ಇದು ರಾಜ್ಯ ಬಜೆಟ್ ಅಲ್ಲ, ಬಂಡಲ್ ಬಜೆಟ್: ಪೃಥ್ವಿ ರೆಡ್ಡಿ
ಸಿಎಂ ಬಸವರಾಜ ಬೊಮ್ಮಾಯಿಯವರು ಚುನಾವಣಾ ಗಿಮಿಕ್ ಗಾಗಿ ಬಂಡಲ್ ಬಜೆಟ್ ಮಂಡಿಸಿದ್ದು, ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಬಜೆಟ್ ತಯಾರಿಗೂ ಮುನ್ನ ಭೇಟಿಯಾಗಿದ್ದರೆ ವಾಸ್ತವಕ್ಕೆ ಹತ್ತಿರವಿರುವ ಬಜೆಟ್ ಮಂಡಿಸಬಹುದಿತ್ತು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
2023-24ನೇ ಸಾಲಿನ ರಾಜ್ಯ ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೃಥ್ವಿ ರೆಡ್ಡಿ, “ಬಿಜೆಪಿಯ ಚುನಾವಣಾ ಖರ್ಚಿಗಾಗಿ ವ್ಯವಸ್ಥೆ ಮಾಡಿಕೊಳ್ಳಲು ಸಿಎಂ ಬೊಮ್ಮಾಯಿಯವರು ಬಜೆಟ್ ಮಂಡಿಸಿದ್ದಾರೆ. ರೈತರಿಗೆ 3ರಿಂದ 5 ಲಕ್ಷದ ತನಕ ಬಡ್ಡಿರಹಿತ ಸಾಲ ಕೊಡುವುದಾಗಿ ಘೋಷಿಸಿ, ಮುಳುಗುತ್ತಿರುವ ದೋಣಿ ಮೇಲೆ ಇನ್ನಷ್ಟು ಭಾರ ಹೊರಿಸಿ ನಾಶ ಮಾಡಲು ಹೊರಟಿದ್ದಾರೆ. ಹೀಗೆ ರೈತರನ್ನು ಸಾಲದಲ್ಲಿ ಸಿಲುಕಿಸುವ ಬದಲು ಎಂಎಸ್‌ಪಿ, ಬೆಂಬಲ ಬೆಲೆ ಹೆಚ್ಚಿಸಬೇಕಿತ್ತು. ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಬಜೆಟ್‌ನಲ್ಲಿ ಯಾವುದೇ ಪರಿಹಾರವಿಲ್ಲ. ತರಗತಿಗಳನ್ನು ಕಟ್ಟಿದ ಮಾತ್ರಕ್ಕೆ ಶಾಲೆಗಳ ಸಮಸ್ಯೆಗಳು ಬಗೆಹರಿಯುವುದಿಲ್ಲ. ಶಿಕ್ಷಕರಿಗೆ ಉನ್ನತವಾದ ತರಬೇತಿ ನೀಡಬೇಕು. ಸಮವಸ್ತ್ರ ಕೊಡಲು ಸಾಧ್ಯವಾಗದಿರುವುದಕ್ಕೆ ಹೈಕೋರ್ಟ್ ಛೀಮಾರಿ ಹಾಕಿರುವಾಗ ಬೇರೆ ಯೋಜನೆಗಳನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ? ಅಂಗನವಾಡಿ ಮಕ್ಕಳಿಗೆ ಈ ತಿಂಗಳು ಇನ್ನೂ ಮೊಟ್ಟೆ ಹಾಗೂ ಇತರೆ ಆಹಾರ ಪೂರೈಕೆಯಾಗಿಲ್ಲ” ಎಂದು ಹೇಳಿದರು.
“ಮುಖ್ಯಮಂತ್ರಿಯವರು ಬಜೆಟ್ ಮಂಡಿಸುವುದಕ್ಕೂ ಮುನ್ನ ಫ್ರೀಡಂ ಪಾರ್ಕ್‌ಗೆ ಹೋಗಿ ಪ್ರತಿಭಟನಾನಿರತರನ್ನು ಮಾತನಾಡಿಸಿದ್ದರೆ, ಜನರ ಸಮಸ್ಯೆಗಳು ಅರಿವಿಗೆ ಬರುತ್ತಿತ್ತು. ಕಳೆದ ಬಜೆಟ್‌ನಲ್ಲಿದ್ದ ಸುಮಾರು ನೂರು ಘೋಷಣೆಗಳು ಬಾಕಿ ಉಳಿದಿದ್ದು, ಈಗ ಅದನ್ನೇ ಮತ್ತೆ ಘೋಷಣೆ ಮಾಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಗಳನ್ನು ಬೇರೆಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ. ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಕೂಡ ಘೋಷಣೆಯಿಲ್ಲ. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಪ್ರಸ್ತಾಪವಿಲ್ಲ. ತೆಂಗು ಬೆಳೆಗಾರರಿಗೆ ವಿಶೇಷ ಆರ್ಥಿಕ ವಲಯ ಘೋಷಣೆಯಾಗಿಲ್ಲ. ಎತ್ತಿನ ಹೊಳೆ, ಕೃಷ್ಣಾ ನದಿ ನೀರಿಗೆ ಸಂಬಂಧಿಸಿದ ಯಾವುದೇ ವಿಶೇಷ ಯೋಜನೆಯಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಿಗೆ ನೀರನ್ನು ಹರಿಸಲು ಎನ್.ಎಚ್.ವ್ಯಾಲಿಯ ಮೂರು ಹಂತದ ನೀರು ಶುದ್ಧೀಕರಣ ಮಾಡಲು ಯಾವುದೇ ಪ್ರಸ್ತಾಪವಿಲ್ಲ” ಎಂದು ಹೇಳಿದರು.
“ರಾಜಕೀಯ ಕಾರಣಗಳಿಗಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದನ್ನು ಬೊಮ್ಮಾಯಿಯವರು ಘೋಷಣೆ ಮಾಡಿಲ್ಲ. ಹೈಟೆಕ್ ರೇಷ್ಮೆ, ಮಾವು, ತೆಂಗು, ಹತ್ತಿ, ತೊಗರಿ ಇವುಗಳಿಗೆ ಅತ್ಯಾಧುನಿಕ ಮಾರುಕಟ್ಟೆ ಕಲ್ಪಿಸುವ ಪ್ರಸ್ತಾಪವಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ರಾಮನಗರ, ಕನಕಪುರ ಮುಂತಾದ ಜಿಲ್ಲೆಗಳಲ್ಲಿ ವಿಶೇಷ ಕೈಗಾರಿಕಾ ವಲಯ ಸ್ಥಾಪನೆ ಬಗ್ಗೆಯೂ ಬಿಜೆಟ್‌ನಲ್ಲಿ ಹೇಳಲಾಗಿಲ್ಲ. ವಿಶೇಷ ಪಾರಂಪರಿಕ ಸ್ಥಳಗಳ ವೀಕ್ಷಣೆಗೆ ಪ್ರವಾಸಿಗರನ್ನು ಆಕರ್ಷಿಸುವ ಯಾವುದೇ ವಿಶೇಷ ಯೋಜನೆಗಳಿಲ್ಲ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆಯನ್ನು ಪ್ರಕಟಿಸಿಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಮಹಾನಗರಕ್ಕೆ ಸೀಮಿತವಾಗಿರುವ ಐಟಿ ಉದ್ಯಮಗಳನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಬೆಂಗಳೂರು-ಚಾಮರಾಜನಗರ ರೈಲು ಮಾರ್ಗದ ಭೂಸ್ವಾಧೀನಕ್ಕೆ ಅನುದಾನಕ್ಕೆ ಪ್ರಸ್ತಾಪವಿಲ್ಲ. ಕೊಡಗು ರೈಲು ಮಾರ್ಗದ ಕುರಿತೂ ಪ್ರಸ್ತಾಪವಿಲ್ಲ. ಬೆಂಗಳೂರಿಗೆ ಮತ್ತೆ ಅನುದಾನ ಘೋಷಿಸುವ ಮುನ್ನ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿಗೆ ವ್ಯಯಿಸಿರುವ ಕೋಟ್ಯಂತರ ರೂಪಾಯಿ ಅನುದಾನ ಹಾಗೂ ಅದನ್ನು ಖರ್ಚು ಮಾಡಿರುವ ಕುರಿತು ಶ್ವೇತ ಪತ್ರ ಹೊರಡಿಸಬೇಕಿತ್ತು” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಬೆಳಗಾವಿಯಲ್ಲಿರುವ ಸುವರ್ಣ ಸೌಧದ ಸದ್ಬಳಕೆ ಕುರಿತು ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ತ್ರಿವಳಿ ನಗರ ರಚನೆಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ. ಆಲಮಟ್ಟಿ ಡ್ಯಾಂ ಎತ್ತರಗೊಳಿಸುವ ಪ್ರಸ್ತಾಪವಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಖಾಲಿಯಿರುವ 25,000 ಹಾಗೂ ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಘೋಷಣೆಯಿಲ್ಲ. ಗುತ್ತಿಗೆ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಮಿಷನ್ ನೌಕರರು ಮುಂತಾದವರಿಗೆ ಯಾವುದೇ ಉದ್ಯೋಗ ಭದ್ರತೆ ಘೋಷಣೆ ಮಾಡಲಾಗಿಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw