ರಾತ್ರಿ 7 - 8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ: ಡಿ.ಕೆ.ಶಿವಕುಮಾರ್ - Mahanayaka

ರಾತ್ರಿ 7 — 8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ: ಡಿ.ಕೆ.ಶಿವಕುಮಾರ್

d k shivakumar
04/03/2025

ಬೆಂಗಳೂರು :  ರಾಜ್ಯದ ಕರಾವಳಿ ಭಾಗದಲ್ಲಿ  ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿವೆ ಎಂಬ ವಿಚಾರವಾಗಿ ಸದನದಲ್ಲಿ  ಗಂಭೀರ ಚರ್ಚೆ ನಡೆಯಿತು.

ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಕೇಳಿದಾಗ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

ಈ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಕರಾವಳಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಬರುವ ಜನರನ್ನು ಇತರೇ ಪ್ರವಾಸೋದ್ಯಮ ಸ್ಥಳಗಳಿಗೆ ಆಕರ್ಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು,  ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಬಹುತೇಕ ಯುವಕರು ಗೆದ್ದು ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಸೇರಿದಂತೆ ದೊಡ್ಡ ಅವಕಾಶ ಕರಾವಳಿ ಭಾಗದಲ್ಲಿದೆ. ಹೀಗಾಗಿ ನಮ್ಮ ಸಚಿವರಾದ ಹೆಚ್.ಕೆ ಪಾಟೀಲ್ ಅವರು ದೊಡ್ಡ ಕನಸು ಕಂಡಿದ್ದು ನಾವು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ ಎಂದರು.

ಇದಲ್ಲದೇ,  ಕರಾವಳಿ ಭಾಗದ ಶಾಸಕರ ಸಭೆ ಕರೆದು ಮಾತನಾಡಬೇಕಿದೆ. ರಾತ್ರಿ 7 — 8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ. ಯಾವುದೇ ಕಾರ್ಯಚಟುವಟಿಕೆ ಇರುವುದಿಲ್ಲ. ಧಾರ್ಮಿಕವಾದ ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ ಎಂದು ಡಿಸಿಎಂ  ಹೇಳಿದರು.

ಈ ವಿಚಾರವಾಗಿ ಅಲ್ಲಿನ ಶಾಸಕರೇ ಕೂತು ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಕ್ಕಳು ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಪ್ರಮಾಣವೂ ಕುಸಿಯುತ್ತಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ನಡೆಸುವವರು ಈ ವಿಚಾರವಾಗಿ ನಮ್ಮ ಬಳಿ ಚರ್ಚೆ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ಮಧ್ಯೆ ರಾತ್ರಿ 8ರ ನಂತರ ಏನು ಮಾಡಬೇಕು ಎಂದು ನೀವೇ ಸಲಹೆ ನೀಡಿ ಶಾಸಕ ಅರವಿಂದ್ ಬೆಲ್ಲದ್ ಅವರು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ರಾತ್ರಿ 7–8 ಗಂಟೆ ನಂತರ ಮಂಗಳೂರು ಸ್ಥಬ್ಧವಾಗಿದೆ ಎಂದರೆ ಮಂಗಳೂರಿನ ಜನ ಹೆಚ್ಚಾಗಿ ಮನೆಯಿಂದಾಚೆ ಬರುವುದಿಲ್ಲ. ಹೀಗಾದರೆ ಯಾವ ಆರ್ಥಿಕ ವಹಿವಾಟು ನಡೆಯುತ್ತದೆ ಎಂದು ಮರು ಪ್ರಶ್ನೆ ಹಾಕಿದರು.

ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಐಟಿ ಬಿಟಿ ಸ್ಥಾಪಿಸಲು ಪ್ರಸ್ತಾವನೆ ನೀಡಿತು, ಆದರೆ ಅಲ್ಲಿ ಒಂದೇ ಒಂದು ಕಾಂಪ್ಲೆಕ್ಸ್ ಕೂಡ ಇರಲಿಲ್ಲ. ಈಗ ಮೂರೋ, ನಾಲ್ಕೋ ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇರುವುದೆಲ್ಲ ಅಲ್ಲೇ. ಅಲ್ಲಿರುವ ಪ್ರತಿಭೆಗಳೆಲ್ಲವೂ ಬೆಂಗಳೂರು, ಮುಂಬೈ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದಾರೆ. ಯಾಕೆ ಈ ಪರಿಸ್ಥಿತಿ ಇದೆ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ನಗರದಲ್ಲಿ ಮನರಂಜನೆಗೆ ಅವಕಾಶವಿಲ್ಲದಿದ್ದರೆ ಅಲ್ಲಿ ಯುವಕರು ಆಸಕ್ತಿ ತೋರುವುದಿಲ್ಲ. ಹೀಗಾಗಿ ಅಲ್ಲಿನ ಶಾಸಕರು ಕೂತು ಚರ್ಚೆ ಮಾಡಿ. ಈ ವಿಚಾರವಾಗಿ ನಾನು ಹಾಗೂ ಪ್ರವಾಸೋದ್ಯಮ ಸಚಿವರಿಬ್ಬರೂ ಸೇರಿ ಜಿಲ್ಲೆಯ ಎಲ್ಲಾ ಶಾಸಕರ ಜತೆ ಪ್ರತ್ಯೇಕವಾಗಿ ಸಭೆ ಮಾಡುತ್ತೇವೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ