“ಪಕ್ಷ ಕಟ್ಟಿ ಬೆಳೆಸಿದ ನನ್ನನ್ನು ಹೊರ ಹಾಕಿದರು”: ಜಗದೀಶ್ ಶೆಟ್ಟರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು : ಟಿಕೆಟ್ ಕೈ ತಪ್ಪಿದ ಬಳಿಕ ಬಿಜೆಪಿ ವಿರುದ್ಧ ಸೆಟೆದೆದ್ದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಶೆಟ್ಟರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಸೇರ್ಪಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಕಳೆದ ಆರು ತಿಂಗಳಿನಿಂದ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿತ್ತು. ಟಿಕೆಟ್ ಸಿಗುವುದಿಲ್ಲ ಎಂದು ನನಗೆ ಬಿಜೆಪಿ ವರಿಷ್ಠರು 15 ದಿನಗಳ ಮುಂಚೆಯೇ ನನಗೆ ಹೇಳಬಹುದಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ರೀತಿ ನಡೆಸಿಕೊಳ್ಳಬಾರದಿತ್ತು. ನನ್ನ ಬೆಂಬಲಿಗರು ಎರಡನೇ ಪಟ್ಟಿಯಲ್ಲಿಯೂ ನನ್ನ ಹೆಸರು ಇಲ್ಲದ್ದನ್ನು ನೋಡಿ ನನ್ನ ಬಳಿ ಬೇಸರ ತೋಡಿಕೊಂಡಿದ್ದಾರೆ. ನಾನು ಕಟ್ಟಿ ಬೆಳೆಸಿದ ಪಕ್ಷದಿಂದ ನನ್ನನ್ನೇ ಹೊರಹಾಕುವಂತೆ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳಿಂದ ನಾನು ನೊಂದು ಹೋಗಿದ್ದೇನೆ ಎಂದು ಅಸಮಾಧಾನ ಹೊರಹಾಕಿದರು.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಪಕ್ಷದ ಸದಸ್ಯತ್ವದ ಪಡೆಯುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಗತ. ಶೆಟ್ಟರ್ ಅವರಿಗೆ ನಮ್ಮ ಪಕ್ಷದ ಸಿದ್ದಾಂತ ಈಗಾಗಲೇ ಗೊತ್ತಿದೆ. ಅವುಗಳನ್ನು ಒಪ್ಪಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ನನಗೆ ಇರುವ ಸಂತೋಷವೆಂದರೆ; ತಮ್ಮ ಸ್ವಾಭಿಮಾನ ಕಾಪಾಡಿಕೊಳ್ಳಲು ಶೆಟ್ಟರ್ ಬಿಜೆಪಿ ತೊರೆದಿದ್ದಾರೆ”.
ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಲಿದೆ. ಶೆಟ್ಟರ್ ಜೊತೆಗೆ ಅಭಯ್ ಸಿಂಗ್ ಕೈ ಹಿಡಿಯುತ್ತಿದ್ದಾರೆ. ನಾನು 35 ವರ್ಷ ರಾಜ್ಯದಲ್ಲಿ ರಾಜಕಾರಣ ಮಾಡಿರುವೆ. ಒಮ್ಮೆಯೂ ಶೆಟ್ಟರ್ ಜೊತೆಗೆ ಜಗಳವಾಡಿಕೊಂಡಿಲ್ಲ” ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw