಗಳಿಗೆ ಸರಿಹೊಂದುವ ಪಾದರಕ್ಷೆಗಳಿಗಿಂತ ಕೇವಲ ಅಲಂಕಾರಿಕ ಬೂಟುಗಳೆ ಪ್ರಧಾನವಾಗಿದ್ದು ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಕಾಲಕ್ಕೆ ವಿಶಿಷ್ಟ ರೀತಿಯ ಪಾದರಕ್ಷೆಗಳು ಬಳಕೆಗೆ ಬಂದವು. ಮರದ ಪಾದರಕ್ಷೆಗಳ ಬಳಕೆ ಭಾರತದಲ್ಲಿ ನೂರಾರು ವರ್ಷಗಳಿಂದ ಇದೆ. ಪಾದರಕ್ಷೆಗಳು ಮೊದಲು ಸಮತಲವಿದ್ದಿತ್ತು. ಸುಮಾರು 16ನೇ ಶತಮಾನದ ಬಳಿಕ ಐರೋಪ್ಯ ರಾಜ್ಯಗಳಲ್ಲಿ ಹಿಮ್ಮಡಿಯ ಭಾಗವನ್ನು ಎತ್ತರಿಸಿ ಮಾಡುತ್ತಿದ್ದರು. ಕಾರ್ಕ್ ಅಥವಾ ಕಟ್ಟಿಗೆಯ ತುಂಡನ್ನು ಈ ಭಾಗಗಳಲ್ಲಿ ಹೊಂದಿಸಲಾಗುತ್ತಿತ್ತು. 18ನೇ ಶತಮಾನದಲ್ಲಿ ಇದು 5 ಸೆಂಟಿಮೀಟರ್ ಗಳಿಗಿಂತಲೂ ಹೆಚ್ಚು ಎತ್ತರ ತಲುಪಿತು. 19ನೇ ಶತಮಾನದಲ್ಲಿ ಪುರುಷರ ಪಾದರಕ್ಷೆಗಳಲ್ಲಿ ಹಿಮ್ಮಡಿಯ ಎತ್ತರ ತೆಗೆದು ಹಾಕಲಾಯಿತು, ಮತ್ತು ಇಂದಿನವರೆಗೆ ಇದು ಸಾಧಾರಣ ಸ್ಥಿತಿಯಲ್ಲಿದೆ.

ಪೂರ್ವಕಾಲದಿಂದಲೂ ಅಲಂಕಾರಿಕ ಪಾದರಕ್ಷೆಗಳಿಗೆ ಅದರಲ್ಲೂ ಸ್ತ್ರೀಯರ ಪಾದರಕ್ಷೆಗಳಿಗೆ ಪ್ರಾಶಸ್ತ್ಯ ಹೆಚ್ಚು. ವಿವಿಧ ರಂಗುಗಳನ್ನು ಹಾಕುವುದು, ಕಸೂತಿ ಕೆಲಸ ಮಾಡುವುದು ಮತ್ತು ಅಪೂರ್ವ ಲೋಹಗಳನ್ನು ಸೇರಿಸುವುದು, ಹರಳುಗಳನ್ನು ಇವುಗಳಲ್ಲಿ ಹೆಣೆಯುವುದು ಇವುಗಳಿಂದ ಪಾದರಕ್ಷೆಯು ಕುಶಲ ಕೈಗಾರಿಕೆಯಾಗಿತ್ತು. ಚೀನಾದಲ್ಲಿ ಮಧ್ಯಯುಗ ಕಾಲದಲ್ಲಿ ಶ್ರೀಮಂತ ಮಹಿಳೆಯರು ಅತಿ ಪುಟ್ಟ ಪಾದರಕ್ಷೆಗಳನ್ನು ಧರಿಸುತ್ತಿದ್ದರು. ಮಹಿಳೆಯ ಪಾದ ಕಿರಿದಾಗಿದ್ದರೆ ಉಚ್ಚ ಸಾಮಾಜಿಕ ವರ್ಗದ ಸಂಕೇತವೆಂದು ಅಲ್ಲಿ ಭಾವಿಸುತ್ತಿದ್ದರು. ಈಗ ಪಾದರಕ್ಷೆಗಳು ಉಷ್ಣಪ್ರದೇಶಗಳಲ್ಲಿ ಚಪ್ಪಲಿಗಳಂತೆಯೂ ಶೀತ ಪ್ರದೇಶಗಳಲ್ಲಿ ಬೂಟುಗಳಂತೆಯೂ ಮೆರೆಯುತ್ತವೆ. ಇವು ಅಸಂಖ್ಯಾತ ಮಾದರಿಯಲ್ಲಿರುತ್ತವೆ. ಧರಿಸುವವರ ಹಿತವೇ ಈಗಿನ ಪಾದರಕ್ಷೆ ತಯಾರಿಕೆಯಲ್ಲಿ ಮುಖ್ಯ ಅಂಶವೆನಿಸಿದೆ ಈ ತಯಾರಿಕೆ ಬೃಹತ್ ಪ್ರಮಾಣದಲ್ಲಿ ಎಲ್ಲೆಲ್ಲೂ ನಡೆಯುತ್ತದೆ. ಸಾಧಾರಣ ಕೆಲಸಕ್ಕೆ, ನಡಿಗೆಗೆ, ನಾನ ಕ್ರೀಡೆಗಳಿಗೆ, ನೀರಿನೊಳಗೆ ಓಡಾಟಕ್ಕೆ, ಅಂತರಿಕ್ಷಯಾನಕ್ಕೆ ಹೀಗೆ ಆಯಾ ಕೆಲಸಗಳಿಗೆ ತಕ್ಕದಾದ ವಿಶಿಷ್ಟ ಪಾದರಕ್ಷೆಗಳಿರುತ್ತವೆ. ಈಗ ಜನರು ಉಡುಗೆಗಳಿಗೆ ತಕ್ಕ ಮಾದರಿಯ ಮತ್ತು ಬಣ್ಣದ ಪಾದರಕ್ಷೆ ಬಳಸುತ್ತಾರೆ.

ಹಿಂದಿನ ಕಾಲಕ್ಕೆ ಮಕಮಲ್, ಸ್ಯಾಟಿನ್ ಬಟ್ಟೆಗಳಿಂದ ಸ್ತ್ರೀಯರಿಗೆ ಬೇಕಾದ ಪಾದರಕ್ಷೆಗಳನ್ನು ತಯಾರಿಸುತ್ತಿದ್ದರು. ಆದರೆ ಈಗ ಸಾಧಾರಣವಾಗಿ ತೊಗಲಿನ ಪಾದರಕ್ಷೆಗಳೇ ಹೆಚ್ಚು. ಪ್ಲಾಸ್ಟಿಕ್ ಪಾದರಕ್ಷೆಗಳು ವಿಜ್ಞಾನದ ಕೊಡುಗೆ. ಈಗಿನ ಕಾಲದಲ್ಲಿ ಪಾದರಕ್ಷೆ ಸರಿಯಾಗಿ ಕೂಡುವುದೇ ಇಲ್ಲವೇ ಎಂಬುದನ್ನು
ಕ್ಷ ಕಿರಣಗಳ ಮೂಲಕ ನಿರ್ಧರಿಸುತ್ತಾರೆ. ಹಸು, ಹಂದಿ, ಕಾಂಗರೂ, ಮೊಸಳೆ ಸರೀಸೃಪ, ಷಾರ್ಕ್ ಮೀನು ಹಾಗೂ ರೇಷ್ಮೆ, ಸ್ಯಾಟಿನ್, ಹುಲ್ಲುಗಳು ಇಂದಿನ ಪಾದರಕ್ಷೆಯ ತಯಾರಿಕೆಯಲ್ಲಿ ಶೋಭೆಗಾಗಿ ಉಪಯೋಗಿಸಲ್ಪಡುತ್ತಿವೆ. ಅತ್ಯಂತ ಮುಂದುವರಿದ ಬೂಟು ತಯಾರಿಕೆಯಲ್ಲಿ ಒಂದು ಪಾದರಕ್ಷೆಗೆ 291 ವಿಭಾಗಗಳನ್ನು ಹೊಂದಿಸಲಾಗುತ್ತದೆ. ಇಂತಹ ಪಾದರಕ್ಷೆಯ ಪ್ರಧಾನ ವಿಭಾಗಗಳು ಕೇವಲ ಐದು ಮಾತ್ರ. ಪಾದರಕ್ಷೆಯ ಉದ್ಯಮ ಇಂದು ಎಲ್ಲಾ ದೇಶಗಳಲ್ಲಿಯೂ ಸಾವಿರಾರು ಜನರಿಗೆ ಜೀವನೋಪಾಯವನ್ನು ಕಲ್ಪಿಸಿದೆ.

ಪ್ರಪಂಚದಲ್ಲಿ ಈ ಉದ್ಯಮದಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಮೊದಲನೇ ಸ್ಥಾನ ಅಲ್ಲಿ ವರ್ಷಕ್ಕೆ ಸುಮಾರು 85 ಕೋಟಿ ಜೊತೆ ಪಾದರಕ್ಷೆಗಳು ಮಾರಾಟವಾಗುತ್ತವೆ. ಈ ಉದ್ಯಮದಲ್ಲಿ ಕೆಲಸ ಮಾಡುವವನು ಸರಾಸರಿ ವರ್ಷಕ್ಕೆ 2900 ಜೊತೆಗಳನ್ನು ಮಾಡುತ್ತಾನೆ. ವರ್ಷಕ್ಕೆ ಪಾದರಕ್ಷೆಗಳು ಉತ್ಪಾದನೆ ಒಂದು ಕೋಟಿ ಜೊತೆಯಷ್ಟು ಹೆಚ್ಚುತ್ತಿದೆ. ಭಾರತದ ಕಾರ್ಖಾನೆಗಳಲ್ಲಿ ತಯಾರು ಮಾಡುವ ಪಾದರಕ್ಷೆಗಳ ಸಂಖ್ಯೆ ಏರುತಲೆ ಇದೆ 1964 ರಲ್ಲಿ ವರ್ಷಕ್ಕೆ ಸುಮಾರು 80 ಲಕ್ಷ ಜೊತೆ ಇದ್ದುದು 1967ರ ಹೊತ್ತಿಗೆ ಒಂದು ಕೋಟಿ 5 ಲಕ್ಷವನ್ನು ಮೀರಿತು. ಭಾರತ ಪಾದರಕ್ಷೆಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತದೆ. ಹೀಗೆ ರಫ್ತು ಮಾಡಿದ ಪಾದರಕ್ಷೆಗಳ ಬೆಲೆ 1964-65 ರಲ್ಲಿ 3 ಕೋಟಿ 48 ಲಕ್ಷ,1967-68 ರಲ್ಲಿ ಏಳು ಕೋಟಿ 52 ಲಕ್ಷ ರೂಪಾಯಿ. 2024 ವಿಶ್ವದಲ್ಲಿ 17.7ಶತಕೋಟಿ ಜೋಡಿ ಶೂಗಳ ಉತ್ಪಾದನೆ ಯೊಂದಿಗೆ ಚೀನಾದ ನಂತರ ಭಾರತ ಎರಡನೇ ಅತಿದೊಡ್ಡ ಶೂ ಉತ್ಪಾದನೆ ಮಾಡುತ್ತಿದೆ. ಭಾರತ 2024 ಫೆಬ್ರವರಿಗೆ 9,172 ಮೆಟ್ರಿಕ್ ಟನ್ ಶೂಗಳನ್ನು ರಫ್ತು ಮಾಡಿದೆ. ಪಾದರಕ್ಷೆ ತಯಾರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ