ಟಿಕ್ ಟಾಕ್ ನಲ್ಲಿ ಲವ್: ಮದುವೆಯಾದ 7 ತಿಂಗಳಲ್ಲೇ ಯುವತಿ ಆತ್ಮಹತ್ಯೆ
ಗಂಗಾವತಿ: ಟಿಕ್ ಟಾಕ್ ನಲ್ಲಿ ಯುವಕನೊಂಡಿಗೆ ಲವ್ ಆಗಿ ಮದುವೆಯಾದ ಯುವತಿಯೋರ್ವಳು ಮದುವೆಯಾಗಿ 7 ತಿಂಗಳಿನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಸಣಪುರದಲ್ಲಿ ನಡೆದಿದ್ದು, ಗಂಡನ ಮನೆಯವರ ಕಿರುಕುಳ ಯುವತಿಯ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಮೂಲದ 22 ವರ್ಷ ವಯಸ್ಸಿನ ಯುವತಿ ಶಿಲ್ಪಾ ಹಾಗೂ ವಿಕ್ರಮ್ ಎಂಬವರಿಗೆ ಟಿಕ್ ಟಾಕ್ ನಲ್ಲಿ ಪರಿಚಯವಾಗಿತ್ತು. ಚಾಟಿಂಗ್ ನಿಂದ ಆರಂಭವಾದ ಪ್ರೀತಿ, ಮೊಬೈಲ್ ನಂಬರ್ ವಿನಿಮಯದ ವರೆಗೂ ಮುಂದುವರೆದಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ತನಗೆ ಬೇರೆ ಯುವಕನ ಜೊತೆಗೆ ಮದುವೆ ಮಾಡಲು ಮನೆಯವರು ಪ್ರಯತ್ನಿಸುತ್ತಿದ್ದಾರೆ, ತನ್ನನ್ನು ಕರೆದುಕೊಂಡು ಹೋಗುವಂತೆ ಶಿಲ್ಪಾ, ವಿಕ್ರಮ್ ಗೆ ಹೇಳಿದ್ದಳು. ಅಂತೆಯೇ ಕಳೆದ ಡಿಸೆಂಬರ್ ನಲ್ಲಿ ಇವರಿಬ್ಬರ ಮದುವೆಯೂ ನಡೆದು ಹೋಗಿತ್ತು.
ಇನ್ನೂ ಮದುವೆಯ ಬಳಿಕ ಶಿಲ್ಪಾಳ ಜಾತಿ ಬೇರೆ ಎಂದು ವಿಕ್ರಮ್ ನ ಮನೆಯವರು ತಗಾದೆ ಎತ್ತಿದ್ದರು. ಜೊತೆಗೆ ವರದಕ್ಷಿಣೆಗಾಗಿಯೂ ಪೀಡಿಸಿದ್ದರು ಎಂದು ಹೇಳಲಾಗಿದೆ. ಇದರಿಂದಾಗಿ ತೀವ್ರವಾಗಿ ನೊಂದ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಶಿಲ್ಪಾಳ ತಂದೆ ಸಂತೋಷ್ ಪೀಟರ್ಪೌಲ್ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗಳ ಸಾವಿಗೆ ಆಕೆಯ ಗಂಡ ವಿಕ್ರಮ್, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ದೂರು ನೀಡಿದ್ದಾರೆ.