ಈ ಪಾತಾಳ ಕುಸಿತವನ್ನು ತಡೆಗಟ್ಟಲೇಬೇಕಿದೆ
ಪಾತಕೀಕರಣಕ್ಕೂ ಪಿತೃಪ್ರಾಧಾನ್ಯತೆಗೂ ಇರುವ ಸಂಬಂಧ ಮಹಿಳಾ ದೌರ್ಜನ್ಯಗಳಲ್ಲಿ ಕಾಣುತ್ತದೆ.
- ನಾ ದಿವಾಕರ
ಯಾವುದೇ ಸಾಮಾಜಿಕ ಪರಿಸರದಲ್ಲಾದರೂ ನಿತ್ಯ ಜೀವನದಲ್ಲಿ ಕಂಡುಬರುವಂತಹ ಸಮಾಜಘಾತುಕ, ಪಾಶವೀ ಲಕ್ಷಣದ ಘಟನೆಗಳು ನಿರ್ವಾತದಲ್ಲಿ ಸಂಭವಿಸುವುದಿಲ್ಲ. ನಾವೇ ಕಟ್ಟಿಕೊಂಡಿರುವ ಸಮಾಜದ ವಿವಿಧ ಮೂಲೆಗಳಿಂದ, ವಿಭಿನ್ನ ಆಯಾಮಗಳಲ್ಲಿ, ಭಿನ್ನ ಸ್ವರೂಪಗಳಲ್ಲಿ ಸಮಾಜದ ಒಂದು ವರ್ಗವೇ ಇಂತಹ ಕೃತ್ಯಗಳಲ್ಲಿ ತೊಡಗಿರುತ್ತವೆ. ನಾವು ಕಟ್ಟಿಕೊಂಡಿರುವ ಒಂದು ಸಮಾಜವನ್ನು ʼ ಪ್ರಬುದ್ಧ ಸಮಾಜ ʼ ಎಂದು ಬಣ್ಣಿಸಿಕೊಳ್ಳಬೇಕಾದರೆ ವ್ಯಕ್ತಿಗತ ನೆಲೆಯಲ್ಲಿ ಮತ್ತು ಸಾಮುದಾಯಿಕ ನೆಲೆಯಲ್ಲಿ ಇಂತಹ ಪಾಶವೀ ಕೃತ್ಯಗಳಿಂದ ಸಮಾಜ ಹೊರತಾಗಿರಬೇಕು. ವ್ಯಕ್ತಿ-ಕುಟುಂಬ ಮತ್ತು ಸಮಾಜದ ನಡುವೆ ಇರುವಂತಹ ಅಂತರ್-ಸಂಬಂಧಗಳನ್ನು ನಿಷ್ಕರ್ಷೆ ಮಾಡುವಾಗ, ನಮ್ಮ ಶ್ರೇಣೀಕೃತ-ವಿಘಟಿತ ಸಮಾಜದ ಮೂಲ ಲಕ್ಷಣಗಳ್ನು ಬದಿಗಿಟ್ಟು ನೋಡುವಾಗಲೂ, ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳನ್ನು ಮೌಲಿಕವಾಗಿ ಉನ್ನತ ಸ್ತರದಲ್ಲಿಟ್ಟು ಗಮನಿಸಬೇಕಾಗುತ್ತದೆ. ಹೀಗೆ ಗಮನಿಸುವಾಗ ನಮಗೆ ಕಂಡುಬರುವ ಎಲ್ಲ ರೀತಿಯ ಅಪಸವ್ಯಗಳೂ ಆ ಕ್ಷಣಕ್ಕೆ ಆಘಾತಕಾರಿ, ಖಂಡನಾರ್ಹ ಎನಿಸುವುದು ಸಹಜ.
ದುರಾದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಇಂತಹ ಆಘಾತಕಾರಿ ಘಟನೆಗಳೇ ನಮ್ಮ ನಡುವಿನ ನಿತ್ಯ ಸುದ್ದಿಯಾಗಿ ಕಂಡುಬರುತ್ತಿವೆ. ನಾವೊಂದು ಸುಶಿಕ್ಷಿತ ಅಥವಾ ನೈತಿಕವಾಗಿ ಸುಧಾರಿತ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿಕೊಳ್ಳುವ ಮುನ್ನ ಕನ್ನಡಿಯ ಮುಂದೆ ನಿಲ್ಲಬೇಕಾದ ಪರಿಸ್ಥಿತಿಯನ್ನು ಇಡೀ ಸಮಾಜವೇ, ವಿಶೇಷವಾಗಿ ಪುರುಷ ಸಮಾಜ, ಎದುರಿಸುತ್ತಿದೆ. ಕಲ್ಪಿತ ಕಥಾ ಹಂದರಗಳಲ್ಲಿ, ಪ್ರಾಚೀನ ಸಮಾಜದ ಐತಿಹ್ಯಗಳಲ್ಲಿ, ಮನರಂಜನೆಯ ಮಾಧ್ಯಮಗಳಲ್ಲಿ ಕಾಣಬೇಕಾದಂತಹ ಮನುಷ್ಯನ ಚಟುವಟಿಕೆಗಳನ್ನು, ಮಾನವ ಸಮಾಜ ಅರಗಿಸಿಕೊಳ್ಳಲಾಗದಂತಹ ಅಮಾನುಷ ಪಾಶವೀ ವರ್ತನೆಯನ್ನು ನಮ್ಮ ಕಣ್ಣೆದುರಿನಲ್ಲೇ ದಿನನಿತ್ಯ ಕಾಣುತ್ತಿರುವ ವರ್ತಮಾನದ ಸಮಾಜವನ್ನು ಹೇಗೆಂದು ಬಣ್ಣಿಸಲು ಸಾಧ್ಯ ? ʼ ಮಾನವ ಜನ್ಮ ಶ್ರೇಷ್ಠ ʼ ಎಂಬ ದಾಸವಾಣಿಯನ್ನು ನೆನೆಯುವಾಗಲೆಲ್ಲಾ, ಇಂತಹ ಸಮಾಜವನ್ನು ಕಟ್ಟುವ ʼ ಮಾನವ ಜನ್ಮ ʼದ ಶ್ರೇಷ್ಠತೆಯನ್ನಾದರೂ ಎತ್ತಲಿಂದ ಶೋಧಿಸಲು ಸಾಧ್ಯ ?
ಲಿಂಗ ಸೂಕ್ಷ್ಮತೆ–ಸಂವೇದನೆಯ ಕೊರತೆ
ಪಾಂಡವಪುರ ತಾಲ್ಲೂಕಿನ ಸರ್ಕಾರಿ ಹಾಸ್ಟೆಲ್ ಒಂದರಲ್ಲಿ ನಡೆದ ಒಂದು ಘಟನೆ ಇಷ್ಟೆಲ್ಲಾ ಜಿಜ್ಞಾಸೆ ಹುಟ್ಟುಹಾಕುತ್ತದೆ. ಮುರುಘಾ ಮಠದ ಘಟನೆ, ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ, ಹಾಥ್ರಸ್‌ನಲ್ಲಿ ರಾತ್ರೋರಾತ್ರಿ ಸದ್ದಿಲ್ಲದೆ ಸುಟ್ಟುಹೋದ ಅಮಾಯಕ ಮಹಿಳೆ ಮತ್ತು ಪಾಂಡವಪುರ ಶಾಲೆಯಿಂದ ಹೊರಬರುತ್ತಿರುವ ಆಘಾತಕಾರಿ ಮಾಹಿತಿಗಳು, ಈ ನಾಲ್ಕೂ ಘಟನೆಗಳನ್ನು ಬೌದ್ಧಿಕವಾಗಿ ಹಾಗೂ ಭೌತಿಕವಾಗಿ ಬೆಸೆಯುವಂತಹ ಒಂದು ಸಮಾನ ಎಳೆಯನ್ನು ನಾವು ಗುರುತಿಸಬಹುದಾದರೆ, ಅದು ಪಿತೃಪ್ರಧಾನ ವ್ಯವಸ್ಥೆಯ ಬೇರುಗಳಲ್ಲಿ ಕಾಣಸಿಗುತ್ತದೆ. ವ್ಯಕ್ತಿಗತ ನೆಲೆಯಲ್ಲಿ, ಸಾಂಘಿಕ ವಲಯದಲ್ಲಿ, ಸಾಂಸ್ಥಿಕ ಸ್ತರದಲ್ಲಿ ಮತ್ತು ವಿಶಾಲ ಸಾಮಾಜಿಕ ಪರಿಸರದಲ್ಲಿ ನಮಗೆ ಎದುರಾಗುತ್ತಿರುವ ಮಹಿಳಾ ದೌರ್ಜನ್ಯಗಳನ್ನು ಗಮನಿಸುತ್ತಾ ಹೋದರೆ, ನಾವು ಕಟ್ಟಿಕೊಂಡಿರುವ ʼ ಸುಸಂಸ್ಕೃತ ʼ ಎಂದು ಹೇಳಿಕೊಳ್ಳುವ ʼ ಸುಶಿಕ್ಷಿತ ʼ ಸಮಾಜದಲ್ಲಿ ಮೌಲ್ಯಗಳ ಪಾತಾಳ ಕುಸಿತದ ಪ್ರಮಾಣವೂ ಅರ್ಥವಾದೀತು. ಎಂತಹ ಸುಧಾರಿತ ಸಮಾಜದಲ್ಲಾದರೂ ಪಾತಕೀಕರಣಕ್ಕೆ ಹಾಗೂ ದೌರ್ಜನ್ಯ-ತಾರತಮ್ಯಗಳಿಗೆ ಗುರಿಯಾಗುವುದು ದುರ್ಬಲ ವರ್ಗಗಳೇ ಎನ್ನುವುದು ಚಾರಿತ್ರಿಕ ಸತ್ಯ. ಆದರೆ ಈ ದೌರ್ಬಲ್ಯವನ್ನು ಅಳೆಯುವ ಮಾನದಂಡಗಳು ಮುಖ್ಯವಾಗುತ್ತದೆ.
ಪ್ರಭುತ್ವದ ಸಮಾಜಮುಖೀ ಯೋಜನೆಗಳ ಮೂಲಕ ಸಬಲೀಕರಣಕ್ಕೊಳಗಾದ ಮಹಿಳಾ ಸಮೂಹ ಸಮಷ್ಟಿ ನೆಲೆಯಲ್ಲಿ ಸಾಧನೆಯ ಶಿಖರ ತಲುಪುತ್ತಿರುವುದು ಹೆಮ್ಮೆಯ ವಿಚಾರವೇ ಆದರೂ, ಆಕೆಯನ್ನು ವ್ಯಕ್ತಿಗತ ನೆಲೆಯಲ್ಲಿ ಆವರಿಸಿರುವ ಸಬಲೀಕರಣದ ಸರಳುಗಳಲ್ಲಿ ಪ್ರತಿಯೊಂದೂ ಸಹ ಪ್ರಾಚೀನ ಶೋಷಕ ಸಮಾಜದ ದರ್ಪ, ದಬ್ಬಾಳಿಕೆ, ಶೋಷಣೆ ಮತ್ತು ಅಮಾನುಷತೆಯನ್ನು ಪ್ರತಿನಿಧಿಸುವಂತೆ ಕಾಣುತ್ತಿದೆ. ಹಾಗಾಗಿಯೇ ಸಬಲೀಕರಣಗೊಂಡ ಮಹಿಳೆಯೂ ಅತ್ಯಾಚಾರ-ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಕೇವಲ ಆರ್ಥಿಕ ಉನ್ನತಿಯೊಂದನ್ನೇ ಸಬಲೀಕರಣದ ಮಾನದಂಡ ಎಂದು ಪರಿಭಾವಿಸುವ ಆಡಳಿತ ವ್ಯವಸ್ಥೆಯ ಮನೋಭಾವವೂ ಇದಕ್ಕೆ ಕಾರಣ ಎನಿಸುತ್ತದೆ. ಶೋಷಿತರ ಪಾಲಿಗೆ- ಶಿಕ್ಷಣ ಒಂದು ಅಸ್ತ್ರ, ಅಧ್ಯಾತ್ಮ ಒಂದು ಅನುಭೂತಿಯ ನೆಲೆ, ಧರ್ಮ ಒಂದು ಸಾಂತ್ವನದ ತಾಣ ಮತ್ತು ʼ ಸುಸಂಸ್ಕೃತ ʼಎಂದು ಪರಿಭಾವಿಸಲಾಗುವ ಸುಶಿಕ್ಷಿತ ಸಮಾಜ ಒಂದು ರಕ್ಷಣಾ ಕವಚ- ಎಂದು ವ್ಯಾಖ್ಯಾನಿಸಬಹುದಾದರೆ, ನಮ್ಮ ಸುತ್ತಲಿನ ಬೆಳವಣಿಗೆಗಳು ನಮ್ಮನ್ನು ಚಿಂತೆಗೆ ದೂಡುತ್ತವೆ.
ಏಕೆಂದರೆ ಈ ನಾಲ್ಕೂ ನೆಲೆಗಳು ಇಂದು ಸ್ತ್ರೀ ದ್ವೇಷವನ್ನು ಢಾಳಾಗಿ ಪ್ರದರ್ಶಿಸುವ ಪಿತೃಪ್ರಾಧಾನ್ಯತೆಯ ತಾಣವಾಗಿವೆ. ಒಂದೆಡೆ ಮಹಿಳಾ ಸಬಲೀಕರಣದ ಪ್ರಯತ್ನಗಳು ನಡೆಯುತ್ತಿರುವಂತೆಯೇ ಮತ್ತೊಂದೆಡೆ ಮಹಿಳಾ ಸಮೂಹವನ್ನು ʼದುರ್ಬಲʼ ಎಂದು ಬಿಂಬಿಸುವಂತಹ ಪುರುಷಾಧಿಪತ್ಯದ ಪಾಶವೀ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸಾಂಸ್ಥಿಕವಾಗಿ ಧರ್ಮ ಮತ್ತು ಅಧ್ಯಾತ್ಮವನ್ನು ಪ್ರತಿನಿಧಿಸುವ ನೆಲೆಗಳಷ್ಟೇ ಅಸುರಕ್ಷಿತವಾಗಿ, ವಿದ್ಯಾರ್ಜನೆಯ ನೆಲೆಗಳೂ ಕಾಣುತ್ತಿವೆ. ಬಾಹ್ಯ ಸಮಾಜದಲ್ಲೂ ಸಹ ಇಂದು ಸಾಮಾನ್ಯ ಮಹಿಳೆ ʼ ನಿರ್ಭಯ ʼ ನಂತರವೂ ಸಹ ನಿರ್ಭಿಡೆಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಕರಾಳ ಶಾಸನಗಳು ಪುರುಷ ಸಮಾಜವನ್ನು ಹೆದರಿಸುತ್ತಲೂ ಇಲ್ಲ. ಪೋಕ್ಸೋದಂತಹ ಕಠಿಣ ಕಾನೂನುಗಳು ಧಾರ್ಮಿಕ-ಆಧ್ಯಾತ್ಮಿಕ ಪುರುಷರನ್ನೂ ಹೆದರಿಸುತ್ತಿಲ್ಲ. ಮತ್ತೊಂದೆಡೆ ಆಧುನಿಕತೆ ಮತ್ತು ಆಧುನಿಕ ಶಿಕ್ಷಣ ಸಮಾಜಕ್ಕೆ ನೀಡುವ ನಾಗರಿಕತೆಯ ಮೌಲ್ಯಗಳು ʼ ಸುಧಾರಿತ-ಮುಂದುವರೆದ ʼ ಸಮಾಜದ ಸೂಕ್ಷ್ಮ ಸಂವೇದನೆಗಳನ್ನೂ ಪ್ರಚೋದಿಸುತ್ತಿಲ್ಲ.
ಈ ಜಿಜ್ಞಾಸೆಗಳ ನಡುವೆಯೇ ಪಾಂಡವಪುರದ ಸರ್ಕಾರಿ ಹಾಸ್ಟೆಲ್ ನಲ್ಲಿ ನಡೆದ ಘಟನೆ ನಮ್ಮ ನಿಷ್ಕ್ರಿಯ ಪ್ರಜ್ಞೆಯನ್ನು ಬಡಿದೆಬ್ಬಿಸಿದೆ. ಈ ಹಾಸ್ಟೆಲಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ, ಅಸಭ್ಯತೆಯಿಂದ ವರ್ತಿಸುತ್ತಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕನೊಬ್ಬನನ್ನು ಹಾಸ್ಟೆಲಿನ ವಿದ್ಯಾರ್ಥಿನಿಯರು ಮನಬಂದಂತೆ ಥಳಿಸಿರುವ ಘಟನೆ ಈಗ ವ್ಯಾಪಕ ಚರ್ಚೆಗೊಳಗಾಗಿದೆ. ವಿದ್ಯಾರ್ಥಿನಿಯರು ಆ ಶಿಕ್ಷಕನ ವಿರುದ್ಧ ಮಾಡಿರುವ ಆರೋಪಗಳು ಎಂತಹ ನಿಷ್ಕ್ರಿಯ ವ್ಯಕ್ತಿಯನ್ನೂ ಎಚ್ಚರಿಸುವಂತಿದೆ. ಸುತ್ತಲಿನ ಸಮಾಜದ ಬೆಳವಣಿಗೆಗಳನ್ನು ಗಮನಿಸಿದಾಗ, ಆ ಶಿಕ್ಷಕನ ಅಸಭ್ಯ-ಅಶ್ಲೀಲ ವರ್ತನೆ ಅಚ್ಚರಿಯನ್ನೇನೂ ಮೂಡಿಸುವುದಿಲ್ಲ. ಅಚ್ಚರಿ ಮೂಡಿಸುವುದು ಆ ವಿದ್ಯಾರ್ಥಿನಿಯರ ಪ್ರತಿಕ್ರಿಯೆ. ಮಡುಗಟ್ಟಿದ ಆಕ್ರೋಶ ಮಾತ್ರವೇ ಹಿಂಸಾತ್ಮಕ ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎನ್ನುವ ಮನಶ್ಶಾಸ್ತ್ರೀಯ ನಿಯಮವನ್ನು ಗಮನದಲ್ಲಿಟ್ಟು ನೋಡಿದಾಗ, ಈ ಬಾಲಕಿಯರ ಆಕ್ರೋಶದ ಹಿನ್ನೆಲೆ ಮತ್ತು ಅದರ ಹಿಂದಿನ ಆತಂಕಗಳನ್ನು ಗ್ರಹಿಸಲು ಸಾಧ್ಯ.
ಪ್ರೌಢಶಾಲೆಯ ವಿದ್ಯಾರ್ಥಿನಿಯರ ದಿಟ್ಟತನ, ಆತ್ಮಸ್ಥೈರ್ಯ ಮತ್ತು ಸಚಿವರೊಬ್ಬರ ಪರಿಭಾಷೆಯಲ್ಲಿ ಹೇಳುವುದಾದರೆ ʼ ಶೌರ್ಯ ʼ ಪ್ರಶಂಸನಾರ್ಹವೂ ಹೌದು, ಅಭಿನಂದನಾರ್ಹವೂ ಹೌದು. ಆದರೆ ಈ ಬೆನ್ನುತಟ್ಟುವ ಪ್ರಶಂಸೆಯ ಭಾವುಕತೆಯ ನಡುವೆ, ಈ ವಿದ್ಯಾರ್ಥಿನಿಯರು ಅನುಭವಿಸಿರಬಹುದಾದ ಯಾತನೆ, ವೇದನೆ ಮತ್ತು ಆತಂಕದ ಕ್ಷಣಗಳು ಜಾರಿಹೋಗದಂತೆ ಎಚ್ಚರವಹಿಸುವುದು ಸಮಾಜದ ಜವಾಬ್ದಾರಿ. ಸ್ವಪ್ರೇರಣೆಯಿಂದ ತಮ್ಮ ಮಡುಗಟ್ಟಿದ ಆಕ್ರೋಶವನ್ನು ತಡೆಯಲಾರದೆ ಆರೋಪಿ ಶಿಕ್ಷಕನನ್ನು ಸಾಮೂಹಿಕವಾಗಿ ಥಳಿಸುವ ಮೂಲಕ ಈ ಬಾಲಕಿಯರು ಪುರುಷ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶವನ್ನಂತೂ ನೀಡಿದ್ದಾರೆ. ಹೀಗೆ ಮಾಡುವ ಮೂಲಕ ವಿದ್ಯಾರ್ಥಿನಿಯರು ʼ ಕಾನೂನು ಕೈಗೆತ್ತಿಕೊಂಡಿದ್ದಾರೆಯೇ ? ʼ ಎಂಬ ಪ್ರಶ್ನೆಯೂ ಸಹಜವಾಗಿಯೇ ಮೂಡುತ್ತದೆ. ಆದರೆ ಅವರು ಯಾವ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ ? ವಿದ್ಯಾರ್ಥಿನಿಯರ ಪೋಷಕರೇ ಆರೋಪಿಸಿರುವಂತೆ “ ಈ ಹಿಂದೆಯೂ ಹಲವು ಬಾರಿ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟಿದ್ದರೂ ಅಧಿಕಾರಿಗಳು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ”. ಇದೇ ರೀತಿಯ ಆರೋಪಗಳು ಮುರುಘಾ ಮಠದ ಪ್ರಕರಣದಲ್ಲೂ ಕೇಳಿಬರುತ್ತಿವೆ.
ಸಮಾಜದ ನೈತಿಕ ಹೊಣೆಗಾರಿಕೆ:
ಅಂದರೆ ತನ್ನ ಮೇಲಿನ ದೌರ್ಜನ್ಯ, ತಾರತಮ್ಯ ಮತ್ತು ಅತ್ಯಾಚಾರಗಳನ್ನು ಮಹಿಳಾ ಸಮೂಹ ಎಲ್ಲಿಯವರೆಗೆ ಸಹಿಸಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ಸಮಾಜವನ್ನು ಕಾಡಬೇಕಲ್ಲವೇ ? ಈ ವಿದ್ಯಾರ್ಥಿನಿಯರು ಕೈಗೊಂಡ ಕ್ರಮವನ್ನು ಸಾರ್ವತ್ರೀಕರಿಸಲಾಗುವುದೇ ? ಇದೇ ರೀತಿಯ ಸ್ತ್ರೀ ದ್ವೇಷದ ಪ್ರವೃತ್ತಿಯನ್ನು ಸಾಂಸ್ಥಿಕ-ಸಾಂಘಿಕ-ಶೈಕ್ಷಣಿಕ-ಅಧಿಕಾರಶಾಹಿ ವಲಯಗಳಲ್ಲೂ ನಿರಂತರವಾಗಿ ಕಾಣುತ್ತಲೇ ಇರುವಾಗ, ಮಹಿಳಾ ಸಮೂಹ ಈ ಘಟನೆಯನ್ನು ಒಂದು ಮಾದರಿಯಂತೆ ಭಾವಿಸಲು ಸಾಧ್ಯವೇ ? ಹಾಗೇನಾದರೂ ಅದರೆ ಅದನ್ನು ಅರಾಜಕತೆ ಎಂದು ಮೂದಲಿಸುವ ಧ್ವನಿಗಳೂ ಗಟ್ಟಿಯಾಗಿ ಕೇಳಿಬರುತ್ತವೆ. ಆದರೆ ನಮ್ಮನ್ನು ಕಾಡಬೇಕಿರುವುದು ಈ ವಿದ್ಯಾರ್ಥಿನಿಯರು ಕೈಗೊಂಡ ಕ್ರಮ ಅಲ್ಲ ಬದಲಾಗಿ, ಈ ಘಟನೆಯ ಹಿಂದಿರುವ ಪುರುಷ ಸಮಾಜದ ವಿಕೃತಿ ಮತ್ತು ಅದನ್ನು ಪೋಷಿಸುವಂತಹ ಪಿತೃಪ್ರಧಾನ ಆಡಳಿತ ವ್ಯವಸ್ಥೆಯ ಪ್ರವೃತ್ತಿ. ಪಾಂಡವಪುರದ ಘಟನೆ ತಕ್ಷಣದ ಪ್ರತಿಕ್ರಿಯೆ ಅಲ್ಲ ಎನ್ನುವುದನ್ನು ಮರೆಯಕೂಡದು. ಬಾಲ್ಯಾವಸ್ಥೆಯಲ್ಲಿರುವ ಬಾಲಕಿಯರು ರೋಸಿಹೋಗುವ ಮಟ್ಟಿಗೆ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಮೇಲ್ನೋಟಕ್ಕೇ ಗುರುತಿಸಬಹುದು. ಇತ್ತೀಚೆಗಷ್ಟೇ ಮಳವಳ್ಳಿ ತಾಲ್ಲೂಕಿನ ಟ್ಯೂಷನ್ ಕೇಂದ್ರದಲ್ಲಿ 10 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಘಟನೆಯನ್ನು ಕಂಡಿದ್ದೇವೆ. ಆ ಪ್ರಕರಣದಲ್ಲೂ ಸಹ ಆರೋಪಿ ಟ್ಯೂಷನ್ ಕೇಂದ್ರದ ಹೆಣ್ಣುಮಕ್ಕಳಿಗೆ ಮತ್ತು ಶಿಕ್ಷಕಿಯರಿಗೂ ಸಹ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ.
ಅಸ್ಪೃಶ್ಯತೆಯಂತಹ ಅಮಾನುಷ ಪಾಶವೀ ವರ್ತನೆಗೂ, ಸ್ತ್ರೀ ದ್ವೇಷ ಪ್ರೇರಿತ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಂತಹ ಅಮಾನುಷ ವರ್ತನೆಗಳಿಗೂ ಇರುವ ನೇರ ಸಂಬಂಧವನ್ನು ಬಂಡವಾಳಶಾಹಿ ಆರ್ಥಿಕತೆ ಮತ್ತು ಇದನ್ನು ಪೋಷಿಸುವಂತಹ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಗುರುತಿಸಬಹುದು. ಸಾಮಾಜಿಕ-ಆರ್ಥಿಕ ಸಬಲೀಕರಣ ಮತ್ತು ನಾಗರಿಕತೆಯ ಮುನ್ನಡೆಯ ನಡುವಿನ ಸೂಕ್ಷ್ಮ ಸಂಬಂಧಗಳೂ ಇಲ್ಲಿಯೇ ವ್ಯಕ್ತವಾಗುತ್ತವೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಶತಮಾನಗಳಿಂದ ಪೋಷಿಸಿಕೊಂಡು ಬರಲಾಗುತ್ತಿರುವ ಪುರುಷಾಧಿಪತ್ಯದ ನೆಲೆಗಳು 21ನೆಯ ಶತಮಾನದಲ್ಲೂ ತನ್ನ ಮೂಲ ಬೇರುಗಳನ್ನು ಉಳಿಸಿಕೊಂಡು ವಿಸ್ತರಿಸುತ್ತಿರುವುದನ್ನು ಶ್ರದ್ಧಾವಾಲ್ಕರ್-ಹಾಥ್ರಸ್-ಮಳವಳ್ಳಿ-ಪಾಂಡವಪುರ-ಮುರುಘಾಮಠ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ನಿರಂತರ ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾಗುವ ಯಾವುದೇ ಜನಸಮೂಹದ ಸಹನೆಯ ಕಟ್ಟೆ ಒಂದು ನಿರ್ಣಾಯಕ ಘಟ್ಟದಲ್ಲಿ ಸ್ಫೋಟಿಸುವುದು ವಾಸ್ತವ. ಪಾಂಡವಪುರ ಘಟನೆಯಲ್ಲಿ ಇದನ್ನೇ ಕಂಡಿದ್ದೇವೆ.
ಈ ಘಟನೆಯನ್ನು ಕೇವಲ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನೋಡುವುದರ ಬದಲು, ನಾಗರಿಕತೆಯ ಉಚ್ಛ್ರಾಯ ಹಂತದಲ್ಲಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಎದ್ದು ಕಾಣುತ್ತಿರುವ ಒಳಬಿರುಕುಗಳ (Fault lines) ದೃಷ್ಟಿಯಿಂದ ನೋಡುವುದು ಅತ್ಯವಶ್ಯ. ಒಬ್ಬ ಆಫ್ತಾಬ್ ಅಥವಾ ಒಬ್ಬ ಶಿಕ್ಷಕನಿಗೆ ಶಿಕ್ಷೆಯಾಗುವುದರಿಂದ ಅಥವಾ ಒಂದು ಹಾಥ್ರಸ್ ಒಂದು ಮಳವಳ್ಳಿಯ ಸಂತ್ರಸ್ತೆಗೆ ನ್ಯಾಯ ದೊರೆಯುವುದರಿಂದ, ಈ ಒಳಬಿರುಕುಗಳಿಂದ ನಿರಂತರವಾಗಿ ಹೊರಹೊಮ್ಮುವ ಸಾಮಾಜಿಕ-ಸಾಂಸ್ಕೃತಿಕ ವಿಕೃತಿಗಳನ್ನು ಹೋಗಲಾಡಿಸಲಾಗುವುದಿಲ್ಲ. ಇದರಿಂದಲೇ ಉದ್ಧೀಪನಗೊಳ್ಳುವ ಪುರುಷಾಧಿಪತ್ಯದ ಮನೋಭಾವವನ್ನೂ ಕೊನೆಗೊಳಿಸಲಾಗುವುದಿಲ್ಲ. ಹೆಣ್ಣುಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣದ ಮೂಲಕ ಜೈವಿಕ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ. ಹಾಗೆಯೇ ಗಂಡುಮಕ್ಕಳಲ್ಲಿ ಲಿಂಗಸೂಕ್ಷ್ಮತೆಯನ್ನು, ಸಂವೇದನೆಯನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವಂತಹ ಕಾರ್ಯಯೋಜನೆಯ ಅವಶ್ಯಕತೆಯೂ ಇದೆ.
ಮತ್ತೊಂದೆಡೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಇರುವಂತಹ ಶಿಕ್ಷಣ, ಆರೋಗ್ಯ, ಧರ್ಮ, ಅಧ್ಯಾತ್ಮ ಮತ್ತು ಆಡಳಿತ ವಲಯಗಳನ್ನು ಪ್ರತಿನಿಧಿಸುವ ಪುರುಷರಲ್ಲೂ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ. ಹೀಗೆ ಹೇಳುವಾಗ ಯಾವುದೇ ಪ್ರಜ್ಞಾವಂತ-ಪ್ರಬುದ್ಧ ಮನಸಿಗೆ ಮುಜುಗರವಾಗುವ ಸಾಧ್ಯತೆಗಳಿವೆ. ಏಕೆಂದರೆ ನಮ್ಮನ್ನು ನಾವು ʼಪ್ರಬುದ್ಧ-ನಾಗರಿಕ-ಸುಶಿಕ್ಷಿತ-ಸಂಭಾವಿತ-ಸುಸಂಸ್ಕೃತʼ ಸಮಾಜ ಎಂದು ಬೆನ್ನುತಟ್ಟಿಕೊಳ್ಳುತ್ತೇವೆ. ಆದರೆ ಬಾಹ್ಯ ಸಮಾಜದ ಕಣ್ಣೆದುರಿನಲ್ಲೇ ನಮ್ಮ ಸುಸಂಸ್ಕೃತ ನಡೆನುಡಿಗಳು ಢಾಳಾಗಿ ಕಾಣುತ್ತಿವೆ. ಪರದೆಯ ಹಿಂದಿನ ಘೋರ, ಮುಂದಿನ ದಿನಗಳಲ್ಲಿ ಹೊರಬಂದರೂ ಅಚ್ಚರಿಯೇನಿಲ್ಲ. ಮಹಿಳೆಯನ್ನು ಮನರಂಜನೆಯ ಸರಕಿನಂತೆ, ಭೋಗ ವಸ್ತುವಾಗಿ ಬಳಸಿಕೊಳ್ಳುವ ರಜತ ಪರದೆಯ ಮೇಲಿನ ಅಪಚಾರಗಳ ಬಗ್ಗೆ ಹುಯಿಲೆಬ್ಬಿಸುವ ನಮ್ಮ ಸಮಾಜ, ಪರದೆಯ ಹಿಂದಿನ ಘೋರ ಪ್ರಪಂಚದತ್ತ ಇಣುಕಿ ನೋಡಿದರೆ, ಬಹುಶಃ ನಮ್ಮ ಸಾಮಾಜಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅರಿವು ಜಾಗೃತವಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw