ಕೋಳಿಗೆ ಅರ್ಧ ಟಿಕೆಟ್‌ ತೆಗೆದುಕೊಳ್ತೀನಿ, ಆದ್ರೆ ಕೋಳಿಗೆ ಸೀಟ್‌ ಕೊಡಬೇಕು: ಕಂಡೆಕ್ಟರ್‌ ಜೊತೆ ಮಹಿಳೆ ವಾಗ್ವಾದ - Mahanayaka
7:26 PM Saturday 21 - December 2024

ಕೋಳಿಗೆ ಅರ್ಧ ಟಿಕೆಟ್‌ ತೆಗೆದುಕೊಳ್ತೀನಿ, ಆದ್ರೆ ಕೋಳಿಗೆ ಸೀಟ್‌ ಕೊಡಬೇಕು: ಕಂಡೆಕ್ಟರ್‌ ಜೊತೆ ಮಹಿಳೆ ವಾಗ್ವಾದ

bus seat
13/02/2024

ವಿಜಯನಗರ: ಕೋಳಿಗೆ ಟಿಕೆಟ್‌ ತೆಗೆದುಕೊಳ್ಳುವಂತೆ ಕಂಡೆಕ್ಟರ್‌  ಹೇಳಿದಾಗ ಮಹಿಳೆ ಮತ್ತು ಕಂಡೆಕ್ಟರ್‌ ನಡುವೆ ವಾಗ್ವಾದ ಏರ್ಪಟ್ಟ ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಕಂಡಕ್ಟರ್ ಮತ್ತು ಮಹಿಳೆ ನಡುವೆ ಭಾನುವಾರ ರಾತ್ರಿ ಈ ಜಗಳ ನಡೆದಿದೆ.

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಹಗರಿಬೊಮ್ಮನಹಳ್ಳಿ ಘಟಕದ ಸಾರಿಗೆ ಬಸ್ ಹೊಸಪೇಟೆ ಮಾರ್ಗವಾಗಿ ಕೂಡ್ಲಿಗಿ ಪಟ್ಟಣಕ್ಕೆ ಬಂದಾಗ ಜಗಳೂರು ಕಡೆಗೆ ಹೋಗಲು ಮಹಿಳೆಯೊಬ್ಬರು ಬಸ್ ಹತ್ತಿದ್ದಾರೆ. ಈ ವೇಳೆ ಜನರಿಗೆ ಕಾಣದಂತೆ ರಟ್ಟಿನ ಬಾಕ್ಸ್ ನಲ್ಲಿ ಇಟ್ಟಿದ್ದ ಕೋಳಿ ಕೂಗಿದೆ. ಇದಕ್ಕೆ ಕಂಡಕ್ಟರ್ ಕೋಳಿ ಯಾರದೆಂದು ಕೇಳಿ ಟಿಕೆಟ್ ಪಡೆಯಲು ಹೇಳಿದ್ದಾರೆ.

ಈ ವೇಳೆ ಟಿಕೆಟ್‌ ಪಡೆದುಕೊಳ್ಳಲು ಮಹಿಳೆ ಒಪ್ಪಿಕೊಂಡಿದ್ದಾರೆ. ಅಲ್ಲದೇ ಟಿಕೆಟ್‌ ಪಡೆದರೆ ತನ್ನ ಕೋಳಿಗೆ ಕುಳಿತುಕೊಳ್ಳಲು ಸೀಟ್‌ ಕೊಡಬೇಕು ಎಂದು ಮಹಿಳೆ ಪಟ್ಟು ಹಿಡಿದಿದ್ದಾರೆ.

ಕೋಳಿಗೆ ಕೂಡ ಟಿಕೆಟ್‌ ಕೊಡಬೇಕು ಎಂದು ಕಂಡೆಕ್ಟರ್‌ ಕೇಳಿದಾಗ, ನೀನ್ಯಾವ ಸೀಮೆ ಕಂಡೆಕ್ಟರ್‌, ಕೋಳಿಗೆ ಯಾರಾದ್ರೂ ಟಿಕೆಟ್‌ ತೆಗೆಯುತ್ತಾರಾ? ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ.

ರೂಲ್ಸ್ ಪ್ರಕಾರ ಕೋಳಿಗೆ ಆಫ್ ಟಿಕೆಟ್ ತಗೋಬೇಕು. ಇಲ್ಲ ಅಂದ್ರೆ ಕೋಳಿ ಹಿಡ್ಕೊಂಡು ಕೆಳಗಿಳಿ ತಾಯಿ ಅನ್ನುತ್ತಿದ್ದಂತೆ, ಮಹಿಳೆಯು ಸರಿ ಕಂಡಕ್ಟರೇ.. ಟಿಕೆಟ್ ತಗಂತೀನಿ ಆದ್ರೆ ಕೋಳಿಗಾಗಿ ಸೀಟು ಕೊಡಲೇಬೇಕು ಎಂದು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಇನ್ನೂ ಮಹಿಳೆಗೆ ಇತರ ಪ್ರಯಾಣಿಕರು ಸರ್ಕಾರಿ ಬಸ್‌ ನ ರೂಲ್ಸ್‌ ಬಗ್ಗೆ ತಿಳಿಸಿದರೂ, ಮಹಿಳೆ ಸುಮ್ಮನಾಗದೇ, ತಮ್ಮ ವಾದ ಮುಂದುವರಿಸಿದರು.

ಅರ್ಧ ಟಿಕೆಟ್‌ ಪಡೆದರೂ ಕೋಳಿಗೆ ಸೀಟ್‌ ಯಾಕೆ ಕೊಡಲ್ಲ ಎನ್ನುವ ಮಹಿಳೆಯ ಪ್ರಶ್ನೆ ನ್ಯಾಯಯುವಾಗಿತ್ತು. ಈ ಬಗ್ಗೆ ಕೆಎಸ್‌ ಆರ್‌ ಟಿಸಿ ಇನ್ನಾದ್ರೂ ಎಚ್ಚೆತ್ತುಕೊಂಡು, ಸಾಕು ಪ್ರಾಣಿಗಳನ್ನು ಬಸ್‌ ನಲ್ಲಿ ಸಾಗಿಸುವ ವೇಳೆ ಅದನ್ನು ಸುರಕ್ಷಿತವಾಗಿಡಲು ಯಾವುದಾದರೂ ವ್ಯವಸ್ಥೆಗಳನ್ನು ಮಾಡುತ್ತಾ ಎಂದು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ