ಸಿನಿಮಾ, ಧಾರಾವಾಹಿಗಳಿಗಿಂತ ರಂಗಭೂಮಿ ದೊಡ್ಡದು: ಪರಮಾನಂದ ಸಾಲಿಯಾನ್‌ - Mahanayaka

ಸಿನಿಮಾ, ಧಾರಾವಾಹಿಗಳಿಗಿಂತ ರಂಗಭೂಮಿ ದೊಡ್ಡದು: ಪರಮಾನಂದ ಸಾಲಿಯಾನ್‌

rangahabba
05/03/2023

ಉಡುಪಿ: ಸಿನಿಮಾ, ಧಾರವಾಹಿಗಳು ಚೆನ್ನಾಗಿ ಕಾಣಬಹುದು. ಆದರೆ ಅಲ್ಲಿ ಎಷ್ಟು ಕಟ್‌, ರೀಟೇಕ್‌ಗಳು ಇರುತ್ತವೆ ಎಂಬುದು ನೋಡುಗರಿಗೆ ಗೊತ್ತಿರುವುದಿಲ್ಲ. ಈ ರೀತಿಯ ಕಟ್‌, ರೀಟೇಕ್‌ಗಳಿಲ್ಲದೇ ರಂಗದಲ್ಲಿ ಪ್ರದರ್ಶನಗೊಳ್ಳುವ ಕಲೆಗಳಲ್ಲಿ ಇಲ್ಲ. ಹಾಗಾಗಿ ರಂಗಭೂಮಿ ದೊಡ್ಡದು ಎಂದು ರಂಗಕರ್ಮಿ ಪರಮಾನಂದ ಸಾಲಿಯಾನ್‌ ಹೇಳಿದರು.

ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಏಳನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ಹಿಂದೆ ರಂಗಭೂಮಿಯಲ್ಲಿ ಅಷ್ಟೊಂದು ಪ್ರಯೋಗಗಳು ಇರಲಿಲ್ಲ. ಹಾಸ್ಯ ನಾಟಕಕ್ಕೆ ದುರಂತ ಹಾಡು, ದುರಂತ ನಾಟಕಕ್ಕೆ ಹಾಸ್ಯ ಪದ್ಯ ಬರೆದು ಮಾಡಲಾಗುತ್ತಿತ್ತು. ಇವತ್ತು ರಂಗಭೂಮಿ ಬಹಳ ಎತ್ತರಕ್ಕೆ ಹೋಗಿದೆ. ಬಹಳ ರಂಗತಂತ್ರಗಳಿವೆ. ರಂಗಭೂಮಿಯಲ್ಲಿ ನಿರ್ದೇಶಕರಿಂದ ತರಬೇತಿ ಪಡೆದು ಒಮ್ಮೆ ರಂಗಕ್ಕೆ ಹೋದ ಮೇಲೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಸ್ವಂತ ಪ್ರತಿಭೆ, ಪರಿಶ್ರಮದಿಂದಲೇ ಕಲೆ ಪ್ರದರ್ಶಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.


Provided by

ಸುಮನಸಾ ಯಾವುದನ್ನೇ ಮಾಡಲಿ ಶಿಸ್ತುಬದ್ಧವಾಗಿ ಮಾಡುತ್ತದೆ. ನವ್ಯ, ವಿಡಂಬನಾತ್ಮಕ ನಾಟಕಗಳಿಗೆ ಅದರದ್ದೇ ವೀಕ್ಷಕರು ಬೇಕು ಎಂಬ ಮಾತನ್ನು ಈ ತಂಡ ಸುಳ್ಳಾಗಿಸಿದೆ. ಇಲ್ಲಿ ಸಾಮಾನ್ಯ ಪ್ರೇಕ್ಷಕರನ್ನೇ ಸೆಳೆದು ಬಿಗಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಪ್ರೇಕ್ಷಕರನ್ನೂ ಬುದ್ಧಿವಂತರನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ‘21 ವರ್ಷ ಒಂದು ಸಂಸ್ಥೆಯನ್ನು ನಡೆಸುವುದು ಅಷ್ಟು ಸುಲಭವಲ್ಲ. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರಬೇಕು. ಸ್ವಂತ ಕಟ್ಟಡ ಆಗಬೇಕು’ ಎಂದು ಹಾರೈಸಿದರು.

ಯಕ್ಷಗುರು ದಿವಂಗತ ಯು. ದುಗ್ಗಪ್ಪ ಅವರ ಹೆಸರಲ್ಲಿ ಕೊಡಮಾಡುವ ಯಕ್ಷಸುಮಾ ಪ್ರಶಸ್ತಿಯನ್ನು ಸ್ವೀಕರಿಸಿದ ಯಕ್ಷಕಲಾವಿದ ರಾಜೀವ್‌ ತೋನ್ಸೆ ಮಾತನಾಡಿ, ಮನಸ್ಸು ಒಳ್ಳೆಯದಿದ್ದರೆ ಒಳ್ಳೆಯ ಕಾರ್ಯ ಆಗುತ್ತದೆ. ನಾವು ಮಾಡಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಇದಕ್ಕೆ ಸುಮನಸಾ ಸಾಕ್ಷಿ. ಕೆಲವು ಸದ್ದು ಜಾಸ್ತಿ ಇರುತ್ತದೆ. ಸುದ್ದಿ ಇರುವುದಿಲ್ಲ. ಸದ್ದಿಲ್ಲದೇ ಸುದ್ದಿ ಮಾಡಿದ ಸಂಸ್ಥೆ ಸುಮನಸಾ’ ಎಂದು ಬಣ್ಣಿಸಿದರು.

ಯಾವುದೇ ಅರ್ಜಿ ಸಲ್ಲಿಸದೇ ಗುರುತಿಸಿ ಕರೆದು ನೀಡುವ ಸನ್ಮಾನ ದೊಡ್ಡ ಕಾರ್ಯ. ಇದು ಮರೆಯಲಾಗದು, ಬೆಲೆ ಕಟ್ಟಲಾಗಾದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ, ‘ಸಾಂಸ್ಕೃತಿಕ ಲೋಕದಲ್ಲಿ ಸುಮನಸಾ ಬಹಳ ಪ್ರಸಿದ್ಧವಾದ ಹೆಸರು. ಅವರ ಚಟುವಟಿಕೆ, ಸಾಮಾಜಿಕ ಕಳಕಳಿ, ಸಾಮಾಜಿಕ ದೃಷ್ಟಿಕೋನ ಎಲ್ಲವೂ ಒಂದು ಕೈ ಮೇಲೆ ಎಂಬಂತೆ ಸುಮನಸಾ ಇದೆ. ಒಂದು ತಂಡ ಕಟ್ಟಿದರೆ ಹೀಗಿರಬೇಕು ಎಂದು ಎಲ್ಲರೂ ಬಯಸುವಂತೆ ಇದೆ’ ಎಂದರು.

ಪ್ರಚಾರಕ್ಕೆ ಒತ್ತು ನೀಡದೇ ಗುಣಮಟ್ಟದ ನಾಟಕಗಳನ್ನು ತೋರಿಸುವ ಕೆಲಸವನ್ನು ಮಾಡುತ್ತದೆ ಎಂಬ ಹೆಚ್ಚುಗಾರಿಕೆ ಈ ತಂಡಕ್ಕೆ ಇದೆ ಎಂದು ಶ್ಲಾಘಿಸಿದರು.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಮಿಂಚುತ್ತಿರುವ ಸುಮನಸಾ ಸದಸ್ಯ ರಾಧೇಶ್‌ ಶೇಣೈ ಅವರನ್ನು ಅಭಿನಂದಿಸಲಾಯಿತು. ಸುಮನಸಾ ಸಂಚಾಲಕ ಭಾಸ್ಕರ ಪಾಲನ್, ಗೌರವಾಧ್ಯಕ್ಷ ಎಂ.ಎಸ್. ಭಟ್‌ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಸ್ವಾಗತಿಸಿದರು. ಅಕ್ಷತ್‌ ಅಮೀನ್‌ ವಂದಿಸಿದರು. ಯೋಗೀಶ್‌ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುರಭಿ ಬೈಂದೂರು ಕಲಾವಿದರು ‘ಚೋಮನ ದುಡಿ’ ನಾಟಕ ಪ್ರಸ್ತುತಿಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ