ಟೆಲಿಗ್ರಾಂ ಮೂಲಕ ಮೆಸೇಜ್ ಮಾಡಿ ಶಿಕ್ಷಕಿಯನ್ನು ಬೆದರಿಸಿ 1 ಲಕ್ಷ ಹಣ ವಸೂಲಿ: ಸಿನಿಮೀಯ ಶೈಲಿಯಲ್ಲಿ ಆರೋಪಿಯ ಬಂಧನ - Mahanayaka
4:16 AM Wednesday 5 - February 2025

ಟೆಲಿಗ್ರಾಂ ಮೂಲಕ ಮೆಸೇಜ್ ಮಾಡಿ ಶಿಕ್ಷಕಿಯನ್ನು ಬೆದರಿಸಿ 1 ಲಕ್ಷ ಹಣ ವಸೂಲಿ: ಸಿನಿಮೀಯ ಶೈಲಿಯಲ್ಲಿ ಆರೋಪಿಯ ಬಂಧನ

venur
05/08/2023

ಟೆಲಿಗ್ರಾಂ ಮೂಲಕ ಮೆಸೇಜ್ ಮಾಡಿ ಶಿಕ್ಷಕಿಯೊಬ್ಬರನ್ನು ಬೆದರಿಸಿ ಒಂದು ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ಥ್ ಹೆಬ್ಬಾರ್ (23) ಬಂಧಿತ ಆರೋಪಿ.

ಬೆಳ್ತಂಗಡಿ ತಾಲೂಕಿನ ಶಾಲಾ ಶಿಕ್ಷಕಿ ಜ್ಯೋತಿ ಎಂಬುವವರಿಗೆ ಮೂರು ಲಕ್ಷ ರೂಪಾಯಿ ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಮೂಲಕ ವ್ಯಕ್ತಿಯೋರ್ವ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಪತಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಜ್ಯೋತಿ ವೇಣೂರು ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯಾ ಜೆ. ನೇತೃತ್ವದ ತಂಡ ಆರೋಪಿಯ ಪತ್ತೆ ಕಾರ್ಯಾಚರಣೆಗಿಳಿದಿತ್ತು. ಪೊಲೀಸರ ಸೂಚನೆಯಂತೆ ಜ್ಯೋತಿ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂ ಮೆಸೇಜ್ ಕಳುಹಿಸಿ ಒಪ್ಪಿಸಿದ್ದರು. ಅದರಂತೆ ಆರೋಪಿ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಬೇಡ ಎಂದು ಮೆಸೇಜ್ ರವಾನಿಸಿ ಬೇರೊಂದು ಸ್ಥಳ ಸೂಚಿಸಿದ್ದ. ಹೀಗೆ 3-4 ಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ. ಕೊನೆಗೆ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದ.

ಅದರಂತೆ ಜ್ಯೋತಿ ಹಣದ ಕಟ್ಟನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣವನ್ನು ಹೆಕ್ಕಿಕೊಳ್ಳುತ್ತಿದ್ದಂತೆ ಮೊದಲೇ ಕಾದು ಕುಳಿತಿದ್ದ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಆತನನ್ನು ಗುಂಡೇರಿ ಸಮೀಪ ಬಂಧಿಸಿದ್ದಾರೆ.

ಆರೋಪಿಯಿಂದ ಒಂದು ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ