ಆನ್ ಲೈನ್ ಗೇಮಿಂಗ್ ಮೋಸದ ಜಾಲ: ಹೇಮಾವತಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣು - Mahanayaka
8:06 PM Thursday 26 - December 2024

ಆನ್ ಲೈನ್ ಗೇಮಿಂಗ್ ಮೋಸದ ಜಾಲ: ಹೇಮಾವತಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣು

hasana
15/08/2024

ಹಾಸನ: ಹೇಮಾವತಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ.

ಶ್ರೀನಿವಾಸ್ (43), ಆತನ ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಸಾವಿಗೆ ಶರಣಾದವರು ಎಂದು ಗುರುತಿಸಲಾಗಿದ್ದು, ಶ್ರೀನಿವಾಸ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ನಾಗಶ್ರೀ 7ನೇ ತರಗತಿಯಲ್ಲಿ ಓದುತ್ತಿದ್ದಳು. ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸಾಲ ಬಾಧೆಯಿಂದ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಕೊವಿಡ್ ಸಂದರ್ಭದಲ್ಲಿ ಕೆಲಸ ಬಿಟ್ಟು ಮನೆಗೆ ಬಂದಿದ್ದ ಶ್ರೀನಿವಾಸ ಆನ್ ಲೈನ್ ರಮ್ಮಿಯ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಇದರಿಂದಾಗಿ ಸಾಕಷ್ಟು ಸಾಲ ಮಾಡಿದ್ದ. ಸಾಲ ನೀಡಿದವರು ವಾಪಸ್ ಕೇಳಿದ ಸಂದರ್ಭದಲ್ಲಿ ಒತ್ತಡಕ್ಕೊಳಗಾಗಿ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮನೆಯಿಂದ ಹೋದ ಮೂವರು ವಾಪಸ್ ಬಂದಿರಲಿಲ್ಲ, ಹೀಗಾಗಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದರು. ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ಹೇಮಾವತಿ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಮೃತ ಪತ್ತೆಯಾಗಿತ್ತು. ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಆನ್ ಲೈನ್ ಗೇಮಿಂಗ್ ಇದೀಗ ಒಂದು ಕುಟುಂಬವನ್ನೇ ಬಲಿ ಪಡೆದಿದೆ. ಬಾಳಿ ಬದುಕಬೇಕಿದ್ದ ಆ ಬಾಲಕಿ ಏನು ತಪ್ಪು ಮಾಡಿತ್ತು ಎನ್ನುವ ಪ್ರಶ್ನೆ ಕೇಳಿ ಬಂದಿದೆ. ಆನ್ ಲೈನ್ ಗೇಮ್ ಎನ್ನುವ ಮೋಸದ ಜಾಲಕ್ಕೆ ಸಿಲುಕಬೇಡಿ ಎಂದು ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸಿದರೂ, ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ರೀತಿಯ ಜೂಜುಗಳನ್ನು ಬ್ಯಾನ್ ಮಾಡಲು ಸರ್ಕಾರ ಮುಂದಾಗಬೇಕಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ