ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ, ವಿಕೃತ ಚಾರಣಿಗರಿಗಾಗಿ ಅಲ್ಲ! - Mahanayaka
11:00 PM Tuesday 24 - December 2024

ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ, ವಿಕೃತ ಚಾರಣಿಗರಿಗಾಗಿ ಅಲ್ಲ!

western ghats
24/06/2024

ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ…ಮಾನವ ತಿರುಗಾಟಕ್ಕೆ ಅಲ್ಲ. ಮೋಜು, ಮಸ್ತಿ, ಗೌಜಿ, ಗದ್ದಲ ಮಾಡಲು ಹೋಗುವ ವಿಕೃತ ಚಾರಣಿಗರಿಗಾಗಿ ಇರುವುದಲ್ಲ, ಪಶ್ಚಿಮ ಘಟ್ಟದ ಕಾಡು, ಕಣಿವೆ, ಜಲಪಾತ, ನೀರಿನ ತೊರೆಗಳು, ವನ್ಯ ಜೀವಿಗಳು ಅಲ್ಲಿನ ಸೂಕ್ಷ್ಮ ಜೀವ ವೈವಿದ್ಯತೆಯ ಬದುಕಿನ ಸಂಕಲೆ. ಒಂದು ಸೂಕ್ಷ್ಮ ಜೀವಿಗೆ ಸಮಸ್ಯೆ ಆದರೆ ಅದನ್ನೇ ಅವಲಂಬಿಸಿಕೊಂಡು ಇರುವ ಇನ್ನೊಂದು ಜೀವಿಗೂ ಸಮಸ್ಯೆ ಆಗುತ್ತದೆ. ಕೆಳಗೆ ಹರಿಯುವ ನೀರಿನ ತೊರೆಗೆ ಬೆಟ್ಟದ ಮೇಲೆ ಇರುವ ಸಣ್ಣ ನೀರಿನ ಒರತೆಯ ಸೂಕ್ಷ್ಮ ಪ್ರದೇಶ ಪ್ರಧಾನವಾಗಿರುತ್ತದೆ. ಶೋಲಾ ಅಡವಿಯ ಒಳಗೆ ನೆಲದೊಳಗೆ ಅವಿತುಕೊಂಡು ಇರುವ ಇರುವೆ, ಕೀಟ, ಪಾಚಿ, ಶೀಲಿಂದ್ರಗಳು ಕೂಡಾ ಅಲ್ಲಿನ ಅಡವಿಯ ಭದ್ರತೆಗೆ ಕಾರಣವಾಗಿರುತ್ತದೆ. ನದೀ ಮೂಲಗಳು ಉಗಮವಾಗುವ ಮತ್ತು ಹರಿದಾಡುವ ಕಣಿವೆ, ಕಂದರಗಳು ನಾಡಿನ ನದಿಗಳ ನೆಮ್ಮದಿಯ ತಾಣವಾಗಿರುತ್ತವೆ. ಜೇನು ನೊಣದಿಂದ ಆನೆಯವರೆಗೆ, ಚಿಕ್ಕ ಹುಲ್ಲಿನಿಂದ ಬ್ರಹತ್ ಮರದವರೆಗೆ ಪಶ್ಚಿಮ ಘಟ್ಟದ ರಕ್ಷಣೆಗೆ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಪ್ರದೇಶಗಳಿಗೆ ಮಾನವ ಸಂಚಾರವೇ ಅಪಾಯ ಮತ್ತು ಅಲ್ಲಿನ ಭದ್ರತೆಗೆ ಕೆಡುಕು.

ಇತ್ತೀಚಿಗಿನ ದಿನಗಳಲ್ಲಿ ಚಾರಣಿಗರ ಸಂಖ್ಯೆ ಹೆಚ್ಚಾಗುತ್ತಿದೆ.  ಪ್ರಕೃತಿಯ ಮೇಲಿನ ಅಭಿಮಾನ, ಕಾಳಜಿಯ ನೈಜ ಚಾರಣಿಗರು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದು ವಿಕೃತ ಚಾರಣಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರಿಗೆ ಯಾಕೆ ಬೆಟ್ಟ ಹತ್ತುವುದೆಂದು ಸ್ವತಃ ಅವರಿಗೇ ತಿಳಿದಿರುವುದಿಲ್ಲ. ಈ ವಿಕೃತ ಚಾರಣಿಗರು ನಿಸರ್ಗದ ಮೇಲೆ ಗೌರವದಿಂದ ಬರುವುದಲ್ಲ. ಅಲ್ಲಿ ‘ ಗಮ್ಮತ್ ‘ ಮಾಡುವುದೊಂದೇ ಉದ್ದೇಶ ಇವರದ್ದು. ಇವರಿಗೆ ಬೆಟ್ಟ ಏರುವಾಗ ಕೈಯಲ್ಲಿ ಸಿಗರೇಟು ಬೇಕು, ಕೆಲವರಿಗೆ ಮದ್ಯದ ಬಾಟಲ್ ಬೇಕು. ಇನ್ನು ಕೆಲವರಿಗೆ ದಾರಿ ಉದ್ದಕ್ಕೂ ಮ್ಯೂಸಿಕ್ ಬೇಕು, ಕೆಲವರಿಗೆ ಡಿಜೆ ಡಾನ್ಸ್ ಬೇಕು, ಅಲ್ಲಿ ಅಡವಿ ನಡುವೆ, ಬೆಟ್ಟದ ಮೇಲೆ ಕೇಕೆ, ಬೊಬ್ಬೆ ಹಾಕಲೇಬೇಕೆಂಬ ಹರಕೆ ಹೊತ್ತವರೂ ಇರುತ್ತಾರೆ. ಯಾವುದಾದರೂ ವನ್ಯ ಜೀವಿಯನ್ನು ಕಂಡರೆ ಅದನ್ನು ಸುಕ್ಕ ಮಾಡಿ ತಿನ್ನುವ ನಾಲಿಗೆ ಚಪಲದ ಆಸೆ ಇಟ್ಟುಕೊಂಡವರೂ ಬರುತ್ತಾರೆ. ಇವರಿಗೆ ವನ್ಯ ಜೀವಿಗಳ ವಿಚಾರ, ಅಲ್ಲಿನ ನದಿ ಕಣಿವೆಗಳ ಮಹತ್ವ, ಬೆಟ್ಟ, ಕಾನನದ ಅಗತ್ಯ, ಕಾಡ್ಗಿಚ್ಚು, ಭೂಕುಸಿತದ ದುಷ್ಪರಿಣಾಮ, ಅಪಾಯದ ಹಂತದಲ್ಲಿ ಇರುವ ಪಶ್ಚಿಮ ಘಟ್ಟ ಮತ್ತು ಗಿರಿ ಕಾನನದ ಪ್ರಾಮುಖ್ಯತೆ, ತಮ್ಮ ಬದುಕಿನ ನೆಮ್ಮದಿಗೆ ಪಶ್ಚಿಮ ಘಟ್ಟದ ಕೊಡುಗೆ. ಯಾವ ವಿಷಯವೂ ಅಗತ್ಯವಿರುವುದಿಲ್ಲ. ಕೇವಲ ತಮ್ಮ ವಾರಾಂತ್ಯದ ಮೋಜು, ಗೌಜಿಗೆ ಮಾತ್ರ ಇಂತವರಿಗೆ ಕಾಡು ಬೇಕಾಗಿರುವುದು. ಅದಕ್ಕೆ ತಕ್ಕ ಇಂತಹ ಹುಚ್ಚು ಚಾರಣಿಗರಿಗೆ ಪೂರಕವಾಗಿ ಒಂದಷ್ಟು ರೆಸಾರ್ಟು ಗಳು ಬೆಳೆಯುತ್ತಲೇ ಇವೆ. ನಗರದಲ್ಲಿ ಇದ್ದು ಬೇಕಾದಷ್ಟು ಹಣ ಇದೆ ಎಂಬ ಅಹಕಾರದಲ್ಲಿ ನಗರದ ಜಂಜಾಟವನ್ನು ಪ್ರಕೃತಿಯ ಮಡಿಲಿಗೆ ತರಬೇಡಿ. ನಿಮ್ಮ ಹಣದ ದರ್ಪ, ದೌಲತ್ತು ನಗರದಲ್ಲೇ ಇರಲಿ. ಈಗಾಗಲೇ ಹಂತ, ಹಂತವಾಗಿ ಪ್ರಕೃತಿಗೆ ಏಟು ಬೀಳುತ್ತಲೇ ಇದ್ದು, ನೋವು ತಿಂದು ವೇದನೆ ವ್ಯಕ್ತ ಪಡಿಸುತ್ತಿರುವ ಗಿರಿ ಕಾನನದ ಮಡಿಲಿಗೆ ರಗಳೆ ಕೊಡುವ ಕಟುಕ ಚಾರಣಿಗರು ಬರದೇ ಇರುವುದು ಒಳಿತು. ಪ್ರಕೃತಿ ನೆಮ್ಮದಿಯಾಗಿ ಇರಲಿ.

ಅರಣ್ಯ ಇಲಾಖೆ ಇಂತಹ ಚಾರಣಿಗರನ್ನು ತಡೆಯಬೇಕು, ಅದು ಬಿಟ್ಟು ಶುಲ್ಕ ಪಡೆದು ಇಂತಹ ಕಿರಿಕ್ ಚಾರಣಿಗರಿಗೆ ಅವಕಾಶ ಮಾಡಿಕೊಡುವುದು ಪ್ರಕೃತಿಯ ನೋವಿಗೆ ಇನ್ನಷ್ಟು ಗಾಯ ಗೊಳಿಸಿದಂತೆ.

ಎತ್ತಿನ ಭುಜ ಬೆಟ್ಟಕ್ಕೆ 5,000 ಚಾರಣಿಗರು ಬಂದಿದ್ದರಂತೆ!

ಪಶ್ಚಿಮ ಘಟ್ಟದ ಬೆಟ್ಟಗಳು ನೆಮ್ಮದಿಯ ಮೌನ ತಾಣವಾಗಿದ್ದು ಇಂತಹ ತಾಣಗಳಿಗೆ ಸಾವಿರಾರು ಚಾರಣಿಗರನ್ನು ಬಿಟ್ಟು ಏನು ಸಂತೆ, ಗದ್ದಲದ ಮಾರ್ಕೆಟ್ ಆಗಿ ಪರಿವರ್ತನೆ ಮಾಡುವುದೋ??!

ಎತ್ತಿನ ಭುಜ ಪೀಕ್ ನಲ್ಲಿ ಹೆಚ್ಚು ಎಂದರೆ 50 ಜನರು ಇರಬಹುದು, 5000 ಜನರು ಮೇಲೇರಲು ಮುನ್ನುಗ್ಗುವುದೆಂದರೆ ಇವರ ಬೊಬ್ಬೆ, ಇವರ ಅಟ್ಟಹಾಸ, ಇವರ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ, ಇವರ ಅವಿವೇಕ ವರ್ತನೆ ಹೇಗಿರಬಹುದು ಊಹಿಸಿ..!

ಅರಣ್ಯ ಇಲಾಖೆ ಇಂತಹ ಅಧಿಕ ಸಂಖ್ಯೆಯ ಚಾರಣಿಗರನ್ನು ತಡೆದು ಶಾಶ್ವತ ನಿರ್ಬಂಧ ಹಾಕುವುದು ಬಿಟ್ಟು ಚಾರಣಿಗರ ಅನುಕೂಲಕ್ಕೆ ಏನೋ ಕಾಮಗಾರಿ ಮಾಡುವುದಂತೆ…??!!

ಚಾರಣವೆಂದರೆ  ವಿಕೃತ ಮೋಜಿನ ಹೂರಣವಲ್ಲ.. ಚಾರಣವೆಂದರೆ ನಮ್ಮ ಮತ್ತು ಪ್ರಕೃತಿಯ ನಡುವಿನ ಮೌನ ಸಂವಾದವಾಗಿ ಪ್ರಕೃತಿಯ ವೇದನೆ, ರೋದನಕ್ಕೆ ಕಿವಿಯಾಗಿ ಅದರ ನೆಮ್ಮದಿಗೆ ನಮ್ಮ ಸ್ವರ — ಕರಗಳು ಮಿಡಿಯುವಂತಿರಬೇಕು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ