ಅಪಘಾತವಾದ ಕಾರಿನ ಚಕ್ರಗಳನ್ನು ಹೊತ್ತೊಯ್ದ ಕಳ್ಳರು !

ಕೊಟ್ಟಿಗೆಹಾರ: ಸುಮಾರು 20 ಅಡಿ ಆಳಕ್ಕೆ ಉರುಳಿ ಬಿದ್ದಿದ್ದ ಕಾರಿನ ಚಕ್ರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮಲೆಯ ಮಾರುತ ಸಮೀಪ ನಡೆದಿದೆ.
ಚಾರ್ಮಾಡಿ ಘಾಟ್ ನ ಮಲೆಯ ಮಾರುತ ಸಮೀಪ ಭಾನುವಾರ ರಾತ್ರಿ ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಯಾತ್ರೆಗೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಸೋಮವಾರ ರಾತ್ರಿ ಕಾರಿನ ಚಕ್ರಗಳು ಹಾಗೂ ಇನ್ನಿತರ ವಸ್ತುಗಳನ್ನು ಕದ್ದುಪರಾರಿಯಾಗಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ಅಪಘಾತವಾದ ವಾಹನಗಳ ಬಿಡಿ ಭಾಗಗಳನ್ನು ಕದಿಯುವ ತಂಡವೇ ಈ ಭಾಗದಲ್ಲಿ ಕಾರ್ಯ ಪ್ರವೃತ್ತವಾಗಿದೆ. ಚಾರ್ಮಾಡಿ ಘಾಟ್ ನಲ್ಲಿ ತಡೆಗೋಡೆ ನಿರ್ಮಾಣ ನಡೆಯುತ್ತಿದ್ದು, ಇಲ್ಲಿ ನಿರ್ಮಾಣ ಸಾಮಗ್ರಿಗಳನ್ನು ತಂದು ಇಟ್ಟಿದ್ದು ಅದನ್ನು ಕಳ್ಳರು ದೋಚುತಿದ್ದಾರೆ.
ತಡೆಗೋಡೆಗೆ ನಿರ್ಮಿಸಲು ತಂದಿಟ್ಟಿದ್ದ ಕಬ್ಬಿಣ ಜಾಕ್ ಸಿಮೆಂಟ್ ಎಂ ಸೆಂಡ್ ಜೆಲ್ಲಿಗಳನ್ನು ಸಹ ಕಳ್ಳರು ದೋಚಿದ್ದಾರೆ.
ರಾತ್ರಿ ಹೊತ್ತು ಹೈವೇ ಪೆಟ್ರೋಲಿಂಗೆ ಆಗ್ರಹ:
ರಾತ್ರಿ ಹೊತ್ತು ಚಾರ್ಮಡಿ ಘಾಟ್ ನಲ್ಲಿ ಕಳ್ಳತನವಾಗುತ್ತಿದ್ದು, ಇದನ್ನು ತಡೆಗಟ್ಟಲು ರಾತ್ರಿ ಹೊತ್ತು ಪೊಲೀಸ್ ಪೆಟ್ರೋಲಿಂಗ್ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.