ಇವರು ಪ್ರಜಾಪ್ರತಿನಿಧಿಗಳೇ !!! - Mahanayaka
10:30 PM Wednesday 5 - February 2025

ಇವರು ಪ್ರಜಾಪ್ರತಿನಿಧಿಗಳೇ !!!

dammapriya
25/07/2023

  • ದಮ್ಮಪ್ರಿಯ, ಬೆಂಗಳೂರು

ಪ್ರಜಾ ಪ್ರಭುತ್ವ ವ್ಯವಸ್ಥೆಯೊಳಗೆ  ಸಂವಿಧಾನದ ಆಶಯಗಳನ್ನು ಅವಮಾನಿಸಿ, ಜಾತಿ ನಿಂದನೆ ಮಾಡುತ್ತಿರುವ ಪ್ರಜಾ ಪ್ರತಿನಿಧಿಗಳಿಗೆ ನಿಜವಾಗಿಯೂ ಜನ ನಾಯಕರಾಗುವ ಅರ್ಹತೆಗಳಿವೆಯೇ ಎನ್ನುವುದು  ಜನಸಾಮಾನ್ಯರ ಪ್ರಶ್ನೆಗಳಾಗಿವೆ.  ಇತ್ತೀಚೆಗೆ  ವಿಧಾನಮಂಡಲದ ಅಧಿವೇಶನದಲ್ಲಿ  ಉಪ ಸಭಾಪತಿಗಳನ್ನು ಜಾತಿಯ ಆಧಾರದ ಮೇಲೆ ಅವಮಾನಿಸುವುದಲ್ಲದೆ,  ಮುಖದಮೇಲೆ ವಿದೇಯಕಗಳನ್ನು ಎಸೆದಿರುವುದು, ಮಾನವ ವಿರೋಧಿ ಮತ್ತು ಸಂವಿಧಾನಕ್ಕೆ ಅಪಮಾನ ಎಸಗಿದಂತಾಗಿದೆ. ಇಂತಹ ವರ್ತನೆಗಳಿಗೆ ಕುಮ್ಮಕ್ಕು ನೀಡುವ ನಾಯಕರನ್ನು ಭವಿಷ್ಯದಲ್ಲಿ  ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಾಗೂ ಸಂವಿಧಾನವನ್ನು ಅಪಚಾರ ಮಾಡಿರುವ ಹಿನ್ನೆಲೆಯಲ್ಲಿ ಅಮಾನತ್ತು ಮಾಡಬೇಕಾದ ಅನಿವಾರ್ಯತೆ ಇಂದಿನ ಸರ್ಕಾರಕ್ಕೆ ಬಹಳ ಮುಖ್ಯವಾಗಿದೆ.

ಸಂವಿಧಾನದ ಆಶಯಗಳನ್ನು  ಮತ್ತು ಸಾಮಾನ್ಯ ಜನರ ಕಷ್ಟಗಳನ್ನು ತಿಳಿಯದ ಇಂತ ನೀಚ, ನಿಕೃಷ್ಠ ಮನಸ್ಥಿತಿಯ ನಾಯಕರು ಹೇಗೆ ಎಲ್ಲಾ ವರ್ಗದ ಜನರಿಗೆ ನ್ಯಾಯ ಮತ್ತು ಸಮಾನತೆ ಒದಗಿಸುತ್ತಾರೆ ಎನ್ನುವುದನ್ನು ಇಂದಿನ ಜನಸಾಮಾನ್ಯರು ಅರಿಯಬೇಕಿದೆ.  ಕಳೆದ 75 ವರ್ಷಗಳ  ಸುವರ್ಣ ಸಂಭ್ರಮದ ಭಾರತದಲ್ಲಿ  ಕೇವಲ  8 -10 ವರ್ಷಗಳಿಂದೀಚೆಗೆ  ನಡೆದ ಕೋಮು ಗಲಭೆಗಳು ,  ಜಾತಿಯ ಗಲಭೆಗಳು, ಧರ್ಮವನ್ನು ಕುರಿತಾದ  ಕೋಲಾಹಲಗಳಿಗೇನು ಕಮ್ಮಿಯಿಲ್ಲಾ. ಈ ದೇಶವನ್ನು  ಧರ್ಮದ ಮತ್ತು ಜಾತಿಯ ಪವಿತ್ರತೆಯ ಹೆಸರಿನಲ್ಲಿ ತಳ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಿಂದ ತುಳಿಯಲ್ಪಟ್ಟಿತ್ತು.

ಕರ್ನಾಟಕದ ತಕ್ಷಣದ ರಾಜಕಾರಣದಲ್ಲಿ  ಒಬ್ಬ ದಲಿತ ಸಮುದಾಯದ ಸದಸ್ಯ ಸಭಾಪತಿಯಾದರೆ,  ಒಬ್ಬ ಮುಸ್ಲಿಂ ನಾಯಕ  ಸ್ಪೀಕರ್ ಆದರೆ ಅದನ್ನು ಸಹಿಸದ ಪೀತಮನಸ್ಸುಗಳು  ಹುಚ್ಚಾಪಟ್ಟೆ ತಲೆಕೆಡಿಸಿಕೊಂಡು  ಕೂಗಾಡುವ,  ಅಸಭ್ಯವಾದ  ವರ್ತನೆಯನ್ನು ತೋರಿಸಿರುವುದು ಇವರ ಕೂಗಾಟದಲ್ಲಿ ಯಾವುದೇ ತಿರುಳಿಲ್ಲ  ಎನ್ನಬಹುದು. ಇದು ಸಾಮಾನ್ಯರಿಗೆ ಅರ್ಥವಾಗುವುದರ ಬದಲು ನಾವುಗಳು ಏಕೆ ಹೀಗೆ ನಡೆದುಕೊಳ್ಳುತ್ತಿದ್ದೇವೆ ಎನ್ನುವುದು ಅಮಾನತ್ತುಗೊಂಡಿರುವ ನಾಯಕರು ಸಹ  ಅರಿಯದಾಗಿದೆ.  ಯಾಕೆಂದರೆ ಇವರುಗಳಿಗೆ ನಿರ್ದಿಷ್ಠವಾದ ನಾಯಕತ್ವದ ಗುಣಗಳೇ ಇಲ್ಲವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ತಮ್ಮ ಕೈ ಕೈ ಹಿಚುಕಿಕೊಂಡ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ತಾವುಗಳು ಸೋತಿರುವ ಕಾರಣ ಕುರಿತು ಮಾತನಾಡುವ ಬದಲು,  ಕೇವಲ ಮೂರೇ ದಿನಕ್ಕೆ ಇನ್ನು ಮುಖ್ಯಮಂತ್ರಿ ಯಾರೆಂದು ತೀರ್ಮಾನ ಮಾಡಿಲ್ಲ,  ಈ ಸರ್ಕಾರಕ್ಕೆ ಹೆಚ್ಚು ಉಳಿಗಾಲವಿಲ್ಲ ಎಂದೆಲ್ಲ ಬೊಬ್ಬೆಯಿಟ್ಟರು. ಆದರೆ ಸರ್ಕಾರ ರಚನೆಯಾಗಿ  ಎರಡು ಮೂರೂ ತಿಂಗಳಾಗುತ್ತಾ ಬಂದಿದ್ದೆ ಇನ್ನು ವಿರೋಧ ಪಕ್ಷದ ನಾಯಕನನ್ನು ನೇಮಿಸಿಕೊಳ್ಳದ ಪರಿಸ್ಥಿತಿಯಲ್ಲಿ ನಮ್ಮ ಬಿಜೆಪಿ ನಾಯಕರು ಇರುವುದನ್ನು ಗಮನಿಸಿದರೆ ಇನ್ನು ಮುಂದೆ ಈ ಪಕ್ಷಕ್ಕೆ ಕರ್ನಾಟಕದಲ್ಲಿ ಅಸ್ತಿತ್ವವೇ ಇರುವುದಿಲ್ಲವೇನೋ ಅನಿಸುತ್ತಿದೆ. ಇದಲ್ಲದೆ  ವಿರೋಧ ಪಕ್ಷದ ನಾಯಕರ  ಆಯ್ಕೆಯಾದರೆ ಎಲ್ಲಾ ಬಿಜೆಪಿ ನಾಯಕರು ಕೂಗಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಶಾಸನ ಸಭೆಯಲ್ಲಿ ಗೊಂದಲ ಗದ್ದಲ  ಎಬ್ಬಿಸಲು ಸಾಧ್ಯವಾಗುವುದಿಲ್ಲ, ಆ ಕಾರಣದಿಂದಾಗಿಯೇ ನಾವಿಕನಿಲ್ಲದ ನೌಕೆಯಂತೆ  ನಡೆಯುತ್ತ ಇರುವ  ವಿರೋಧಿ ಬಣ  ಮೇಲೆ ಕೆಳಗೆ ಮುಳುಗಿ ಏಳುವಂತಾಗಿದೆ.

ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರು ಎನ್ನುವ ಹಾಗೆ,  ಇವರುಗಳಿಗೆ ಸರಿಯಾಗಿ ಈ ದೇಶದ ನಿಜವಾದ ಇತಿಹಾಸ ಏನು ಎನ್ನುವುದು ಗೊತ್ತಿಲ್ಲವೇನೋ ಅನಿಸುತ್ತಿದೆ.ಹಾಗಾಗಿ ಇವರು ಮತ್ತೊಂದು ಇತಿಹಾಸವನ್ನು ಸೃಷ್ಠಿ ಮಾಡುವ ಯಾವ ಕೆಲಸವನ್ನು ಮಾಡಿಲ್ಲವೇ ?  ಆ ಕಾರಣಕ್ಕಾಗಿ ಜನಸಾಮಾನ್ಯರ,  ಬಡವರ, ದಲಿತರ  ಮಹಿಳೆಯರ  ವಿಮೋಚನೆಗೆ ನೆರವಾಗಿ ನಿಂತ ಸರ್ಕಾರದ ಯೋಜನೆಗಳ ವಿರುದ್ಧ ಗುಲ್ಲೆಬ್ಬಿಸುವ, ಶಾಸನ ಸಭೆಯಲ್ಲಿ ಕಿರುಚಾಡುವ ಮನಸ್ಥಿತಿ ನಿರ್ಮಾಣವಾಗಿದೆ.  ಒಬ್ಬ ದಲಿತ, ಒಬ್ಬ ಮುಸಲ್ಮಾನ ಈ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಇವರಿಗೆ ಸಹಿಸಿಕೊಳ್ಳಲಾರದಷ್ಟು  ಸಂಕಟವಾಗಿದೆ.

ಆದರೆ ನೀವುಗಳು  ಜನನಾಯಕರು,  ಸಾಮಾನ್ಯ ಜನರ ನಿಜವಾದ ಸಮಸ್ಯೆಗಳನ್ನು  ಸದನದಲ್ಲಿ ಚರ್ಚಿಸುವುದನ್ನು  ಬಿಟ್ಟು  ತಮ್ಮ ತಮ್ಮ ವಯಕ್ತಿಕ  ವಿಚಾರಗಳನ್ನು  ಕುರಿತು ಚರ್ಚುಸುತ್ತೀರೆಂದಾದರೆ ನಿಮಗೆ ನಿಜವಾಗಿಯೂ ನಾಚಿಕೆಯಾಗಬೇಕು, ಇಲ್ಲಾ ಆ ವಿಚಾರಗಳನ್ನು ಚರ್ಚಿಸುವಾಗ ನಿಮಗೆ ಮುಜುಗರವಾಗಬೇಕು. ಸದನವು  ಸಾಮಾನ್ಯ ಜನರ ಬವಣೆಗಳನ್ನು ನೀಗಿಸಲು  ಚರ್ಚಿಸುವ ಒಂದು ಪವಿತ್ರ ಸ್ಥಾನವೇ ಹೊರತು ಅಶ್ಲೀಲ ಸಿನಿಮಾಗಳನ್ನು ನೋಡುವ ಸ್ಥಳವಲ್ಲ, ಇದನ್ನು ಸದನದಲ್ಲಿ ಮೊದಲು ಪ್ರಾರಂಭಿಸಿದ್ದು ಯಾರು ನೀವೇ ಯೋಚಿಸಿ. ಈಗ ಈ ಸದನದಲ್ಲಿ ಆ ವಿಚಾರ  ಚರ್ಚೆಯಾಗಬೇಕು, ಈ ವಿಚಾರ ಚರ್ಚೆಯಾಗಬೇಕು ಎಂದು ಬೊಬ್ಬೆಯಿಡಲು ಯಾವ ನೈತಿಕತೆ ನಿಮ್ಮಲ್ಲಿದೆ ? ಸರ್ಕಾರಿ  ಕೆಲಸಗಳಲ್ಲದೆ,  ಪಕ್ಷದ ಕೆಲಸಗಳಿಗೆ  ಅಧಿಕಾರಿಗಳನ್ನು ಬಳಸಿಕೊಂಡು  ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಾಳುಮಾಡುತ್ತಿದ್ದಾರೆ ಎನ್ನುವ ನೀವು,  2023 ಚುನಾವಣೆಯ ಸಂದರ್ಭದಲ್ಲಿ  ಪ್ರಚಾರಕ್ಕಾಗಿ ಕೇಂದ್ರದಿಂದ ಬಂದ ರಾಜಕೀಯ ನಾಯಕರ ರಕ್ಷಣೆ, ಪಾಲನೆ, ಪೋಷಣೆಯ ಜವಾಬ್ದಾರಿಯನ್ನು ಇದೆ  ಅಧಿಕಾರಿಗಳು ನಿರ್ವಹಿಸುವಾಗ ಅಂದು ಆರ್ಥಿಕ ದಿವಾಳಿಯಾಗಲಿಲ್ಲವೇ ಎನ್ನುವುದನ್ನು ನೀವೇ ಯೋಚಿಸಬೇಕಿದೆ.

ನಿಮ್ಮ ಮೂಲ ಅಜೆಂಡಗಳೇ  ದಲಿತರನ್ನು  ಮತ್ತು ಮುಸಲ್ಮಾನರನ್ನು ಹತ್ತಿಕ್ಕುವುದು ಮತ್ತು  ಸಂವಿಧಾನಕ್ಕೆ ಅಪಮಾನ ಮಾಡುವುದು,  ಇಡೀ ವಿಶ್ವವೇ ಸಂವಿಧಾನವನ್ನು ಪ್ರಶಂಸೆಗೆ ಒಳಪಡಿಸುತ್ತಿರುವಾಗ  ನಿಮಗೆ ಈ ದೇಶದ ಪವಿತ್ರ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ  ಗೌರವವಿದೆಯೇ ? ನಿಮ್ಮ ನಾಯಕರಲ್ಲೇ ಇಬ್ಬರು ಹೇಳಿದ್ದರು, ನಾವು “ಬಂದಿರುವುದೇ ಸಂವಿಧಾನ ಬದಲಾಯಿಸಲು” ಎಂದು,  ಮತ್ತೊಬ್ಬ  ಶಾಸಕರು  “ಕ್ರಿಶ್ಚಿಯನ್ನರನ್ನು ಈ ದೇಶದಿಂದಲೇ ಓಡಿಸಬೇಕು” ಎಂದಾಗಲೇ  ಅರ್ಥವಾಯಿತು ನಿಮ್ಮ  ಮಾನವ ವಿರೋಧಿ ಮತ್ತು  ಅನ್ಯಧರ್ಮ  ವಿರೋಧಿ ನೀತಿಗಳು ಎಷ್ಟು ಬಲಿಷ್ಠವಾಗಿವೆ ಎಂದು.

ಕೇಂದ್ರದಲ್ಲಿ  ಸಂಗೋಲ್ ಎಂದು ಪ್ರವೇಶವಾಯಿತೋ, ಎಂದು ದೇಶದ ರಾಷ್ಟ್ರಪತಿಗಳನ್ನೇ ಬಿಟ್ಟು ನೀವು  ಪಾರ್ಲಿಮೆಂಟ್ ಭವನವನ್ನು ಉದ್ಘಾಟನೆ ಮಾಡಿದರೋ,  ಅದನ್ನು ನೀವು ಸಮರ್ಥಿಸಿಕೊಂಡರೋ  ಅಂದೇ  ಒಬಿಸಿ, ಎಸ್ ಸಿ,  ಎಸ್ ಟಿ,  ಧಾರ್ಮಿಕ ಅಲ್ಪಸಂಖ್ಯಾತರಿಗೆಲ್ಲ ಅರ್ಥವಾಯಿತು.  ನೀವು ಸಂವಿಧಾನವನ್ನಷ್ಟೇ ವಿರೋದಿಸುವವರಲ್ಲ ಜೊತೆಗೆ  ಇತರೆ ಧರ್ಮಿಯರನ್ನು ಮತ್ತು  ಈ ದೇಶದ ಮೂಲ ನಿವಾಸಿಗಳನ್ನು  ಅವರ ಏಳಿಗೆಯನ್ನು ವಿರೋಧಿಸುವವರು ಎಂದು.  ದಕ್ಷಿಣ ಭಾರತದಲ್ಲಿ  ಬಿಜೆಪಿ  ಹೇಳ ಹೆಸರಿಲ್ಲದಾಯಿತು, ಬಿಜೆಪಿ ತನ್ನ  ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆಯೇನೋ ಎನ್ನುವ ಭಯ ಪ್ರಾರಂಭವಾಗಿ,  ಇಲ್ಲಸಲ್ಲದ ಕಿತಾಪತಿ ತೆಗೆದು  ಗಲಾಟೆ ಎಬ್ಬಿಸಿ  ಮಾಧ್ಯಮಗಳಲ್ಲಿ  ತಮ್ಮನ್ನು ತಾವು ಬಿಂಬಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳವ ಪ್ರಯತ್ನವೆನ್ನಬಹುದು.

ಜೊತೆಗೆ  ಒಬ್ಬ ದಲಿತ  ಮತ್ತು ಒಬ್ಬ  ಮುಸಲ್ಮಾನ್  ನಾಯಕರು  ಅಧಿಕಾರದಲ್ಲಿರುವುದು  ನಿಮ್ಮ ಹೊಟ್ಟೆಯೊಳಗೆ  ಹಾವು ಬಿಟ್ಟಂತಾಗಿದೆ.  ಇನ್ನಾದರೂ ಅರ್ಥ ಮಾಡಿಕೊಳ್ಳಿ  ಭಾರತ ಸಂವಿಧಾನಕ್ಕೆ  ತನ್ನದೇ ಆದ  ಆಶಯವಿದೆ ,  ನೀವುಗಳೆ ಅಲ್ಲ,  ನಿಮ್ಮಂತಹ  ಮತ್ತಷ್ಟು ಪೀತ ಮನಸ್ಸುಗಳು  ಹುಟ್ಟಿಕೊಂಡರು  ಭಾರತೀಯ ಬಹುಸಂಖ್ಯಾತರನ್ನು ಏನು ಮಾಡಲು ಸಾದ್ಯವಿಲ್ಲ.  ನಿಮ್ಮೊಡನೆ ಇರುವ  ಮೀಸಲು ಕ್ಷೇತ್ರದ ನಾಯಕರಿಗೆ ಇದು ಬಹು ಬೇಗ ಅರ್ಥವಾಗಿ ನಿಮ್ಮಿಂದ ಹೊರಬರುವ  ಕಾಲ ದೂರವಿಲ್ಲ. ನಿಮ್ಮೊಡನೆ ಕೈ ಜೋಡಿಸಿ  ನಿಮ್ಮ ಅಸ್ತಿತ್ವಕ್ಕೆ  ಕಾರಣರಾಗಿ  ನಿಮ್ಮ  ಈ  ಜೀವ ವಿರೋಧಿ  ನೀತಿಗಳಿಗೆ  ನೀರೆರೆಯುತ್ತಿರುವ  ಭಾರತೀಯ  ಇತರೆ ವರ್ಗಗಳು  ನಿಮ್ಮಿಂದ ಈಗ ಹೊರಗಡೆ ಬರಲೇಬೇಕಾದ  ಪರಿಸ್ಥಿತಿಯನ್ನು  ನೀವೇ ಸೃಷ್ಠಿ ಮಾಡಿದಂತಾಗಿದೆ.

ಲಿಂಗಾಯಿತರು ಹಿಂದುಗಳಲ್ಲಾ  ಎನ್ನುವ  RSS  ನಾಯಕರ ಮಾತು ಇಂದಿಗೂ ಬೂದಿ ಮುಚ್ಚಿದ ಕೆಂಡವಾಗಿದೆ. ಈ ಹೇಳಿಕೆ  ಈ ಬಾರಿ ನಿಮಗೆ ಬಹಳ ದೊಡ್ಡ ಹೊಡೆತ ಕೊಟ್ಟಾಗಲೂ ನಿಮಗೆ ಇನ್ನು ಬುದ್ದಿ ಬಂದಿಲ್ಲಾ ಎಂದರೆ  ನಿಮಗೆ  ಹೇಗೆ ಅರ್ಥ ಮಾಡಿಸಬೇಕೋ ಗೊತ್ತಾಗುತ್ತಿಲ್ಲಾ.  ಮುಸಲ್ಮಾನರ ಓಟು ನಮಗೆ ಬೇಡ ಅಂದದ್ದು  ನಿಮ್ಮ  ಸೋಲಿಗೆ ಮತ್ತೊಂದು ಕಾರಣವಾಯಿತು. ನಾಳೆ ನಿಮಗೆ ದಲಿತರ ಓಟು ಬೇಡ,  ಮೀಸಲು ಕ್ಷೇತ್ರಗಳು, ಮೀಸಲು ಕ್ಷೇತ್ರದ ನಾಯಕರು ಬೇಡ ಎನ್ನುವುದಾದರೆ, ಒಬಿಸಿಗಳು ನಿಮ್ಮಿಂದ ತಾನಾಗಿಯೇ ಒಬ್ಬೊಬ್ಬರಾಗಿ  ದೂರ ಆಗುತ್ತಿದ್ದಾರೆ.  ಅದಕ್ಕಾಗಿ ನೀವು,  ಧರ್ಮದ ರಾಜಕಾರಣ, ಜಾತಿಯ ರಾಜಕಾರಣ, ಕೋಮು ಮನಸ್ಥಿತಿಯನ್ನು  ಬಿಡಬೇಕಾಗಿದೆ.  ಮೊದಲು ಸಂವಿಧಾನವನ್ನು ಅದರ ಆಶಯಗಳನ್ನು ತಿಳಿದರೆ ಮಾತ್ರ ಅರ್ಹ ನಾಯಕರಾಗುತ್ತೀರಿ.  ಇಲ್ಲದಿದ್ದಲ್ಲಿ ಈ ರೀತಿ ಉಚ್ಛಾಟನೆಗೊಂಡು  ಮೈ ಪರಚಿಕೊಳ್ಳುವ ನಾಯಕರಾಗುತ್ತೀರಿ. ಖಾಸಗಿ ವಿಚಾರಗಳನ್ನು  ಸದನದಲ್ಲಿ ಚರ್ಚಿಸುವುದನ್ನು ಬಿಟ್ಟು  ಜನಸಾಮಾನ್ಯರ  ಏಳಿಗೆಗೆ,  ರಾಷ್ಟ್ರದ ಅಭಿವೃದ್ಧಿಗೆ,  ನಾಡಿನ ಏಕತೆಗೆ ಎಲ್ಲರೂ ಒಟ್ಟಾಗಿ ದುಡಿಯೋಣ ಎನ್ನುವ  ಒಳ್ಳೆಯ ಮನಸ್ಸು ನಿಮ್ಮದಾಗಲಿ  ಎಂದು ಬಯಸುತ್ತೇನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ